ADVERTISEMENT

ಇ–ಸಮೀಕ್ಷೆ ವಿರುದ್ಧ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಆಕ್ರೋಶ l ಸ್ಮಾರ್ಟ್‌ಫೋನ್‌ ಖರೀದಿಗೆ ಒತ್ತಡ: ಆರೋಪ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 5:03 IST
Last Updated 28 ಮಾರ್ಚ್ 2021, 5:03 IST
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯ ಸಂಘದ ನೇತೃತ್ವದಲ್ಲಿ ಶನಿವಾರ ಆಶಾ ಕಾರ್ಯಕರ್ತೆಯರು ‘ಇ–ಸಮೀಕ್ಷೆ’ ವಿರುದ್ಧ ಪ್ರತಿಭಟನೆ ನಡೆಸಿದರು
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯ ಸಂಘದ ನೇತೃತ್ವದಲ್ಲಿ ಶನಿವಾರ ಆಶಾ ಕಾರ್ಯಕರ್ತೆಯರು ‘ಇ–ಸಮೀಕ್ಷೆ’ ವಿರುದ್ಧ ಪ್ರತಿಭಟನೆ ನಡೆಸಿದರು   

ಮೈಸೂರು: ‘ಇ–ಸಮೀಕ್ಷೆ’ ವಿರುದ್ಧ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

‘ಇ–ಸಮೀಕ್ಷೆ’ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ನಮ್ಮ ಬಳಿ ಸ್ಮಾರ್ಟ್‌ಫೋನ್‌ಗಳು ಇಲ್ಲ. ಹಾಗಿದ್ದರೂ, ಹೊಸದಾಗಿ ಖರೀದಿಸಿ ಸಮೀಕ್ಷೆ ನಡೆಸಿ ಎಂದು ಹೇಳಲಾಗುತ್ತಿದೆ. ಇದು ಸರಿಯಲ್ಲ’ ಎಂದು ಅವರು ಖಂಡಿಸಿದರು.

ಪತಿ, ಮಕ್ಕಳ ಬಳಿ ಇರುವ ಸ್ಮಾರ್ಟ್‌ಫೋನ್‌ ಮೂಲಕ ‘ಇ–ಸಮೀಕ್ಷೆ’ ನಡೆಸಿ ಎಂದು ಹೇಳುತ್ತಾರೆ. ಮೊಬೈಲ್‌ ಡೇಟಾಕ್ಕೆ ಹಣ ನೀಡುತ್ತಿಲ್ಲ. ಹೀಗಾದರೆ, ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ನಾವು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ADVERTISEMENT

‘ಇ–ಸಮೀಕ್ಷೆ’ ಮಾಡಲು ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಡೇಟಾವನ್ನು ಒದಗಿಸಬೇಕು. ಕಾರ್ಯಕರ್ತೆಯರಿಗೆ ಒತ್ತಡ ಹೇರಬಾರದು’ ಎಂದು ಆಗ್ರಹಿಸಿದರು.

ಸಮೀಕ್ಷೆ ಸಮಯದಲ್ಲಿ ಆರೋಗ್ಯ ಮತ್ತು ಕೌಟುಂಬಿಕ ವಿವರಗಳನ್ನು ಸಂಗ್ರಹಿಸಬಹುದು. ಆದರೆ, ಆರ್ಥಿಕ ಸ್ಥಿತಿಯ ಬಗ್ಗೆ ಕೇಳಿದಾಗ ಸಾರ್ವಜನಿಕರು ವಿರೋಧಿಸುತ್ತಾರೆ. ದ್ವಿಚಕ್ರ ವಾಹನ, ಟಿ.ವಿ ಇದ್ದರೆ ಬಿಪಿಎಲ್‌ ಪಡಿತರ ಚೀಟಿ ರದ್ದು ಮಾಡುತ್ತಾರೆ ಎಂದು ನಿಂದಿಸುತ್ತಾರೆ. ಹಾಗಾಗಿ, ಸಮೀಕ್ಷೆಯಲ್ಲಿ ಆರ್ಥಿಕ ವಿವರಗಳನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ಈ ಸಮೀಕ್ಷೆ ಮಾಡಲು ನಿತ್ಯ ಬಿಸಿಲಿನಲ್ಲಿ ಅಲೆದಾಡಬೇಕಾಗುತ್ತದೆ. ಇದರಿಂದ ನಮ್ಮ ಮೂಲ ಕೆಲಸಗಳಾದ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ, ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ಇತರೆ ಮೂಲ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ, ‘ಇ–ಸಮೀಕ್ಷೆ’ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.‌

ಒಂದು ವೇಳೆ ‘ಇ–ಸಮೀಕ್ಷೆ’ ಮಾಡಲೇಬೇಕು ಎಂದಾದರೆ ಅದಕ್ಕೆ ಸೂಕ್ತವಾದ ಮೊಬೈಲ್, ಡೇಟಾ, ಸಂಭಾವನೆ, ತರಬೇತಿ ನೀಡಬೇಕು. ಆರ್ಥಿಕ ಮಾಹಿತಿ ಸಂಗ್ರಹಣಾ ಕಾರ್ಯವನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ನಗರ ಘಟಕದ ಅಧ್ಯಕ್ಷರಾದ ಜಿ.ಎಸ್.ಸೀಮಾ, ಮುಖಂಡರಾದ ಸಂಧ್ಯಾ, ಭಾಗ್ಯಾ, ಮಂಜುಳಾ, ಕೋಮಲಾ, ಸುಧಾ, ನಾಗಮಣಿ, ಗಿರಿಜಮ್ಮ, ಲಕ್ಷ್ಮಿ, ಸಿದ್ಧಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.