ADVERTISEMENT

ಮೈಸೂರು | ‘ಬಹುರೂಪಿ’ಯಲ್ಲಿ ಭೀಮಯಾನ ಇಂದಿನಿಂದ

ರಾಷ್ಟ್ರೀಯ ನಾಟಕೋತ್ಸವಕ್ಕೆ ರಂಗಾಯಣ ಸಜ್ಜು ಅರಳಿದ ಕಲಾಲೋಕ l ಜ.18ರ ವರೆಗೆ ರಂಗಸುಗ್ಗಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 4:52 IST
Last Updated 11 ಜನವರಿ 2026, 4:52 IST
ಮೈಸೂರಿನ ಚಿಕ್ಕಗಡಿಯಾರದಲ್ಲಿ ಶನಿವಾರ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದ ಬೀದಿನಾಟಕಗಳ ಪ್ರದರ್ಶನಕ್ಕೆ ರಂಗಕರ್ಮಿ ಮೈಮ್‌ ರಮೇಶ್‌ ಚಾಲನೆ ನೀಡಿದರು. ಕೃಷ್ಣಮೂರ್ತಿ, ಸತೀಶ್‌ ತಿಪಟೂರು, ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ಮೈತ್ರಿ, ರಾಮು, ಅರಸೀಕೆರೆ ಯೋಗನಂದ, ಮಂಜುನಾಥ, ಮಹೇಶ, ಪುಷ್ಪಾ, ಕಿರಣ್‌, ಕುಮಾರ್ ಪಾಲ್ಗೊಂಡಿದ್ದರು
ಮೈಸೂರಿನ ಚಿಕ್ಕಗಡಿಯಾರದಲ್ಲಿ ಶನಿವಾರ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದ ಬೀದಿನಾಟಕಗಳ ಪ್ರದರ್ಶನಕ್ಕೆ ರಂಗಕರ್ಮಿ ಮೈಮ್‌ ರಮೇಶ್‌ ಚಾಲನೆ ನೀಡಿದರು. ಕೃಷ್ಣಮೂರ್ತಿ, ಸತೀಶ್‌ ತಿಪಟೂರು, ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ಮೈತ್ರಿ, ರಾಮು, ಅರಸೀಕೆರೆ ಯೋಗನಂದ, ಮಂಜುನಾಥ, ಮಹೇಶ, ಪುಷ್ಪಾ, ಕಿರಣ್‌, ಕುಮಾರ್ ಪಾಲ್ಗೊಂಡಿದ್ದರು   

ಮೈಸೂರು: ದಸರಾ ನಂತರ ಸಾಂಸ್ಕೃತಿಕ ನಗರಿಯ ಸಹೃದಯರನ್ನು ಸೆಳೆಯುವ ಹಬ್ಬ ‘ರಂಗಾಯಣ’ದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಭಾನುವಾರ ಆರಂಭವಾಗಲಿದ್ದು, ಜ.18ರವರೆಗೆ
ಎಲ್ಲ ರಂಗಾಸಕ್ತರನ್ನು ತಣಿಸಲು ಸಂಸ್ಥೆಯ ಅಂಗಳದ ಎಲ್ಲ ವೇದಿಕೆಗಳು ಸಜ್ಜುಗೊಂಡಿವೆ.

ಕಾರ್ಯಕ್ರಮದ ಮುನ್ನಾ ದಿನವೇ ರಂಗಾಯಣಕ್ಕೆ ವಿವಿಧ ರಾಜ್ಯಗಳ ಕಲಾವಿದರು ಆಗಮಿಸಿದ್ದು, ಶನಿವಾರ ತಾಲೀಮು ನಡೆಸಿದರು. ಸಿದ್ಧತೆಯು ಭರದಿಂದಲೇ ಪೂರ್ಣಗೊಂಡಿದ್ದು, ಅಂಗಳವು ಅಂಬೇಡ್ಕರ್‌ಮಯವಾಗಿದೆ. ಸಾಂಚಿ ಸ್ತೂಪ‍ದ ಕಮಾನುಗಳು ರಂಗಾಯಣದ ಪ್ರವೇಶದ್ವಾರದಲ್ಲಿ ನಿಂತಿವೆ. ಅಲ್ಲಿ ಬುದ್ಧ– ಭೀಮಯಾನದ ನೋಟವನ್ನು ತೆರೆದಿಡಲಾಗಿದೆ.   

