ADVERTISEMENT

ಹುಣಸೂರು: ಮರದೂರು ಏತ ನೀರಾವರಿ 2ನೇ ಹಂತದ ಯೋಜನೆಗೆ ಅನುಮೋದನೆ

₹63 ಕೋಟಿ ವೆಚ್ಚದ ಯೋಜನೆ; 49 ಕೆರೆಗಳಿಗೆ ನೀರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 4:13 IST
Last Updated 26 ಸೆಪ್ಟೆಂಬರ್ 2021, 4:13 IST
ಹುಣಸೂರಿನಲ್ಲಿ ಶಾಸಕ ಮಂಜುನಾಥ್ ಮರದೂರು ಏತನೀರಾವರಿ ಯೋಜನೆಯ ನೀಲಿನಕ್ಷೆ ಪ್ರದರ್ಶಿಸಿದರು. ನಾರಾಯಣ್, ರಮೇಶ್ ಇದ್ದಾರೆ
ಹುಣಸೂರಿನಲ್ಲಿ ಶಾಸಕ ಮಂಜುನಾಥ್ ಮರದೂರು ಏತನೀರಾವರಿ ಯೋಜನೆಯ ನೀಲಿನಕ್ಷೆ ಪ್ರದರ್ಶಿಸಿದರು. ನಾರಾಯಣ್, ರಮೇಶ್ ಇದ್ದಾರೆ   

ಹುಣಸೂರು: ‘ತಾಲ್ಲೂಕಿನ ಬಹು ನಿರೀಕ್ಷಿತ₹63 ಕೋಟಿ ವೆಚ್ಚದ ಮರದೂರು ಏತ ನೀರಾವರಿ ಎರಡನೇ ಹಂತದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ’ ಎಂದು ಶಾಸಕ ಎಚ್‌.ಪಿ.ಮಂಜುನಾಥ್ ಹೇಳಿದರು.

‘ಕ್ಷೇತ್ರದ ಬೃಹತ್ ಏತನೀರಾವರಿ ಯೋಜನೆಗೆ ಕಾವೇರಿ ನೀರಾವರಿ ನಿಗಮ 2017ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಸೇರಿಸಿ ಅನುದಾನ ಕಾಯ್ದಿರಿಸಲಾಗಿತ್ತು. 2019ರಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿದ್ದರೂ ವಿಳಂಬವಾಗಿತ್ತು. ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಗಮನಕ್ಕೆ ತಂದು, ಯೋಜನೆಗೆ ಹಸಿರು ನಿಶಾನೆ ಪಡೆಯಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಲಕ್ಷ್ಮಣ ತೀರ್ಥ ನದಿಯಿಂದ ಮರದೂರು ಏತ ನೀರಾವರಿ ಯೋಜನೆ ಮೂಲಕ ಹುಣಸೂರು ತಾಲ್ಲೂಕಿನ 45 ಮತ್ತು ಎಚ್.ಡಿ.ಕೋಟೆ ತಾಲ್ಲೂಕಿನ 5 ಕೆರೆಗಳಿಗೆ ನೀರು ಪೂರೈಸಲಾಗುತ್ತದೆ. 36 ಕಿ.ಮೀ ನಾಲಾ ವ್ಯವಸ್ಥೆ ಹೊಂದಿದ್ದು, ಒಟ್ಟು 0.3 ಟಿಎಂಸಿ ಅಡಿ ನೀರು 30 ಗ್ರಾಮಗಳಿಗೆ ಬಳಕೆಯಾಗಲಿದೆ’ ಎಂದು ವಿವರಿಸಿದರು.

ADVERTISEMENT

‘ಈ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲು ಮುಖ್ಯಮಂತ್ರಿಯನ್ನು ಆಹ್ವಾನಿಸಲಾಗಿದೆ. ಒಂದು ತಿಂಗಳಲ್ಲಿ ಚಾಲನೆ ನೀಡಲಾಗುತ್ತದೆ. 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮ ಸಮ್ಮತಿಸಿದೆ’ ಎಂದರು.

‘7 ಕೆರೆಗಳಿಗೆ ನೀರು ತುಂಬಿಸುವ ನೇರಳಕುಪ್ಪೆ ಏತನೀರಾವರಿ ಯೋಜನೆಯ ಸರ್ವೆ ಕಾರ್ಯ ಸೆ.28 ರಿಂದ ನಡೆಯಲಿದ್ದು, ಒಂದೆರಡು ತಿಂಗಳಲ್ಲಿ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ದೇವರಾಜ್, ರಮೇಶ್, ಅಸ್ವಾಳು ಕೆಂಪೇಗೌಡ, ದೇವರಾಜ್ ಇದ್ದರು.

***

3 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಬಸವರಾಜ್ ಬೊಮ್ಮಾಯಿ ಅನುಮೋದನೆ ನೀಡಿದ್ದು, ಜನರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.

–ಎಚ್‌.ಪಿ.ಮಂಜುನಾಥ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.