ಮೈಸೂರು: ‘ವರ್ತಕರಾದ ರಮೇಶ್ ಕುಮಾರ್ ಮಾಲಿ, ಅವರ ಚಂದ್ರ ಪ್ರಕಾಶ್ ಮಾಲಿ ಹಣಕ್ಕಾಗಿ ಪೀಡಿಸಿ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಚಾಮರಾಜ ಮೊಹಲ್ಲಾದ ವರ್ತಕರಾದ ಬಬುತಾ ರಾಮ್ ಅವರು ದೇವರಾಜ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
‘ಮಂಗಳವಾರ ರಾತ್ರಿ 10ಕ್ಕೆ ದೇವರಾಜ ಅರಸು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಮೇಶ್ ಕುಮಾರ್ ಮತ್ತು ಚಂದ್ರ ಪ್ರಕಾಶ್ ನನ್ನನ್ನು ತಡೆದು, ನಿನ್ನ ಅಂಗಡಿಯಲ್ಲಿ ಏನು ಮಾಡುತ್ತಿದ್ದಿಯಾ ಎಂದು ನಮಗೆ ಗೊತ್ತು, ₹1 ಲಕ್ಷ ಹಣ ನೀಡದಿದ್ದರೆ ಮುಗಿಸಿ ಬಿಡುತ್ತೇನೆ ಎಂದು ಕಟರ್ ಮಿಷನ್ ತೋರಿಸಿ ಬೆದರಿಕೆ ಹಾಕಿದ್ದು, ಈ ವೇಳೆ ತಡೆಯಲು ಬಂದ ಸ್ವರೂಪ್ ರಾಮ್, ಉಮ ರಾಮ್ ಅವರೊಂದಿಗೆ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಅವರ ಮೇಲೂ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಬಬುತಾ ರಾಮ್ ತಿಳಿಸಿದ್ದಾರೆ.
ವ್ಯಾಪಾರ ಬಂದ್: ಮೈಸೂರು ಟ್ರೆಡರ್ಸ್ ಸುರಕ್ಷಾ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಸಭೆ ನಡೆಸಿದ ಸಂತೆಪೇಟೆ ಮತ್ತು ಶಿವರಾಂಪೇಟೆಯ ವರ್ತಕರು ಘಟನೆ ಖಂಡಿಸಿ ಅರ್ಧ ದಿನ ವ್ಯಾಪಾರ ವಹಿವಾಟು ಬಂದ್ ಮಾಡಿದರು. ‘ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಪೊಲೀಸರು ಕ್ರಮ ಜರುಗಿಸಿ ಗಡಿಪಾರು ಮಾಡಬೇಕು’ ಎಂದು ಸಭೆಯಲ್ಲಿ ಸೇರಿದ್ದ ವರ್ತಕರು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಪಿ.ಪ್ರಶಾಂತ್ ಗೌಡ ಮಾತನಾಡಿ, ‘ವರ್ತಕರಾದ ರಮೇಶ್ ಕುಮಾರ್ ಮಾಲಿ, ಅವರ ಚಂದ್ರ ಪ್ರಕಾಶ್ ಮಾಲಿ ಅವರು ಸಂತೆಪೇಟೆ ಮತ್ತು ಶಿವರಾಂ ಪೇಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವರ್ತಕರಿಗೆ ಕಿರುಕುಳ ನೀಡುವ ಮೂಲಕ ವ್ಯಾಪಾರ ವಹಿವಾಟಿಗೆ ಅಡ್ಡಿ ಪಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.