ಬೆಳ್ಳಿಹಬ್ಬದ ಸಂಭ್ರಮ: ಉತ್ಸವ ಆರಂಭವಾಗಿ 25 ವರ್ಷ ತುಂಬಿದ ಕಾರಣ, ಅಂಬೇಡ್ಕರ್‌ ಜೀವನ–ಆಶಯವನ್ನು ಕೇಂದ್ರೀಕರಿಸಿ ‘ಬಹುರೂಪಿ ಬಾಬಾ ಸಾಹೇಬ್‌– ಸಮತೆಯೆಡೆಗೆ ನಡಿಗೆ’ ಆಶಯದಲ್ಲಿ ಉತ್ಸವ ಕಟ್ಟಲಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್‌‌ ಅವರನ್ನು ನಾಟಕ, ಚಲನಚಿತ್ರ, ವಿಚಾರಸಂಕಿರಣ, ಗಾಯನ,
ಜನಪದ ನೃತ್ಯದ ಮೂಲಕ ‘ಅನುಸಂಧಾನ’ ನಡೆಸಲಾಗುತ್ತಿದೆ. 

ADVERTISEMENT

ಚಲನಚಿತ್ರೋತ್ಸವ, ಜಾನಪದೋತ್ಸವಕ್ಕೆ ಚಾಲನೆ ಇಂದು: ‌ಶ್ರೀರಂಗದಲ್ಲಿ ಬಹುರೂಪಿ ಚಲನಚಿತ್ರೋತ್ಸವ 11ರಿಂದ ಆರಂಭವಾಗಲಿದ್ದು, ಬೆಳಿಗ್ಗೆ 10.30ಕ್ಕೆ ಲೇಖಕ ಬರಗೂರು ರಾಮಚಂದ್ರಪ್ಪ ಉದ್ಘಾಟಿಸುವರು. ಸಂಜೆ 6ಕ್ಕೆ ಕಿಂದರಿಜೋಗಿ ಆವರಣದಲ್ಲಿ ಜನಪದ ರಂಗ ಉತ್ಸವಕ್ಕೆ ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ್‌ ಚಾಲನೆ ನೀಡಲಿದ್ದಾರೆ. 

ಸಾವಿತ್ರಿಗೆ ರಂಗಗೌರವ: ಜ.12ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಣಿಪುರದ ರಂಗಕರ್ಮಿ ಹೈಸ್ನಾಂ ಸಾವಿತ್ರಿದೇವಿ ವನರಂಗದಲ್ಲಿ ಉತ್ಸವ ಉದ್ಘಾಟಿಸುವರು. ಇದೇ ವೇಳೆ ಸಾವಿತ್ರಿ ಅವರಿಗೆ ರಂಗಗೌರವ ನೀಡಲಾಗುತ್ತಿದೆ. 

12 ಬಹುಭಾಷಾ ನಾಟಕ
ಗಳು ಸೇರಿದಂತೆ 24 ನಾಟಕಗಳು
ಭೂಮಿಗೀತ, ವನರಂಗ, ಕಿರು
ರಂಗಮಂದಿರ ಹಾಗೂ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ. ‘ಮಕ್ಕಳ
ಬಹುರೂಪಿ’ಯನ್ನು ಕಲಾಮಂದಿರದಲ್ಲಿ
ಜ.12ರಂದು ಬೆಳಿಗ್ಗೆ 10.30ಕ್ಕೆ ರಂಗಕರ್ಮಿ ರಾಮೇಶ್ವರಿ ವರ್ಮ ಉದ್ಘಾಟಿಸಲಿದ್ದಾರೆ. 

