ADVERTISEMENT

ಮೈಸೂರು| ಬಹುರೂಪಿ: ಅನುರಣಿಸಿದ ಬಾಬಾಸಾಹೇಬ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 4:40 IST
Last Updated 13 ಜನವರಿ 2026, 4:40 IST
ಮೈಸೂರಿನ ರಂಗಾಯಣದಲ್ಲಿ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದ ಜನಪದ ಉತ್ಸವದಲ್ಲಿ ಸೋಮವಾರ ತಮಿಳುನಾಡಿನ ಎಸ್‌.ಕಲೈನ್ಮಣಿ, ಸಿಂಗಾರ ಷಣ್ಮುಗಂ ತಂಡದವರು ‘ತೆರುಕೂತು’ ಜಾನಪದ ನೃತ್ಯ ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೈಸೂರಿನ ರಂಗಾಯಣದಲ್ಲಿ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದ ಜನಪದ ಉತ್ಸವದಲ್ಲಿ ಸೋಮವಾರ ತಮಿಳುನಾಡಿನ ಎಸ್‌.ಕಲೈನ್ಮಣಿ, ಸಿಂಗಾರ ಷಣ್ಮುಗಂ ತಂಡದವರು ‘ತೆರುಕೂತು’ ಜಾನಪದ ನೃತ್ಯ ಪ್ರದರ್ಶಿಸಿದರು – ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.   

ಮೈಸೂರು: ಇಲ್ಲಿನ ರಂಗಾಯಣಕ್ಕೆ ಬಂದಿದ್ದ ಸಹೃದಯರು ಸೋಮವಾರ ‘ಭೀಮಯಾನ’ದ ಸ್ಮೃತಿಯಲ್ಲಿ ಮಿಂದರು. ಬಾಬಾ ಸಾಹೇಬರ ಆಶಯಗಳು ನುಡಿಚಿತ್ರಗಳಾಗಿ ಕಣ್ಮನ ಸೆಳೆದವು. ‘ವನರಂಗ’ದ ಎದುರು ಅಂಬೇಡ್ಕರ್‌ ಅವರ ‘ಶಾಹಿ’ ನೆನಪಿಸುವ ಶಿಲಾಸ್ಮಾರಕದ ಅನಾವರಣದೊಂದಿಗೆ ‘ಬಹುರೂಪಿ’ 25ರ ಸಂಭ್ರಮದ ನಾಟಕೋತ್ಸವ ಗರಿಗೆದರಿತು. 

‘ಬಹುರೂಪಿ ಬಾಬಾಸಾಹೇಬ್– ಸಮತೆಯೆಡೆಗೆ ನಡಿಗೆ’ ಆಶಯದಲ್ಲಿ ಕಟ್ಟಲಾಗಿದ್ದ ಉತ್ಸವವನ್ನು ಮಣಿಪುರದ ಹಿರಿಯ ರಂಗಕರ್ಮಿ ಹೈಸ್ನಾಂ ಸಾವಿತ್ರಿ ದೇವಿ ಸಂಜೆ ಉದ್ಘಾಟಿಸಿದರು. ಅವರಿಗೆ ಬೆಳ್ಳಿಹಬ್ಬದ ರಂಗ ಗೌರವ ನೀಡಲಾಯಿತು. 

ನಂತರ ಮಾತನಾಡಿದ ಅವರು, ರಂಗಾಯಣ ಮತ್ತು ಮಣಿಪುರ ಕಲಾಕ್ಷೇತ್ರದ ಬಾಂಧವ್ಯ ನೆನೆದರು. ‘ರಂಗ ದಿಗ್ಗಜರಾದ ಬಿ.ವಿ.ಕಾರಂತ ಮತ್ತು ಹೈಸ್ನಾಂ ಕನ್ಹಯ್ಯ ಲಾಲ್‌ ಅವರ ಮಾರ್ಗದರ್ಶನದಲ್ಲಿ ‘ರಶೋಮಾನ್’ ನಾಟಕ ಮಾಡಿದ್ದೆವು. ಮಗ ತೊಂಬಾ ಅಭಿನಯಿಸಿದ್ದ. ಕಾಲ ಕಳೆದಂತೆ ಇಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದು ಅನಿವಾರ್ಯ. ಇಬ್ಬರು ಗುರುಗಳು ಪ್ರತಿಪಾದಿಸಿದನ್ನು ಕಳೆದುಕೊಳ್ಳದೇ ಸಾಮರಸ್ಯದ ಪರಂಪರೆಯನ್ನು ಇಂದಿನ ಪೀಳಿಗೆಯವರು ಮುಂದುವರಿಸಬೇಕು’ ಎಂದರು. 

