ADVERTISEMENT

ಹುಣಸೂರು | ಹದಗೆಟ್ಟ ರಸ್ತೆ; ಸಂಕಷ್ಟದಲ್ಲಿ ಸವಾರ

ಹುಣಸೂರು ನಗರ ವ್ಯಾಪ್ತಿ; 4 ವರ್ಷಗಳಿಂದ ನಡೆಯದ ದುರಸ್ತಿ ಕಾಮಗಾರಿ, ಆಕ್ರೋಶ

ಎಚ್.ಎಸ್.ಸಚ್ಚಿತ್
Published 26 ಜುಲೈ 2024, 5:40 IST
Last Updated 26 ಜುಲೈ 2024, 5:40 IST
ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜು ರಸ್ತೆ ಗುಂಡಿ ಬಿದ್ದಿರುವುದು
ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜು ರಸ್ತೆ ಗುಂಡಿ ಬಿದ್ದಿರುವುದು   

ಹುಣಸೂರು: ನಗರದಲ್ಲಿ ವಾಹನ ದಟ್ಟನೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗುಂಡಿ ಬಿದ್ದ ರಸ್ತೆಗಳ ಅವಸ್ಥೆಯೂ ಕಣ್ಣಿಗೆ ರಾಚುತ್ತಿದೆ. 4 ವರ್ಷಗಳಿಂದ ರಸ್ತೆ ದುರಸ್ತಿ ಕಾಮಗಾರಿಗಳು ನಡೆಯದಿರುವುದು, ವಾಹನ ಸವಾರರಿಗೆ ಪರದಾಟ ಉಂಟುಮಾಡಿದೆ.

ಬಿ.ಎಂ. ಹಳೆ ರಸ್ತೆ, ಕಾರ್ಖಾನೆ ರಸ್ತೆ, ಜೆ.ಎಲ್.ಬಿ. ರಸ್ತೆ, ಹಳೆ ಪೋಸ್ಟ್ ಆಫೀಸ್ ರಸ್ತೆ, ಕಿರುಜಾಜಿ ರಸ್ತೆಗಳಲ್ಲಿ ಹೇಳತೀರದಷ್ಟು ಗುಂಡಿ ನಿರ್ಮಾಣವಾಗಿವೆ. ಕೆಲ ಗುಂಡಿಗಳು ಬೈಕ್‌ ಸವಾರರಿಗಂತೂ ದೊಡ್ಡ ಸವಾಲಾಗಿದ್ದು, ಜೀವ ಕೈಯಲ್ಲಿ ಹಿಡಿದು ಸಾಗುತ್ತಿದ್ದಾರೆ.

‘ಹುಣಸೂರು ಉಪವಿಭಾಗ ಕೇಂದ್ರವಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ 2011ರ ಜನಗಣತಿ ಅನ್ವಯ 50,865 ಜನರು ವಾಸಿಸುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅನಧಿಕೃತವಾಗಿ 80 ಬಡಾವಣೆಗಳು ತಲೆ ಎತ್ತಿದ್ದು, ಇನ್ನು ಹಲವು ಬಡಾವಣೆಗಳು ನಿರ್ಮಾಣ ಹಂತದಲ್ಲಿವೆ. ಈ ಎಲ್ಲವೂ ಒಮ್ಮೆಲೆ ನಗರದ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡಿದ್ದು, ಜನಸಂಖ್ಯೆಗೆ ಅನುಗುಣವಾಗಿ ನಗರಸಭೆಯೂ ಮೂಲಸೌಲಭ್ಯ ಕಲ್ಪಿಸುತ್ತಿಲ್ಲ’ ಎಂದು ಸ್ಥಳೀಯರು ದೂರುತ್ತಿದ್ದಾರೆ.

ADVERTISEMENT

‘ನಗರಸಭೆಗೆ ಪ್ರತಿಯೊಬ್ಬರು ತೆರಿಗೆ ಪಾವತಿಸುತ್ತಿದ್ದು, ತೆರಿಗೆ ಹಣ ಬಳಸಿ ರಸ್ತೆ ದುರಸ್ತಿಗೊಳಿಸುವ ಪ್ರಯತ್ನವನ್ನು ಅಧಿಕಾರಿಗಳು ಏಕೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸುತ್ತಿದ್ದಾರೆ.