‘ಬಣ್ಣಗಳಲ್ಲಿ ಭೀಮಯಾನ’ ಶೀರ್ಷಿಕೆ ಅಡಿ ಅಂಬೇಡ್ಕರ್‌ ಜೀವನದ ವಸ್ತು
ಪ್ರದರ್ಶನವನ್ನು ಕಲಾವಿದರು
ಅನಾವರಣಗೊಳಿಸಲಿದ್ದು, ಅದಕ್ಕೆ
ಪ್ರಕ್ರಿಯೆಗಳು ನಡೆದಿವೆ. ‘ಬಾಬಾಸಾಹೇಬ್‌ ಸಂಗೀತ ಸ್ಮೃತಿ’ಯನ್ನು ಆಯೋಜಿಸಲಾಗಿದ್ದು, ರಂಗಕರ್ಮಿ ಎಚ್‌.ಜನಾರ್ಧನ್, ಮಹಾರಾಷ್ಟ್ರದ ಅನಿರುದ್ಧ ವಂಕರ್, ಪಿಚ್ಚಳ್ಳಿ ಶ್ರೀನಿವಾಸ್, ಪಂಜಾಬ್‌ನ ಗಾಯಕಿ ಗಿನ್ನಿಮಾಹಿ ಗಾಯನ–ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುತ್ತಿದ್ದಾರೆ.  

17, 18ರಂದು ರಾಷ್ಟ್ರೀಯ ವಿಚಾರಸಂಕಿರಣ ನಡೆಯಲಿದ್ದು, ಆವರಣದಲ್ಲಿ ಪುಸ್ತಕ– ಕರಕುಶಲ– ಆಹಾರ ಮೇಳಗಳು ಮೇಳೈಸಲಿವೆ. ಅದಕ್ಕೆ ಎಲ್ಲ ಸಿದ್ಧತೆಗಳು ಅಂತಿಮಗೊಂಡಿವೆ. 

.

ಚಲನಚಿತ್ರೋತ್ಸವ ಆರಂಭ ಇಂದು  ಕಿಂದರಿಜೋಗಿಯಲ್ಲಿ ಜನಪದ ಉತ್ಸವ ನಾಳೆಯಿಂದ ನಾಟಕಗಳ ಪ್ರದರ್ಶನ 

ಹಬ್ಬಕ್ಕೆ ಬನ್ನಿ ಎಂದ ಕಲಾವಿದರು..

