ADVERTISEMENT

ಆಯುಧ ಪೂಜೆಗೆ ಖರೀದಿ ಜೋರು

ಬಾಳೆಕಂದು, ಬೂದಗುಂಬಳಕ್ಕೆ ಬೇಡಿಕೆ; ದುಬಾರಿಯಾದ ಹೂವುಗಳ ಧಾರಣೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 8:06 IST
Last Updated 25 ಅಕ್ಟೋಬರ್ 2020, 8:06 IST
ಜೆ.ಕೆ.ಮೈದಾನದಲ್ಲಿ ಜನರು ಶನಿವಾರ ಹೂವಿನ ಖರೀದಿಯಲ್ಲಿ ತೊಡಗಿದ್ದ ದೃಶ್ಯ
ಜೆ.ಕೆ.ಮೈದಾನದಲ್ಲಿ ಜನರು ಶನಿವಾರ ಹೂವಿನ ಖರೀದಿಯಲ್ಲಿ ತೊಡಗಿದ್ದ ದೃಶ್ಯ   

ಮೈಸೂರು: ನಗರದಲ್ಲಿ ಕೊರೊನಾ ಆತಂಕದ ನಡುವೆಯೂ ಆಯುಧ ಪೂಜೆ ಮತ್ತು ವಿಜಯದಶಮಿಗಾಗಿ ಶನಿವಾರ ಖರೀದಿಯ ಭರಾಟೆ ನಡೆಯಿತು.

ಕೋವಿಡ್‌ ಕಾರಣ ಕಳೆದ ಕೆಲವು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗಿಲ್ಲ. ಕೊರೊನಾ ಆತಂಕ ಇನ್ನೂ ದೂರವಾಗಿಲ್ಲ. ಆದರೂ ಅಯುಧ ಪೂಜೆ ಹಾಗೂ ವಿಜಯದಶಮಿಯನ್ನು ಮನೆಗಳಲ್ಲೇ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ನಡೆದಿದೆ.

ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿತ್ತು. ಪೂಜೆಗೆ ಅಗತ್ಯವಿರುವ ಹೂವು, ಹಣ್ಣು, ಬೂದುಗುಂಬಳ, ಬಾಳೆಕಂದು ಇನ್ನಿತರ ವಸ್ತುಗಳನ್ನು ಖರೀದಿಸಿದರು.

ADVERTISEMENT

ದೇವರಾಜ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ವಾಣಿ ವಿಲಾಸ ಮಾರುಕಟ್ಟೆ ಅಲ್ಲದೆ, ಅಗ್ರಹಾರ, ನಂಜುಮಳಿಗೆ, ಬಲ್ಲಾಳ್‌ ಸರ್ಕಲ್‌ ಒಳಗೊಂಡಂತೆ ನಗರದ ವಿವಿಧೆಡೆ ಜನರು ಖರೀದಿಗೆ ಮುಗಿಬಿದ್ದರು. ರಸ್ತೆ ಬದಿಗಳಲ್ಲೂ ವ್ಯಾಪಾರ ಜೋರಾಗಿ ನಡೆಯಿತು. ಅಂಗಡಿಗಳ ಮುಂದೆ ಜನದಟ್ಟಣೆ ಹೆಚ್ಚಾಗಿತ್ತು. ಖರೀದಿಯ ಭರಾಟೆಯಲ್ಲಿ ಹಲವರು ಅಂತರ ಮರೆತರು.

ಜೆ.ಕೆ.ಮೈದಾನದಲ್ಲಿ ಹೂವಿನ ವ್ಯಾಪಾರ ಮಧ್ಯಾಹ್ನದವರೆಗೆ ನೀರಸವಾಗಿ ಕಂಡರೂ, ಆ ಬಳಿಕ ಚುರುಕು ಪಡೆದುಕೊಂಡಿತು. ಕೋವಿಡ್‌ ಕಾರಣ ಪಾಲಿಕೆಯು ದೇವರಾಜ ಮಾರುಕಟ್ಟೆಯಲ್ಲಿನ ಹೂವಿನ ವ್ಯಾಪಾರವನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರಿಸಿದೆ. ಮಲ್ಲಿಗೆ ಕೆ.ಜಿಗೆ ₹ 800, ಕನಕಾಂಬರ ಕೆ.ಜಿಗೆ ₹ 700 ರಿಂದ ₹ 800, ಚೆಂಡು ಹೂವು ₹ 60ಕ್ಕೆ ಮಾರಾಟವಾಯಿತು.

ಬೂದುಗುಂಬಳಕ್ಕೆ ಎಲ್ಲ ವರ್ಷಗಳಂತೆ ಈ ಬಾರಿಯೂ ಹೆಚ್ಚಿನ ಬೇಡಿಕೆ ಕಂಡುಬಂತು. ಮೈಸೂರು ಜಿಲ್ಲೆಯ ರೈತರು ಮಾತ್ರವಲ್ಲದೆ, ಹಾಸನ, ಹೊಳೆನರಸೀಪುರದಿದಲೂ ರೈತರು ಬೂದುಗುಂಬಳ ಮಾರಾಟಕ್ಕೆ ತಂದಿದ್ದಾರೆ. ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ರಾಶಿ ಹಾಕಿ ಮಾರಾಟ ಮಾಡಿದರು.

ಈರುಳ್ಳಿ ಒಳಗೊಂಡಂತೆ ಹಬ್ಬದ ಅಡುಗೆಗೆ ಅಗತ್ಯವಿರುವ ಕೆಲವು ತರಕಾರಿ, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿರುವುದು ಗ್ರಾಹಕರ ಹೊರೆಯನ್ನು ಹೆಚ್ಚಿಸಿತು. ಈರುಳ್ಳಿ ಕೆ.ಜಿಗೆ ₹ 90, ₹ 100ಕ್ಕೆ ಮಾರಾಟವಾಯಿತು.

ಸಂಚಾರ ದಟ್ಟಣೆ: ಎಲ್ಲರೂ ಒಟ್ಟಾಗಿ ಖರೀದಿಗೆ ಮನೆಯಿಂದ ಹೊರಬಿದ್ದ ಕಾರಣ ಮಧ್ಯಾಹ್ನದ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡುಬಂತು. ಮಾರುಕಟ್ಟೆಯ ಸುತ್ತಮುತ್ತಲಿನ ರಸ್ತೆಗಳಲ್ಲೂ ವಾಹನಗಳ ಸಂಚಾರ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.