ADVERTISEMENT

ಪಠ್ಯದಲ್ಲಿ ಭಗವದ್ಗೀತೆ: ಕೊರೊನಾಗಿಂತ ಅಪಾಯಕಾರಿ– ತನ್ವೀರ್‌ ಸೇಠ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 10:08 IST
Last Updated 19 ಮಾರ್ಚ್ 2022, 10:08 IST
ಶಾಸಕ ತನ್ವೀರ್‌ ಸೇಠ್‌
ಶಾಸಕ ತನ್ವೀರ್‌ ಸೇಠ್‌   

ಮೈಸೂರು: ’ರಾಜ್ಯ ಸರ್ಕಾರವು ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಲು ಚಿಂತಿಸಿರುವುದು ಮಹಾಮಾರಿ ಕೊರೊನಾಗಿಂತಲೂ ಅಪಾಯಕಾರಿಯಾದ ಬೆಳವಣಿಗೆ’ ಎಂದು ಶಾಸಕ ತನ್ವೀರ್‌ ಸೇಠ್‌ ಕಿಡಿಕಾರಿದರು.

ಶನಿವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ ಕೊಡುವ ಬದಲು ಅವರ ಮನಸ್ಸನ್ನು ಕಲ್ಮಶಗೊಳಿಸಲು ಮುಂದಾಗಿರುವುದು ನೋವಿನ ವಿಚಾರ’ ಎಂದರು.

‘ಒಬ್ಬರ ಧರ್ಮವನ್ನು ಇನ್ನೊಬ್ಬರ ಮೇಲೆ ಬಲವಂತದಿಂದ ಹೇರುವುದು ಅಪರಾಧ ಎಂದು ಸರ್ಕಾರ, ಮತಾಂತರ ನಿಷೇಧ ಕಾಯ್ದೆಯಲ್ಲಿ ಹೇಳಿದೆ. ಇದೀಗ ಶಿಕ್ಷಣದಲ್ಲಿ ಧರ್ಮದ ವಿಚಾರ ಅಳವಡಿಸಲು ಮುಂದಾಗಿ ತನ್ನದೇ ನಿಯಮ ಉಲ್ಲಂಘಿಸುತ್ತಿದೆ. ಭಗವದ್ಗೀತೆ ಅಳವಡಿಸುವುದರಿಂದ ಏನಾಗುತ್ತೆ, ಏನಾಗಲ್ಲ ಎಂಬುದು ಮುಖ್ಯವಲ್ಲ. ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಇದು ಬೇಡ’ ಎಂದು ವಿರೋಧ ವ್ಯಕ್ತಪಡಿಸಿದರು.

ADVERTISEMENT

‘ಧಾರ್ಮಿಕ ಚಟುವಟಿಕೆ, ಭಾವನೆಗಳನ್ನು ತರಗತಿಗೆ ತರಬಾರದು ಎಂದು ಹೈಕೋರ್ಟ್ ಮೊನ್ನೆ ತಾನೇ ತನ್ನ ತೀರ್ಪಿನಲ್ಲಿ ತಿಳಿಸಿದೆ. ತೀರ್ಪನ್ನು ಒಪ್ಪುವುದು, ಬಿಡುವುದು ಬೇರೆ ವಿಚಾರ. ನ್ಯಾಯಾಲಯದ ಮೇಲೆ ನಂಬಿಕೆ, ಗೌರವ ಇದೆ’ ಎಂದು ತಿಳಿಸಿದರು.

ಚಿಕ್ಕಂದಿನಿಂದಲೂ ಸಿನಿಮಾ ನೋಡಿದವನಲ್ಲ: ‘ದಿ ಕಾಶ್ಮೀರ ಫೈಲ್ಸ್‌’ ಸಿನಿಮಾ ಕುರಿತ ಪ್ರಶ್ನೆಗೆ, ‘ನಾನು ಚಿಕ್ಕಂದಿನಿಂದಲೂ ಸಿನಿಮಾ ನೋಡಿದವನಲ್ಲ. ಈಗಲೂ ನೋಡುವುದಿಲ್ಲ. ಕಾಶ್ಮೀರ ಫೈಲ್ಸ್‌, ಗುಜರಾತ್ ಫೈಲ್ಸ್‌, ಇನ್ಯಾವುದೋ ಫೈಲ್ಸ್‌ ಬಗ್ಗೆ ಗೊತ್ತಿಲ್ಲ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.