ಮೈಸೂರು: ಇಲ್ಲಿನ ರಾಮಾನುಜ ರಸ್ತೆಯ 12ನೇ ಕ್ರಾಸ್‌ನಲ್ಲಿ ಗುರುವಾರ ರಾತ್ರಿ ಆಟೊ ರಿಕ್ಷಾ ಅಡ್ಡಗಟ್ಟಿ ಪ್ರಯಾಣಿಕರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ರಿಕ್ಷಾದಲ್ಲಿದ್ದ ಕುಮುದಾ, ವಿಶಾಲಾಕ್ಷಿ, ರೇಣುಕಮ್ಮ, ರಾಜಣ್ಣ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದ ರಾಮು, ಆತನ ಹೆಂಡತಿ ಸೌಮ್ಯಾ, ಅಬ್ಬಯ್ಯ ಹಾಗೂ ಪ್ರಸಾದ್ ಅವರ ವಿರುದ್ಧ ಕೆ.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.
ಘಟನೆ ಹಿನ್ನೆಲೆ: ‘ಕೈಲಾಸಪುರಂ ನಿವಾಸಿ ರಾಜಣ್ಣ ತಾಲ್ಲೂಕಿನ ಮೆಲ್ಲಹಳ್ಳಿ ನಿವಾಸಿ ರಾಮಣ್ಣ ಅವರ ಅಪ್ರಾಪ್ತ ಮಗಳನ್ನು ಪ್ರೀತಿ ಮಾಡುತ್ತಿದ್ದನು. ವಿವಾಹಿತನಾದ ರಾಜಣ್ಣನ ಜೊತೆಗಿನ ಸಂಬಂಧದ ಬಗ್ಗೆ ಹುಡುಗಿಯ ಮನೆಯವರಿಗೆ ಆಕ್ರೋಶವಿತ್ತು. ಅವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಅಲ್ಲಿ ಗುರುವಾರ ಸಂಧಾನ ವಿಫಲವಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
‘ನ್ಯಾಯಾಲಯದಿಂದ ರಾಜಣ್ಣ ಹಾಗೂ ಅವರ ಕುಟುಂಬ ಆಟೊ ರಿಕ್ಷಾದಲ್ಲಿ ಹೋಗುತ್ತಿದ್ದರು. ಅವರನ್ನು ಕಾರಿನಲ್ಲಿ ಹಿಂಬಾಲಿಸಿದ ಯುವತಿಯ ಕುಟುಂಬಸ್ಥರು ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ದುಷ್ಕರ್ಮಿಗಳು ಸಾರ್ವಜನಿಕರನ್ನು ಗುರಿಯಾಗಿಸಿ ಮಾರಕಾಸ್ತ್ರಗಳನ್ನು ಝಳಪಿಸಿ ಭಯವನ್ನುಂಟು ಮಾಡಿದ್ದರು’ ಎಂದು ಮಾಹಿತಿ ನೀಡಿದ್ದಾರೆ.
ವ್ಯಕ್ತಿ ಬಂಧನ
ಮೈಸೂರು: ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಕೇರಳ ಮೂಲದ ಪಿ.ಕೆ.ಮೊಹಮ್ಮದ್ ಎಂಬಾತನನ್ನು ಪೊಲೀಸರು ರಕ್ಷಣೆ ದೃಷ್ಟಿಯಿಂದ ಬಂಧಿಸಿ, ಆತನಿಂದ ಯಾವುದೇ ರೀತಿಯ ಅಪಾಯವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಬಿಡುಗಡೆಗೊಳಿಸಿದ್ದಾರೆ.
‘ವ್ಯಕ್ತಿಯು ಮೊಹರಂ ವೇಳೆ ನಗರಕ್ಕೆ ಬಂದಿದ್ದು ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಫೋಟೊ ತೆಗೆದುಕೊಳ್ಳುತ್ತಿದ್ದ. ಈ ಸಂದರ್ಭದಲ್ಲಿ ಪೊಲೀಸರು ರಕ್ಷಣೆ ದೃಷ್ಟಿಯಿಂದ ಆತನನ್ನು ವಿಚಾರಿಸಿದ್ದರು. ಈ ಸಂದರ್ಭದಲ್ಲಿ ಸಮರ್ಪಕ ಉತ್ತರ ನೀಡದ ಕಾರಣ ಅನುಮಾನದಿಂದ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ವಿಚಾರಣೆ ವೇಳೆ ಆತನಿಂದ ಯಾವುದೇ ತೊಂದರೆ ಇಲ್ಲ ಎಂಬುದು ತಿಳಿದು ಬಂದಿದೆ. ಹಾಗಾಗಿ ಭದ್ರತಾ ಠೇವಣಿಯನ್ನು ಕಟ್ಟಿಸಿಕೊಂಡು ಬಿಡುಗಡೆಗೊಳಿಸಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.