ADVERTISEMENT

ಮೈಸೂರು | ಆಸ್ತಿ ನೋಂದಣಿ ಸಲೀಸು: ಗರಿಗೆದರಿದ ಉದ್ಯಮ

ಇ–ಖಾತೆ ವಿತರಣೆ ಚುರುಕು; ಬಗೆಹರಿದ ಮುಡಾ ‘ಹಸ್ತಾಂತರ’ ಬಿಕ್ಕಟ್ಟು

ಆರ್.ಜಿತೇಂದ್ರ
Published 11 ಏಪ್ರಿಲ್ 2025, 4:41 IST
Last Updated 11 ಏಪ್ರಿಲ್ 2025, 4:41 IST
ಬಡಾವಣೆಯೊಂದರ ಸಾಂದರ್ಭಿಕ ಚಿತ್ರ
ಬಡಾವಣೆಯೊಂದರ ಸಾಂದರ್ಭಿಕ ಚಿತ್ರ   

ಮೈಸೂರು: ಆಸ್ತಿ ನೋಂದಣಿಗೆ ಇ–ಖಾತೆ ಕಡ್ಡಾಯ ಎಂಬ ನಿಯಮದಿಂದ ಕಳೆಗುಂದಿದ್ದ ರಿಯಲ್‌ ಎಸ್ಟೇಟ್‌ ಚಟುವಟಿಕೆಯು ಮತ್ತೆ ಹಳಿಗೆ ಮರಳಿದ್ದು, ಮಾರ್ಚ್‌ನಲ್ಲಿ ನಿರೀಕ್ಷೆಗೂ ಮೀರಿದ ವಹಿವಾಟು ನಡೆದಿದೆ ಎನ್ನುತ್ತವೆ ಉದ್ಯಮದ ಮೂಲಗಳು.

2024ರ ಅಕ್ಟೋಬರ್ 1ರಿಂದ ರಾಜ್ಯ ಸರ್ಕಾರವು ಆಸ್ತಿಗಳ ನೋಂದಣಿಗೆ ಇ–ಖಾತೆಯನ್ನು ಕಡ್ಡಾಯಗೊಳಿಸಿತ್ತು. ಸ್ಥಿರಾಸ್ತಿಗಳ ನೋಂದಣಿಯನ್ನು ಇ–ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಆದೇಶಿಸಿತ್ತು. ಸರ್ಕಾರದ ಈ ಕ್ರಮದಿಂದಾಗಿ ಆಸ್ತಿಗಳ ಕೊಡು–ಕೊಳ್ಳುವಿಕೆ ವ್ಯಾಪಾರವು ಕುಸಿದಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮದ ಮಂದಿ ತತ್ತರಿಸಿದ್ದರು.

‘ಮೈಸೂರು ನಗರವೂ ಸೇರಿದಂತೆ ಜಿಲ್ಲೆಯಲ್ಲಿನ ಶೇ 90ರಷ್ಟು ಆಸ್ತಿಗಳಿಗೆ ಇ–ಖಾತೆಯೇ ಇರಲಿಲ್ಲ. ಹೀಗಿರುವಾಗ ಸರ್ಕಾರ ಇ–ಖಾತೆ ಕಡ್ಡಾಯ ನಿಯಮ ಜಾರಿಗೆ ತಂದಿತು. ನಂತರದಲ್ಲಿ ಅಕ್ಟೋಬರ್‌ನಿಂದ ಜನವರಿವರೆಗೆ ಆಸ್ತಿಗಳ ನೋಂದಣಿ ಶೇ 50ರಷ್ಟು ಕಡಿಮೆ ಆಗಿತ್ತು’ ಎನ್ನುತ್ತಾರೆ ರಿಯಲ್‌ ಎಸ್ಟೇಟ್ ಉದ್ಯಮಿ ಹನುಮಂತು.

ADVERTISEMENT

‘ಸಾಕಷ್ಟು ಮಂದಿ ಮುಂಗಡ ಹಣ ಕೊಟ್ಟು ಒಪ್ಪಂದ ಮಾಡಿಕೊಂಡು ನೋಂದಣಿಗೆ ಕಾಯುತ್ತಿದ್ದರು. ಆದರೆ ಇ–ಖಾತೆ ಸಿಗದ ಕಾರಣಕ್ಕೆ ನೋಂದಣಿ ಸಾಧ್ಯವಾಗಿರಲಿಲ್ಲ. ಇದೀಗ ಖಾತೆ ವಿತರಣೆ ಚುರುಕಾಗಿದೆ. ನೋಂದಣಿಯೂ ಮತ್ತೆ ವೇಗ ಪಡೆದುಕೊಂಡಿದೆ. ಅದರಲ್ಲೂ ಮಾರ್ಚ್‌ನಲ್ಲಿ ಹಣಕಾಸು ವರ್ಷದ ಅಂತ್ಯದ ಕಾರಣಕ್ಕೆ ಹೆಚ್ಚು ನೋಂದಣಿ ಆಗಿವೆ’ ಎನ್ನುತ್ತಾರೆ ಅವರು.

