ADVERTISEMENT

‘ವಿದ್ಯಾಭ್ಯಾಸವೇ ಬದುಕಿಗೆ ದೊಡ್ಡ ಆಸರೆ’

ಬಣಜಿಗ (ಬಲಿಜ) ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:45 IST
Last Updated 14 ಅಕ್ಟೋಬರ್ 2025, 4:45 IST
<div class="paragraphs"><p>ಮೈಸೂರಿನ ಬಣಜಿಗ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ </p></div>

ಮೈಸೂರಿನ ಬಣಜಿಗ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ

   

ಮೈಸೂರು: ‘ಅನ್ನದಾಸೋಹ ಮಾಡಿದರೆ ಒಂದೆರಡು ಹೊತ್ತು ಸಹಾಯ ಆಗುತ್ತದೆ. ಆದರೆ, ವಿದ್ಯಾರ್ಥಿನಿಲಯಗಳು ಸ್ಥಾಪನೆಯಾದರೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗುತ್ತದೆ. ಇಂತಹ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಮಾಜಿ ಸಚಿವ ಎಂ.ಆರ್. ಸೀತಾರಾಮ್‌ ಹೇಳಿದರು.

ಇಲ್ಲಿನ ಸರಸ್ವತಿಪುರಂನ ಬಣಜಿಗ ಸಮುದಾಯದ ವಿದ್ಯಾರ್ಥಿನಿಲಯದಲ್ಲಿ ಯೋಗಿನಾರೇಯಣ ಬಣಜಿಗ ( ಬಲಿಜ) ಸಂಘವು ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಧು–ವರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಮಕ್ಕಳಿಗೆ ಪೋಷಕರು ಕೊಡುವ ವಿದ್ಯಾಭ್ಯಾಸವೇ ಬದುಕಿಗೆ ದೊಡ್ಡ ಆಸರೆ. ಬೆಂಗಳೂರಿನ ವಿದ್ಯಾರ್ಥಿನಿಲಯದಲ್ಲಿ ಪ್ರತಿ ವರ್ಷ ಸಮುದಾಯದ 500-600 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮೈಸೂರಿನ ಈ ವಿದ್ಯಾರ್ಥಿನಿಲಯದಲ್ಲಿ 40 ವಿದ್ಯಾರ್ಥಿ ಹಾಗೂ 30 ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯ ಸಿಕ್ಕಿದೆ’ ಎಂದರು.

‘ನಾರಾಯಣ ಹಾಗೂ ಎಚ್‌.ಎ. ವೆಂಕಟೇಶ್‌ ನೇತೃತ್ವದಲ್ಲಿ ಇಲ್ಲಿನ ವಿದ್ಯಾರ್ಥಿನಿಲಯವು ಸಮರ್ಥವಾಗಿ ಮುನ್ನಡೆದಿದೆ. ಹಳೇ ಕಟ್ಟಡದ ಮೇಲ್ಭಾಗದ ಮೊದಲ ಅಂತಸ್ತು ನಿರ್ಮಾಣಕ್ಕೆ ನೆರವು ನೀಡಲಾಗುವುದು’ ಎಂದು ತಿಳಿಸಿದರು.

ಸಂಘದ ಗೌರವ ಅಧ್ಯಕ್ಷ ಎಚ್.ಎ. ವೆಂಕಟೇಶ್ ಮಾತನಾಡಿ, ‘ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿನಿಲಯಗಳು ದೇವಾಲಯಕ್ಕಿಂತ ಶ್ರೇಷ್ಠವಾದವು. ಎಂ.ಆರ್. ಸೀತಾರಾಮ್‌ ಅವರ ನೆರವಿನಿಂದ ಇಲ್ಲಿನ ವಿದ್ಯಾರ್ಥಿನಿಲಯದ ಒಂದು ಭಾಗ ನವೀಕರಣಗೊಂಡಿದ್ದು, 30 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇಡೀ ವಿದ್ಯಾರ್ಥಿನಿಲಯವನ್ನು ಅವರೇ ನಿರ್ವಹಣೆ ಮಾಡಿಕೊಡಬೇಕು’ ಎಂದು ಕೋರಿದರು.

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಜಿ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು.

ಮಂಡ್ಯದ ಸರ್ವ ಬಣಜಿಗ (ಬಲಿಜ) ಸಂಘದ ಅಧ್ಯಕ್ಷ ಕೆ.ಎನ್‌. ಮೋಹನ್‌ಕುಮಾರ್, ಚಾಮರಾಜನಗರದ ದಾಸಬಣಜಿಗರ ಸಂಘದ ಅಧ್ಯಕ್ಷ ಸಿ.ಜಿ. ಚಂದ್ರಶೇಖರ್, ಸಮುದಾಯದ ಮುಖಂಡರಾದ ಚಿಕ್ಕನಾಯಕನಹಳ್ಳಿ ರಮೇಶ್‌, ಹರೀಶ್‌ ಜೋಡಿದಾರ್, ಹನುಮಾನ್, ಮಂಡ್ಯ ಸಂಘದ ಪದಾಧಿಕಾರಿಗಳಾದ ಪಾಂಡುರಂಗ, ಆರ್. ಬಾಲರಾಜು, ಎಂ. ನಾಗರಾಜು, ಟಿ.ಎಸ್. ರಮೇಶ್, ಮೈಸೂರು ಸಂಘದ ಉಪಾಧ್ಯಕ್ಷ ಜಿ.ರಮೇಶ್, ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ, ಸಹ ಕಾರ್ಯದರ್ಶಿ ಚೆಲುವರಾಜು, ಖಜಾಂಚಿ ಕೆ. ಚಂದ್ರಶೇಖರ ಹಾಗೂ ನಿರ್ದೇಶಕರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.