ADVERTISEMENT

ಸರ್ಕಾರಿ ನೇಮಕಾತಿಗೆ ತಡೆ; ವಿರೋಧ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 14:38 IST
Last Updated 7 ಜುಲೈ 2020, 14:38 IST

ಮೈಸೂರು: ಕೋವಿಡ್–19 ನಿಯಂತ್ರಣದ ನೆಪದಲ್ಲಿ, ‘ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಎಲ್ಲಾ ನೇರ ನೇಮಕಾತಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿದೆ’ ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಸ್‌.ಎನ್.ಪ್ರಸಾದ್ ಸುತ್ತೋಲೆ ಹೊರಡಿಸಿರುವುದಕ್ಕೆ ವಿದ್ಯಾರ್ಥಿ ಬಂಧುತ್ವ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

‘ರಾಜ್ಯ ಸರ್ಕಾರದ ಕ್ರಮ ಕಲ್ಯಾಣ ಕರ್ನಾಟಕದ ವಿರೋಧಿ ಮನೋಭಾವ ಪ್ರದರ್ಶಿಸುತ್ತದೆ. ಈ ಭಾಗದ ಸರ್ಕಾರಿ ಕಚೇರಿಗಳಲ್ಲಿ ಅಗತ್ಯ ನೌಕರರಿಲ್ಲದೆ ಕೆಲಸಗಳೇ ಆಗುತ್ತಿಲ್ಲ. ನಿತ್ಯವೂ ಜನರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಅರ್ಹ ನಿರುದ್ಯೋಗಿ ಯುವ ಸಮೂಹ ಕೆಲಸದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ’ ಎಂದಿದೆ.

‘ಮೂರ್ತಿ ಪ್ರತಿಷ್ಠಾಪನೆ, ಶ್ರೀಮಂತ ಬಂಡವಾಳಗಾರರ ಸಾಲ ಮನ್ನಾ, ರಿಯಾಯಿತಿ, ಶಾಸಕ-ಸಂಸದರಿಗೆ ಸೌಲಭ್ಯ ಹೆಚ್ಚಿಸಲು ಜನರ ತೆರಿಗೆಯ ಹಣವನ್ನು ಬೇಕಾಬಿಟ್ಟಿ ಬಳಸುವ ಸರ್ಕಾರ ಅಗತ್ಯ ನೇಮಕಾತಿ ತಡೆ ಹಿಡಿಯುತ್ತಿರುವುದು ತಮ್ಮೊಳಗಿನ ಪ್ರಾದೇಶಿಕ ಅಸಮಾನತೆಯನ್ನು ಬಹಿರಂಗ ಪಡಿಸಿಕೊಂಡಿದೆ. ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮಾನತೆಯ ದೃಷ್ಟಿಯಿಂದ ಕಲ್ಯಾಣ ಕರ್ನಾಟಕದ ಹುದ್ದೆಗಳ ನೇಮಕಾತಿ ಹಾಗೂ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಯ ಅಗತ್ಯವಿದೆ’ ಎಂದು ‍ಪ್ರತಿಪಾದಿಸಿದೆ.

ADVERTISEMENT

‘ನಾಡಿನ ಅಭಿವೃದ್ಧಿ ಮತ್ತು ಯುವಜನ ವಿರೋಧಿ ನಿಲುವಿನಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು. ತಕ್ಷಣದಿಂದಲೇ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ಕೊಡಬೇಕು. ಇಲ್ಲದಿದ್ದರೆ ರಾಜ್ಯ ವ್ಯಾಪಿ ಪ್ರಬಲ ಹೋರಾಟವನ್ನು ಸಂಘಟಿಸಲಿದ್ದೇವೆ’ ಎಂದು ವೇದಿಕೆಯ ರಾಜ್ಯ ಸಂಚಾಲಕ ತೋಳಿ ಭರಮಣ್ಣ, ಮೈಸೂರು ಪ್ರಾಂತೀಯ ಸಂಚಾಲಕ ಬಂಡಳ್ಳಿ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.