‘ಇ–ಖಾತೆ ವಿಳಂಬವು ರಿಯಲ್‌ ಎಸ್ಟೇಟ್ ಚಟುವಟಿಕೆ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಬ್ಯಾಂಕುಗಳ ಗೃಹ ಹಾಗೂ ನಿವೇಶನ ಸಾಲ ವಿತರಣೆಯೂ ಕುಸಿದಿತ್ತು. ಸಾಮಾನ್ಯ ದಿನಗಳಲ್ಲಿ ಒಂದು ವಿಭಾಗದಿಂದ ತಿಂಗಳಿಗೆ ₹8 ಕೋಟಿಯಿಂದ ₹10 ಕೋಟಿ ವ್ಯವಹಾರ ನಡೆದರೆ, ಅಕ್ಟೋಬರ್‌ನಿಂದ ಒಂದೆರಡು ತಿಂಗಳು ಈ ಪ್ರಮಾಣ ₹4 ಕೋಟಿಯಿಂದ ₹5 ಕೋಟಿಗೆ ಇಳಿಕೆ ಆಗಿತ್ತು. ಮಾರ್ಚ್‌ನಲ್ಲಿ ಮೊದಲಿನ ಪ್ರಮಾಣದಲ್ಲೇ ಸಾಲ ನೀಡಿಕೆ ಸಾಧ್ಯವಾಗಿದೆ’ ಎನ್ನುತ್ತಾರೆ ಖಾಸಗಿ ಬ್ಯಾಂಕ್‌ ಒಂದರ ಗೃಹ ಸಾಲ ವಿಭಾಗದ ವ್ಯವಸ್ಥಾಪಕ ಸುರೇಶ್‌.

ವಿತರಣೆಯೂ ಚುರುಕು: ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆಯು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ–ಖಾತೆ ವಿತರಣೆ ಪ್ರಕ್ರಿಯೆಯು ಚುರುಕುಗೊಂಡಿದೆ.

ಮೈಸೂರು ನಗರ ಒಂದರಲ್ಲಿಯೇ 1.48 ಲಕ್ಷ ಮನೆಗಳು, 7,200 ವಾಣಿಜ್ಯ ಆಸ್ತಿಗಳು ಹಾಗೂ 25 ಸಾವಿರದಷ್ಟು ಖಾಲಿ ನಿವೇಶನಗಳೂ ಸೇರಿದಂತೆ 1.8 ಲಕ್ಷದಷ್ಟು ಸ್ಥಿರಾಸ್ತಿಗಳಿವೆ. ಇದರಲ್ಲಿ ಇ–ಖಾತೆ ಅಭಿಯಾನ ಆರಂಭವಾದಾಗಿನಿಂದ ಈವರೆಗೆ ಸುಮಾರು 30 ಸಾವಿರ ಆಸ್ತಿಗಳಿಗೆ ಇ–ಖಾತೆ ವಿತರಣೆ ಆಗಿದೆ. ಇನ್ನೂ ಸಾವಿರಾರು ಅರ್ಜಿಗಳು ಪರಿಶೀಲನೆ ಮತ್ತು ವಿಲೇವಾರಿಯ ಹಂತದಲ್ಲಿ ಇರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಇ–ಖಾತೆ ಕಡ್ಡಾಯ ಹಾಗೂ ಮುಡಾದಿಂದ ಬಡಾವಣೆಗಳ ಹಸ್ತಾಂತರ ಗೊಂದಲದಿಂದಾಗಿ ರಿಯಲ್‌ ಎಸ್ಟೇಟ್ ಉದ್ಯಮ ನಾಲ್ಕೈದು ತಿಂಗಳು ಕಳೆಗುಂದಿತ್ತು. ಇದೀಗ ಹಳಿಗೆ ಮರಳುತ್ತಿದೆ
ಹನುಮಂತು ರಿಯಲ್‌ ಎಸ್ಟೇಟ್‌ ಉದ್ಯಮಿ
ಇ–ಖಾತೆ ಕಡ್ಡಾಯ ಮಾಡಿದ್ದರಿಂದ ಆಸ್ತಿ ನೋಂದಣಿ ಕಡಿಮೆಯಾಗಿದ್ದು ಬ್ಯಾಂಕುಗಳ ಗೃಹ ಸಾಲ ಹಂಚಿಕೆಯೂ ಕಡಿಮೆ ಆಗಿತ್ತು. ಫೆಬ್ರುವರಿ–ಮಾರ್ಚ್‌ನಿಂದ ವಹಿವಾಟು ಉತ್ತಮವಾಗಿದೆ
ಸುರೇಶ್‌ ಖಾಸಗಿ ಬ್ಯಾಂಕ್‌ ಉದ್ಯೋಗಿ
ವಾಜಮಂಗಲದ ಬಡಾವಣೆಯೊಂದರಲ್ಲಿ ನಿವೇಶನ ಖರೀದಿಗೆ ಆರು ತಿಂಗಳ ಹಿಂದೆಯೇ ಒಪ್ಪಂದ ಮಾಡಿಕೊಂಡಿದ್ದು ಬಡಾವಣೆ ಹಸ್ತಾಂತರ ಗೊಂದಲದಿಂದ ನೋಂದಣಿ ಆಗಿರಲಿಲ್ಲ. ತಿಂಗಳ ಹಿಂದೆ ನೋಂದಣಿ–ಖಾತೆಯೂ ಆಗಿದೆ
ಮಹೇಂದ್ರ, ಗ್ರಾಹಕ

