ADVERTISEMENT

ಮೈಸೂರು | ಲಿಂಗತ್ವ ಸಮನ್ಯಾಯಕ್ಕೆ ‘ಅರಿವಿನ ಪಯಣ’

ಸಮತಾ ಅಧ್ಯಯನ ಕೇಂದ್ರದಿಂದ ಕಾಲೇಜುಗಳಲ್ಲಿ ಕಾರ್ಯಕ್ರಮ

ಎಂ.ಮಹೇಶ
Published 1 ಡಿಸೆಂಬರ್ 2022, 19:30 IST
Last Updated 1 ಡಿಸೆಂಬರ್ 2022, 19:30 IST
ಮೈಸೂರಿನ ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಅರಿವಿನ ಪಯಣ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮೈಸೂರಿನ ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಅರಿವಿನ ಪಯಣ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು   

ಮೈಸೂರು: ಸಮಾಜದಲ್ಲಿ ನಡೆಯುತ್ತಿರುವ ವಿವಿಧ ದೌರ್ಜನ್ಯಗಳನ್ನು ನಮ್ಮ ನೆಲೆಯಲ್ಲಿಯೇ ತಡೆಯುವುದು,ಪರಿಹರಿಸಿಕೊಳ್ಳುವುದು ಹಾಗೂ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಯುವಕ–ಯುವತಿಯರನ್ನು ಸಜ್ಜುಗೊಳಿಸುವ ಸದಾಶಯದೊಂದಿಗೆ ಇಲ್ಲಿನ ಸಮತಾ ಅಧ್ಯಯನ ಕೇಂದ್ರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ಲಿಂಗತ್ವ ಸಮನ್ಯಾಯದ ಬಗ್ಗೆ ಜಾಗೃತಿಗೆ ‘ಅರಿವಿನ ಪಯಣ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಹಿಳಾ ದೌರ್ಜನ್ಯ ತಡೆ ಸಮಿತಿಯ ಸಹಯೋಗದಲ್ಲಿ ನಗರದ ವಿವಿಧ ಪದವಿ ಕಾಲೇಜುಗಳಲ್ಲಿ ಈ ಉಪಕ್ರಮ ನಡೆದಿದ್ದು, ವಿದ್ಯಾರ್ಥಿ–ವಿದ್ಯಾರ್ಥಿನಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಜಯನಗರದ ಮಹಿಳಾ ಸರ್ಕಾರಿ ಕಾಲೇಜು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಜಯಲಕ್ಷ್ಮೀಪುರಂನ ಎಸ್‌ಬಿಆರ್‌ಆರ್‌ ಮಹಾಜನ ಪದವಿ ಕಾಲೇಜು, ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜು, ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನ.28ರಿಂದ 30ರವರೆಗೆ ಕಾರ್ಯಕ್ರಮ ನಡೆದಿದೆ. ಪ್ರತಿ ಕಾಲೇಜಿನಲ್ಲೂ ಸರಾಸರಿ 150 ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ADVERTISEMENT

‘ಹಿತ’ ಸಂಸ್ಥೆಯಿಂದ: ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷರೂ ಆಗಿರುವ, ನಿವೃತ್ತ ಕುಲಪತಿ ಡಾ.ಸಬಿಹಾ ಭೂಮಿಗೌಡ ಸಾರಥ್ಯದಲ್ಲಿ ಕೇಂದ್ರದವರು ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಮಂಗಳೂರಿನ ‘ಹಿತ’ ಸಂಸ್ಥೆಯ ವಾಣಿ ಪೆರಿಯೋಡಿ ಈ ಪಯಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದ್ದಾರೆ.

ಡಿ.20ರಿಂದ 23ರವರೆಗೆ ಮೈಸೂರು ನಗರ ಹಾಗೂ ಆಸುಪಾಸಿನ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ.

