ADVERTISEMENT

ಪದವಿ ಕಾಲೇಜು ಆರಂಭ: ಸ್ವಾಗತ–ಸವಾಲು

ಕೋವಿಡ್‌ ಮಾರ್ಗಸೂಚಿ, ವಿಶ್ವವಿದ್ಯಾಲಯದ ಅಧಿಸೂಚನೆಯತ್ತ ಎಲ್ಲರ ಚಿತ್ತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 2:45 IST
Last Updated 24 ಅಕ್ಟೋಬರ್ 2020, 2:45 IST
ಶಿವಾನಂದ ಸಿಂಧನಕೇರಾ
ಶಿವಾನಂದ ಸಿಂಧನಕೇರಾ   

ಮೈಸೂರು: ನ.17ರಿಂದ ಪದವಿ ಕಾಲೇಜುಗಳನ್ನು ಆರಂಭಿಸುವುದಾಗಿ ರಾಜ್ಯ ಸರ್ಕಾರ ಶುಕ್ರವಾರ ಘೋಷಿಸಿದೆ.

ಸರ್ಕಾರದ ಈ ನಿರ್ಧಾರವನ್ನು ಹಲವರು ಸ್ವಾಗತಿಸಿದರೆ, ಕೆಲವರು ಎದುರಾಗುವ ಸವಾಲುಗಳನ್ನು ಪ್ರಸ್ತಾಪಿಸಿದ್ದಾರೆ.

ಗ್ರಾಮೀಣ ಪ‍್ರದೇಶದಲ್ಲಿನ ವಿದ್ಯಾರ್ಥಿ ಸಮೂಹದಲ್ಲಿ ಕಾಲೇಜಿಗೆ ಬರುವ ಹುಮ್ಮಸ್ಸು ವ್ಯಕ್ತವಾಗಿದ್ದರೆ, ಪೋಷಕರ ವಲಯದಲ್ಲಿ ಆತಂಕದ ಕಾರ್ಮೋಡ ಕವಿದಿದೆ.

ADVERTISEMENT

ಹಸಿರು ನಿಶಾನೆಗೆ ಸ್ವಾಗತ

‘ಶಾಲಾ–ಕಾಲೇಜುಗಳಿಂದ ವಿದ್ಯಾರ್ಥಿಗಳು ದೂರ ಉಳಿದು ಏಳು ತಿಂಗಳು ಗತಿಸಿತು. ಇನ್ನೂ ಎಷ್ಟು ದಿನ ಮನೆಯ ಒಳಗೆ ಉಳಿಯಲು ಸಾಧ್ಯ ?’ ಎನ್ನುತ್ತಾರೆ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರಾ.

‘ಆನ್‌ಲೈನ್‌ ಶಿಕ್ಷಣ ಮಕ್ಕಳಿಗೆ ಮಾನಸಿಕ ಹಿಂಸೆ ನೀಡುತ್ತಿದೆ. ಪೋಷಕರಿಗೂ ಕಿರಿಕಿರಿ ಮಾಡುತ್ತಿದೆ. ಇದೀಗ ಕೊರೊನಾ ವೈರಸ್‌ ಸೋಂಕು ಹರಡುವುದು ಇಳಿಮುಖವಾಗುತ್ತಿದೆ. ಪದವಿ ಕಾಲೇಜುಗಳನ್ನು ಆರಂಭಿಸುವಂತೆ ಸಂಘದ ವತಿಯಿಂದ ಉನ್ನತ ಶಿಕ್ಷಣ ಸಚಿವರ ಜೊತೆ ಈಚೆಗಷ್ಟೇ ಚರ್ಚಿಸಿದ್ದೆವು. ಮುಖ್ಯಮಂತ್ರಿ ಕಾಲೇಜು ಆರಂಭಕ್ಕೆ ಹಸಿರು ನಿಶಾನೆ ತೋರಿದ್ದು ಒಳ್ಳೆಯ ಬೆಳವಣಿಗೆ’ ಎಂದು ಸಿಂಧನಕೇರಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕೋವಿಡ್‌ನ ಭಯ ಇಂದಿಗೂ ದೂರವಾಗಿಲ್ಲ. ಆದರೆ ಮಕ್ಕಳಲ್ಲಿ ಮಾತ್ರ ಕಾಲೇಜಿಗೆ ಬರುವ ಆಸಕ್ತಿ ದಿನೇ ದಿನೇ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಕೈಗೆಟುಕದ ಸೌಲಭ್ಯವಾಗಿತ್ತು. ಸರ್ಕಾರದ ಈ ನಿರ್ಧಾರ ಹಳ್ಳಿಗಳ ವಿದ್ಯಾರ್ಥಿಗಳಲ್ಲಿ ಖುಷಿ ಮೂಡಿಸಿದೆ’ ಎನ್ನುತ್ತಾರೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಅಸೋಸಿಯೇಟ್‌ ಪ್ರೊಫೆಸರ್ ಡಾ.ಕೆ.ಕೆ.ಪದ್ಮನಾಭ್‌.

ಕನಿಷ್ಠ ಅಂತರ ಕಷ್ಟ: ಸವಾಲು

‘ಸರ್ಕಾರದ ನಿರ್ಧಾರ ಪಾಲನೆಗೆ ಬದ್ಧ. ಸಾಂಕ್ರಾಮಿಕ ಸೋಂಕು ಎಲ್ಲಿಯವರೆಗೂ ಇರುತ್ತೆ ? ಎಲ್ಲಿಗೆ ಕೊಂಡೊಯ್ಯುತ್ತೆ ಎಂಬುದೇ ಯಾರೊಬ್ಬರಿಗೂ ತಿಳಿಯದ ಕಾಲಘಟ್ಟವಿದು’ ಎಂದು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ವಿಶ್ವನಾಥ್ ಪ್ರತಿಕ್ರಿಯಿಸಿದರು.

‘ಸ್ಯಾನಿಟೈಸೇಷನ್‌ ಮಾಡಲು ನಾವು ಸಿದ್ಧ. ಮಾಸ್ಕ್ ಹಾಕಲು ವಿದ್ಯಾರ್ಥಿಗಳು ಬದ್ಧರಾ ಎಂಬುದೇ ನಮ್ಮನ್ನು ಕಾಡುತ್ತಿರೋದು’ ಎಂದು ಹೇಳಿದರು.

‘ಕಾಲೇಜು ಆರಂಭಿಸೋದು ತುಂಬಾ ಸವಾಲಿನ ಕೆಲಸ. ಬೇರೆ ಬೇರೆ ಊರುಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಒಂದೇ ಕೊಠಡಿಯಲ್ಲಿ ಬೋಧನೆ ಸಾಧ್ಯವಿಲ್ಲ. ಬ್ಯಾಚ್ ಮಾಡುವುದಾದರೆ ಎಷ್ಟು ಬ್ಯಾಚ್ ಮಾಡಬೇಕು? ಎಂಬುದೇ ಹೆಚ್ಚಿನ ವಿದ್ಯಾರ್ಥಿಗಳಿರುವ ಕಾಲೇಜುಗಳ ಸಂಕಟ’ ಎನ್ನುತ್ತಾರೆ ಬಾಸುದೇವ ಸೋಮಾನಿ ಕಾಲೇಜಿನ ಪ್ರಾಂಶುಪಾಲ ಸದಾಶಿವ ಭಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.