ADVERTISEMENT

ಮೈಸೂರು: ಸಾಹಿತಿ ಹಾಗೂ ಭಾಷಾವಿಜ್ಞಾನಿ ಬಿ.ಬಿ. ರಾಜಪುರೋಹಿತ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 13:56 IST
Last Updated 23 ಜೂನ್ 2020, 13:56 IST
ಸಾಹಿತಿ ಹಾಗೂ ಭಾಷಾವಿಜ್ಞಾನಿ ಡಾ. ಬಿ.ಬಿ. ರಾಜಪುರೋಹಿತ
ಸಾಹಿತಿ ಹಾಗೂ ಭಾಷಾವಿಜ್ಞಾನಿ ಡಾ. ಬಿ.ಬಿ. ರಾಜಪುರೋಹಿತ   

ಮೈಸೂರು: ಸಾಹಿತಿ ಹಾಗೂ ಭಾಷಾವಿಜ್ಞಾನಿ, ಡಾ.ಬಿ.ಬಿ.ರಾಜಪುರೋಹಿತ (85) ಅವರು ಮಂಗಳವಾರ ಇಲ್ಲಿನ ಸರಸ್ವತಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಇವರ ಇಬ್ಬರು ಪುತ್ರಿಯರಾದ ಕಲ್ಪನಾ ಮತ್ತು ವಂದನಾ ಅಮೆರಿಕದಲ್ಲಿದ್ದು, ಕೊರೊನಾ ಸಂಕಷ್ಟದಿಂದ ಬರಲಾಗಲಿಲ್ಲ. ಇವರ ಸಮೀಪದ ಬಂಧುಗಳು ಗೋಕುಲಂನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.

ವರಕವಿ ಬೇಂದ್ರೆ ಅವರ ಶಿಷ್ಯರಾಗಿದ್ದ ಭೀಮಾಜಿ ಬಂಡೋ ರಾಜಪುರೋಹಿತ ಮತ್ತು ಸಾವಿತ್ರಿಬಾಯಿ ಅವರ ಪುತ್ರರಾದ ಇವರು, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ 1935ರ ಮೇ 20ರಂದು ಜನಿಸಿದರು. ‌

ADVERTISEMENT

ಕೇರಳ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ ಉಪನ್ಯಾಸಕರಾಗಿ, ಭಾರತೀಯ ಭಾಷಾ ಸಂಸ್ಥಾನದಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ನಂತರ, ಜಪಾನಿನ ಟೋಕಿಯೊ ಯೂನಿವರ್ಸಿಟಿ ಆಫ್ ಫಾರಿನ್ ಸ್ಟಡೀಸ್‌ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಸ್ಥಳನಾಮಗಳು ಮತ್ತು ಭಾಷಾವಿಜ್ಞಾನ ಕುರಿತು ಇಂಗ್ಲಿಷ್‌ನಲ್ಲಿ 10 ಕೃತಿಗಳನ್ನು, ವಚನ ಸಾಹಿತ್ಯ ಕುರಿತು ಕನ್ನಡದಲ್ಲಿ 4 ಹಾಗೂ ಇತರ 10 ಸಾಹಿತ್ಯಕ ಕೃತಿಗಳನ್ನು ರಚಿಸಿದ್ದಾರೆ. 250ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ದ.ರಾ. ಬೇಂದ್ರೆ ಸಾಹಿತ್ಯ ಕುರಿತು ‘ಬೇಂದ್ರೆ ಸಮಗ್ರ ಕಾವ್ಯ ನಿಘಂಟು’, ‘ಬೇಂದ್ರೆ ಕಾವ್ಯದ ವ್ಯಾಕರಣ’, ‘ಬೇಂದ್ರೆ ಕಾವ್ಯದ ನುಡಿಗಟ್ಟು ಕೋಶ’, ‘ಬೇಂದ್ರೆ ಕಾವ್ಯದಲ್ಲಿ ಪ್ರತಿಮೆ, ಪ್ರತೀಕ ಮತ್ತು ಅಲಂಕಾರ’, ‘ಬೇಂದ್ರೆ ಕಾವ್ಯದ ಜೀವಕೋಶ’ ಎಂಬ ಕೃತಿಗಳನ್ನು ರಚಿಸಿದ್ದಾರೆ.

ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ನೀಡುವ 2012ನೇ ಸಾಲಿನ ಅಂಬಿಕಾತನಯ ದತ್ತ ಪ್ರಶಸ್ತಿ ಹಾಗೂ ಬೇಂದ್ರೆ ಸಂಶೋಧನಾ ಸಂಸ್ಥೆಯ ‘ಬೇಂದ್ರೆ ಭಾಷಾಶಾಸ್ತ್ರ ರತ್ನ’ ಗೌರವಕ್ಕೆ ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.