 ನಗರದ ಚಿಕ್ಕಗಡಿಯಾರದ ಅಂಗಳದಲ್ಲಿ ಶನಿವಾರ ಚಾಮರಾಜನಗರದ ‘ಸಪ್ತಸ್ವರ’ ತಂಡದ ಮಂಜುನಾಥ ಮಹೇಶ ಪುಷ್ಪಾ ಕಿರಣ್‌ ಶಿವಾನಿ ಕುಮಾರ್ ಭರತ್‌ ಅವರು ‘ಬೀದಿ ನಾಟಕ’ ಪ್ರಸ್ತುತಿಯ ಮೂಲಕ ಬಹುರೂಪಿಗೆ ಆಹ್ವಾನಿಸಿದರು.  ‘ಹಬ್ಬ ಹಬ್ಬ.. ಇದು ಬಾಬಾ ಸಾಹೇಬರ ಹಬ್ಬ.. ಮಕ್ಕಳ ಹಬ್ಬ ಗೆಲುವಿನ ಹಬ್ಬ ಬೆಳ್ಳಿಯ ಹಬ್ಬ ಜನಗಳ ಹಬ್ಬ.. ಝೇಂಕಾರದ ಹಬ್ಬ.. ಅರಿವಿನ ಹಬ್ಬ ತಿಳಿವಿನ ಹಬ್ಬ’ ಎನ್ನುತ್ತಾ ಮಾರುಕಟ್ಟೆಗೆ ಬಂದಿದ್ದ ಜನರನ್ನು ಸೆಳೆದರು. ಚಾಲನೆ ನೀಡಿದ ರಂಗಕರ್ಮಿ ಮೈಮ್‌ ರಮೇಶ್ ‘ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು ಬೀದಿ ನಾಟಕಗಳಲ್ಲಿ ತೊಡಗಿಸಿಕೊಳ್ಳಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಈ ಮಾಧ್ಯಮ ಅತ್ಯಂತ ಪರಿಣಾಮಕಾರಿ’ ಎಂದರು.  ‘ಬಾಬಾಸಾಹೇಬರ ಆಶಯ ಆಧರಿಸಿ ಬಹುರೂಪಿ ನಡೆಯುತ್ತಿದೆ. ಜನ ಚಳವಳಿಗಳನ್ನು ಮುನ್ನಡೆಸುವಲ್ಲಿ ಬೀದಿನಾಟಕಗಳ ಪಾತ್ರ ಹಿರಿದು. ಈ ಪ್ರಕಾರದ ಮೂಲಕ ಪ್ರಚಾರ ನಡೆಯುತ್ತಿದೆ. ಬಡವರನ್ನು ಅಂತಕರಣದಿಂದ ಕಾಣುವಂತೆ ನಾಟಕಗಳು ಮಾಡುತ್ತವೆ. ಸಾಮಾಜಿಕ ಚಿಂತನೆ ಮೂಡಿಸಲು ನಾಟಕದಿಂದ ಸಾಧ್ಯವಾಗುತ್ತದೆ’ ಎಂದು ಹೇಳಿದರು.  ಪಾಲಿಕೆ ಪರಿಸರ ಎಂಜಿನಿಯರ್ ಮೈತ್ರಿ ‘ನಗರದ ಸ್ವಚ್ಛತೆಯ ಜೊತೆಗೆ ಜನರು ಸಾಮಾಜಿಕ ಸ್ವಚ್ಛತೆಯನ್ನು ಮಾಡಬೇಕು. ಆ ಕಾರ್ಯವನ್ನು ರಂಗಾಯಣವು ಬಹುರೂಪಿ ಮೂಲಕ ಮಾಡುತ್ತಿದೆ’ ಎಂದರು.    ರಂಗಾಯಣ ನಿರ್ದೇಶಕ ಸತೀಶ್‌ ತಿಪಟೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಬಹುರೂಪಿ ಸಂಯೋಜಕ ಎಸ್‌.ರಾಮು ಅರಸೀಕೆರೆ ಯೋಗಾನಂದ ಪಾಲ್ಗೊಂಡಿದ್ದರು.  

ಬಹುರೂಪಿಯಲ್ಲಿ ಇಂದು  ಭೂಮಿಗೀತ: ಬಹುರೂಪಿ ಚಲನಚಿತ್ರೋತ್ಸವ ಉದ್ಘಾಟನೆ– ಲೇಖಕ ಬರಗೂರು ರಾಮಚಂದ್ರಪ್ಪ. ಅತಿಥಿ: ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ರಂಗ ಸಮಾಜದ ಸದಸ್ಯರಾದ ಲಕ್ಷ್ಮಿ ಚಂದ್ರಶೇಖರ್ ಎಂ.ಎಸ್‌.ಜಹಾಂಗೀರ್ ಸಂಯೋಜಕ ಕೆ.ಮನು ಅಧ್ಯಕ್ಷತೆ: ನಿರ್ದೇಶಕ ಸತೀಶ್‌ ತಿಪಟೂರು.  ಶ್ರೀರಂಗ: ಚಲನಚಿತ್ರೋತ್ಸವ ಪ್ರದರ್ಶನ. ಚಿತ್ರ: ಬಾಬಾ ಸಾಹೇಬ್ (ಮಲಯಾಳಂ) ಮಧ್ಯಾಹ್ನ 2.  ಕಿಂದರಿಜೋಗಿ: ಜನಪದ ಉತ್ಸವ ಉದ್ಘಾಟನೆ– ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ್. ಅತಿಥಿ: ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜ್ ರಂಗಕರ್ಮಿಗಳಾದ ಗೀತಾ ಸಿದ್ಧಿ ಶಶಿಧರ್ ಭಾರಿಘಾಟ್ ಡಿಂಗ್ರಿ ನರೇಶ್.  ಸಂಜೆ 6 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.