ಸ್ನೇಹ–ಸಮತೆಯ ಆಶಯದಲ್ಲಿ ನಡೆಯುತ್ತಿರುವ ಸಮತಾ ಅಧ್ಯಯನ ಕೇಂದ್ರವನ್ನು 2022–23ರ ಅವಧಿಯಲ್ಲಿ ಹೆಚ್ಚು ಕ್ರಿಯಾಶೀಲಗೊಳಿಸುವ ಉದ್ದೇಶದಿಂದ ಯುವಜನರಿಗೆ ಮಾರ್ಗದರ್ಶನದ ಈ ಕಾರ್ಯಕ್ರಮ ರೂಪಿಸಲಾಗಿದೆ. ಜಾತಿ, ಲಿಂಗ, ವರ್ಗ, ಬಣ್ಣದ ನೆಲೆಯಲ್ಲಿ ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಹಿಳೆಯರ ಮೇಲೆ ನಡೆಯುವ ಲೈಂಗಿಕ, ಕೌಟುಂಬಿಕ ದೌರ್ಜನ್ಯದ ಬಗ್ಗೆಯೂ ತಿಳಿಸಿಕೊಡಲಾಗುತ್ತಿದೆ. ಇದಕ್ಕಾಗಿ, ಕಿರು ಕಥೆ, ಹಾಡು, ಕಿರು ನಾಟಕಗಳ ಮೂಲಕ ಯುವತಲೆಮಾರಿನ ಎದೆಯಲ್ಲಿ ಜಾಗೃತಿಯ ಬೀಜವನ್ನು ಬಿತ್ತಲಾಗುತ್ತಿದೆ. ಎರಡು ಗಂಟೆಗಳ ಈ ಕಾರ್ಯಕ್ರಮದಲ್ಲಿ ಯುವ ಸಮುದಾಯದೊಂದಿಗೆ ಸಂವಾದದ ಮೂಲಕ ಅರಿವಿಗೆ ಪ್ರಯತ್ನಿಸಲಾಗುತ್ತಿದೆ.

ಎಳೆಯರು ಯೋಚಿಸುವಂತೆ: ‘ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಹಿಂಸೆಯನ್ನು ಸಹಿಸುವ ಪಾಠವನ್ನು ನಮ್ಮ ಸಮಾಜ ಕಲಿಸುತ್ತಿದೆ. ಇದರಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ತಿಳಿಸುತ್ತಾ ಎಳೆಯರು ಯೋಚಿಸುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ’ ಎನ್ನುತ್ತಾರೆ ಡಾ.ಸಬಿಹಾ ಭೂಮಿಗೌಡ.

‘ಹಿಂಸೆಗೆ ಒಳಗಾದವರು, ಕಾನೂನು ಅರಿವು ಪಡೆಯಲು ಮುಂದಾಗುವುದು ಮೊದಲಾದವುಗಳನ್ನು ತಿಳಿಸಿಕೊಡಲಾಗುತ್ತಿದೆ. ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಹಯೋಗವೂ ಸಿಕ್ಕದೆ. ವಿದ್ಯಾರ್ಥಿ–ವಿದ್ಯಾರ್ಥಿನಿಯರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ’ ಎಂದು ತಿಳಿಸಿದರು.

‘ಪ್ರಚಲಿತ ವಿದ್ಯಮಾನಗಳಿಗೂ ಪ್ರತಿಕ್ರಿಯಿಸುತ್ತಾರೆ. ಕಾಲೇಜುಗಳ ಉಪನ್ಯಾಸಕರು, ಅಲ್ಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಸಮತಾ ಅಧ್ಯಯನ ಕೇಂದ್ರದ ಸಂಪನ್ಮೂಲದಲ್ಲಿ ಸಂಪೂರ್ಣ ಉಚಿತವಾಗಿ ಈ ಚಟುವಟಿಕೆ ನಡೆಸಲಾಗುತ್ತಿದೆ. ಲಿಂಗತ್ವ ಸಮಾನತೆ ಮೂಡಿಸಿದರೆ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಈ ಅರಿವನ್ನು ಯುವಜನರಲ್ಲಿ ತರುವ ಆಶಯ ನಮ್ಮದಾಗಿದೆ’ ಎಂದು ಹೇಳಿದರು.

‘ತಾರತಮ್ಯವು ಯಾವ್ಯಾಯ ನೆಲೆಯಲ್ಲಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡು ಪರಿಹರಿಸಿಕೊಳ್ಳಬೇಕು. ಈ ಮೂಲಕ ಲಿಂಗತ್ವ ಸಮನ್ಯಾಯದ ಸಮಾಜ ನಿರ್ಮಾಣದ ಆಶಯ ನಮ್ಮದು’ ಎನ್ನುತ್ತಾರೆ ಅವರು.

ಪ್ರೇರಣೆ ನೀಡಿದೆ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳ ಆಲೋಚನೆ ಹಾಗೂ ಆತ್ಮವಿಶ್ವಾಸದಲ್ಲಿ ಆಗುತ್ತಿರುವ ಸಕಾರಾತ್ಮಕ ಪರಿಣಾಮ ನಮಗೆ ಪ್ರೇರಣೆಯಾಗಿದೆ.
–ಡಾ.ಸಬಿಹಾ ಭೂಮಿಗೌಡ, ಅಧ್ಯಕ್ಷೆ, ಸಮತಾ ಅಧ್ಯಯನ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.