ಹಸ್ತಾಂತರ ಪ್ರಕ್ರಿಯೆ ಪೂರ್ಣ

2024ರ ಜುಲೈನಲ್ಲಿ ಮುಡಾದಲ್ಲಿ ಅಕ್ರಮವಾಗಿ ನಿವೇಶನಗಳ ಹಂಚಿಕೆ ಸದ್ದು ಮಾಡಿದ ದಿನದಿಂದ ಸರ್ಕಾರವು ಮುಡಾದಲ್ಲಿ ಖಾತೆ ವಿತರಣೆಗೆ ತಡೆ ನೀಡಿತ್ತು. ಇದು ಆಸ್ತಿಗಳ ನೋಂದಣಿ ಮೇಲೂ ನಕಾರಾತ್ಮಕ ಪರಿಣಾಮ ಬೀರಿತ್ತು. ನಂತರದ ನಾಲ್ಕೈದು ತಿಂಗಳು ಮುಡಾ ವ್ಯಾಪ್ತಿಯಲ್ಲಿನ 900ಕ್ಕೂ ಹೆಚ್ಚು ಬಡಾವಣೆಗಳ ಆಸ್ತಿ ನೋಂದಣಿಯೇ ಸಮಸ್ಯೆ ಆಗಿತ್ತು. ಈ ಎಲ್ಲ ಬಡಾವಣೆಗಳನ್ನು ಮುಡಾ ಹಂತಹಂತವಾಗಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಿದೆ. ಆಯಾ ಸಂಸ್ಥೆಗಳಲ್ಲಿಯೇ ಖಾತೆ ಮಾಡಿಕೊಡಲಾಗುತ್ತಿದೆ. ಹೊಸ ಖಾತೆಗಳ ವಿತರಣೆ ಜೋರಾಗಿದ್ದು ಇದರಿಂದಾಗಿ ಆಸ್ತಿಗಳ ಮಾರಾಟ ಪ್ರಕ್ರಿಯೆಯೂ ಮತ್ತೆ ಚುರುಕಾಗಿದೆ.

ನೋಂದಣಿ ಕಚೇರಿಗಳು ಫುಲ್‌ ರಷ್‌

ಮೈಸೂರು ನಗರದ 5 ಕಚೇರಿಗಳೂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 14 ಉಪ ನೋಂದಣಾಧಿಕಾರಿ ಕಚೇರಿಗಳಿದ್ದು ಅವು ಮಾರ್ಚ್‌ನಲ್ಲಿ ಉತ್ತಮ ವಹಿವಾಟು ದಾಖಲಿಸಿವೆ. ಬಹುತೇಕ ಕಡೆಗಳಲ್ಲಿ ಆಸ್ತಿ ನೋಂದಣಿಗೆ ಜನಸಂದಣಿ ಕಂಡುಬರುತ್ತಿದೆ. ನೋಂದಣಾಧಿಕಾರಿ ಕಚೇರಿಯಲ್ಲಿನ ಇತರ ಸೇವೆಗಳಿಗೂ ಬೇಡಿಕೆ ಕುದುರಿದೆ. ಇದರಿಂದ ಋಣಭಾರ ಪತ್ರ (ಇ.ಸಿ) ಸೇರಿದಂತೆ ವಿವಿಧ ಸೇವೆಗಳ ನೀಡಿಕೆಯಲ್ಲೂ ವ್ಯತ್ಯಯ ಉಂಟಾಗಿದೆ. ಈ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ ಒಂದೆರಡು ದಿನದೊಳಗೆ ಡಿಜಿಟಲ್‌ ಸಹಿವುಳ್ಳ ಇ.ಸಿ. ಸಿಗುತ್ತಿತ್ತು. ಈಗ ನಾಲ್ಕೈದು ದಿನಗಳ ನಂತರವಷ್ಟೇ ಇ.ಸಿ. ಸಿಗುತ್ತಿದೆ ಎಂದು ಗ್ರಾಹಕರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.