ಪಾದಚಾರಿ ರಸ್ತೆಯಿಲ್ಲ: ‘ನಗರದಲ್ಲಿ ಪಾದಚಾರಿ ರಸ್ತೆಗಳು ಮಾಯವಾಗುತ್ತಿದ್ದು, ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ರಸ್ತೆ ಆಕ್ರಮಿಸಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲಿ ತೆರಳುವಂತಾಗಿದೆ. ಬೀದಿ ವ್ಯಾಪಾರಿಗಳಿಗೆ ನಿರ್ದಿಷ್ಟ ಸ್ಥಳ ನಿಗದಿಗೊಳಿಸುವ ಕೆಲಸ ನಗರಸಭೆ ಮಾಡಬೇಕು. ಆದರೆ, ಈ ಬಗ್ಗೆ ನಗರಸಭೆ ಆಡಳಿತ ವರ್ಗ ಮೌನವಾಗಿದ್ದು, ಅವೈಜ್ಞಾನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಿದಂತಾಗಿದೆ’ ಎಂದು ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದರು.

‘ನಗರ ಬೆಳೆದಂತೆ ವಾಹನ ದಟ್ಟನೆಯೂ ಹೆಚ್ಚಾಗುತ್ತಿದ್ದು, ಮಾರುಕಟ್ಟೆ ರಸ್ತೆಯಲ್ಲಿ ವಾಹನ ನಿಲ್ಲಿಸಲು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ಪಾರ್ಕಿಂಗ್ ಸೂಚನೆಗಾಗಿ ಪೊಲೀಸ್ ಅಳವಡಿಸಿರುವ ಸಮ ಬೆಸ ದಿನಾಂಕವೂ ಕಡ್ಡಾಯವಾಗಿ ಜಾರಿಯಾಗುತ್ತಿಲ್ಲ, ನೆಪಮಾತ್ರಕ್ಕೆ ನಾಮಫಲಕ ಅಳವಡಿಸಲಾಗಿದೆ’ ಎಂದು ಸ್ಥಳೀಯ ನಿವಾಸಿ ಕೃಷ್ಣ ದೂರಿದರು.

ನಗರದ ಓಲ್ಡ್ ಪೋಸ್ಟ್ ಆಫೀಸ್ ರಸ್ತೆಯು ಹದಗೆಟ್ಟಿದ್ದು ಸಂಕಷ್ಟದಲ್ಲಿಯೇ ಬೈಕ್‌ ಸವಾರರು ಸಾಗುತ್ತಿರುವುದು

ನಗರಸಭೆ ವ್ಯಾಪ್ತಿಯಲ್ಲಿ ₹24 ಲಕ್ಷ ಅನುದಾನದಲ್ಲಿ ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದ್ದು ಮಳೆಗಾಲದ ಬಳಿಕ ಕಾಮಗಾರಿ ನಡೆಯಲಿದೆ. ನಗರೋತ್ಥಾನ ಯೋಜನೆಯಲ್ಲಿ ಬಡಾವಣೆಗಳ ರಸ್ತೆಯೂ ದುರಸ್ತಿಯಾಗಲಿದೆ

-ಮಾನಸ ಆಯುಕ್ತೆ ನಗರಸಭೆ

ಪ್ರಯೋಜನ ನೀಡದ ಡಿಸಿ ನೇತೃತ್ವದ ಸಭೆ’

‘ನಗರಸಭೆಯ ಅಧ್ಯಕ್ಷ ಸ್ಥಾನ 15 ತಿಂಗಳಿಂದ ಖಾಲಿಯಿದ್ದು ಪ್ರತಿಯೊಂದು ಕೆಲಸಕ್ಕೂ ಜಿಲ್ಲಾಧಿಕಾರಿ ಮೊರೆ ಹೋಗಬೇಕಾಗಿದೆ. ಆದರೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಎರಡು  ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ ಕಾಮಗಾರಿಗಳೂ ಅನುಷ್ಠಾನಕ್ಕೆ ಬಂದಿಲ್ಲ’ ಎಂದು ನಗರಸಭೆ ಸದಸ್ಯ ಕೃಷ್ಣರಾಜಗುಪ್ತ ದೂರಿದರು. ‘ನಗರಸಭೆ ಕಳೆದ ಅವಧಿಯ ಆಡಳಿತವನ್ನು ರಾಜಕಾರಣಕ್ಕಾಗಿ ಬಲಿ ಕೊಡಲಾಗಿದೆ. 5 ವರ್ಷಗಳಲ್ಲಿ 4 ಅಧ್ಯಕ್ಷರನ್ನು ಸ್ಥಾನಕ್ಕೆ ನಿಯೋಜಿಸುವ ಮೂಲಕ ಯಾವುದೇ ಶಾಶ್ವತ ಅಭಿವೃದ್ಧಿ ಕಾಮಗಾರಿಗಳು ನಡೆಸಲಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.