ADVERTISEMENT

ರಂಗಾಯಣ ನಿರ್ದೇಶಕ ಸತೀಶ್‌ ತಿಪಟೂರು ಮಾತನಾಡಿ, ‘ಸಂಸ್ಕೃತಿ ಎಂಬುದು ಮನರಂಜನೆಯಲ್ಲ. ಅದಿರುವುದು ಪ್ರಜ್ಞೆಯನ್ನು ರೂಪಿಸುವುದಕ್ಕಾಗಿ. ಅಂಬೇಡ್ಕರ್ ಅವರ ಗುರುತುಗಳನ್ನು ಕಟ್ಟದೇ ಹೋದರೆ, ಸಾಂಸ್ಕೃತಿಕ ರಾಜಕಾರಣದ ಒತ್ತುವರಿ ನಡೆಯುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು. 

‘ಅಂಬೇಡ್ಕರ್ ಎಂಬ ಪ್ರಜ್ಞೆಯನ್ನು ಎದುರಿಸಲಾಗದವರು ಅವರನ್ನು ತಮ್ಮದಾಗಿಸಿಕೊಳ್ಳುವ ರಾಜಕಾರಣವನ್ನು ಮಾಡುತ್ತಿದ್ದಾರೆ. ಅವರು ಜಾಗತಿಕ ಪ್ರಜ್ಞೆ, ಎಲ್ಲರ ಬೆಳಕು. ಹೀಗಾಗಿ, ಆ ಸಾಂಸ್ಕೃತಿಕ ಹೆಗ್ಗುರುತನ್ನು ಉತ್ಸವದಲ್ಲಿ ಕಟ್ಟಲಾಗಿದೆ’ ಎಂದರು. 

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್‌.ತಂಗಡಗಿ ರಂಗ ಸಂಚಿಕೆ ಬಿಡುಗಡೆ ಮಾಡಿದರು.  

ಎಚ್‌.ಜನಾರ್ದನ್, ಗೊಲ್ಲಹಳ್ಳಿ ಶಿವಪ್ರಸಾದ್, ದೇವಾನಂದ ವರಪ್ರಸಾದ್ ತಂಡದವರು ‘ಬಾಬಾ ಸಾಹೇಬ್‌– ಸಂಗೀತ ಸ್ಮೃತಿ’ ಪ್ರಸ್ತುತಪಡಿಸಿದರು.

ರಂಗಾಯಣ ಕಲಾವಿದರು ಅಭಿನಯಿಸಿದ, ಕೋಟಿಗಾನಹಳ್ಳಿ ರಾಮಯ್ಯ ರಚಿತ, ಚಿದಂಬರರಾವ್ ಜಂಬೆ ನಿರ್ದೇಶನದ ‘ಅಂಬೇಡ್ಕರ್ ಕೊಲಾಜ್’, ಬೆಂಗಳೂರಿನ ಬುತಾಯ್ ಟ್ರಸ್ಟ್‌ನ ಉಜ್ವಲ್ ರಾವ್ ನಿರ್ದೇಶನದ ‘ಬ್ಯಾಗ್ ಡ್ಯಾನ್ಸಿಂಗ್’, ಅಸ್ಸಾಂನ ಬದುಂಗ್‌ದಿಪ್ಪ ಕಲಾಕೇಂದ್ರದ ಕಲಾವಿದರು ಅಭಿನಯಿಸಿದ ‘ದದನ್‌ರಾಜಾ’ ನಾಟಕಗಳು ಪ್ರದರ್ಶನಗೊಂಡವು. ಅಂಬೇಡ್ಕರ್‌ ಆಶಯದ ಸಿನಿಮಾಗಳ ಪ್ರದರ್ಶನಕ್ಕೆ ಪ್ರೇಕ್ಷಕರು ಕಿಕ್ಕಿರಿದಿದ್ದರು. ಜ.18ರವರೆಗೆ ಉತ್ಸವ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.