(ಸಾಂದರ್ಭಿಕ ಚಿತ್ರ)
ನಂಜನಗೂಡು: ತಾಲ್ಲೂಕಿನ ಕೆಂಪಿಸಿದ್ದನಹುಂಡಿಯಲ್ಲಿ ಹುಟ್ಟುಹಬ್ಬದ ಆಚರಣೆಗೆಂದು ಕರೆಸಿಕೊಂಡ ಸ್ನೇಹಿತರೆಲ್ಲರೂ ಸೇರಿ ಹಲ್ಲೆ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕೆ.ಕೆ.ಸ್ವಾಮಿ ಅವರ ಪುತ್ರ ಕಿರಣ್ ಈಚೆಗೆ ಮೃತಪಟ್ಟರು.
ಘಟನೆ ಸಂಬಂಧ ಕೆಂಪಿಸಿದ್ದನಹುಂಡಿ ಗ್ರಾಮದ ವಸಂತಕುಮಾರ, ಮಧುಸೂದನ, ರವಿಚಂದ್ರ, ಚಂದ್ರ, ಸಿದ್ದರಾಜು ಎಂಬ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಜುಲೈ 15ರಂದು ಸ್ನೇಹಿತ ರವಿಚಂದ್ರ ಎಂಬುವವನ ಹುಟ್ಟುಹಬ್ಬದ ಆಚರಣೆಗಾಗಿ ತನ್ನ ಸ್ನೇಹಿತರಾದ ವಸಂತಕುಮಾರ, ಮಧುಸೂದನ್, ರವಿಚಂದ್ರ, ಚಂದ್ರ, ಸಿದ್ದರಾಜು ಎಂಬುವವರ ಜೊತೆಗೆ ಕಿರಣ್ ತೆರಳಿದ್ದನು. ಸಂಭ್ರಮಾಚರಣೆಯಲ್ಲಿ ಮಧ್ಯಪಾನ ಮಾಡುತ್ತಿದ್ದ ವೇಳೆ ವಸಂತನ ಮೊಬೈಲ್‌ಗೆ ಯುವತಿಯೊಬ್ಬಳು ಕರೆ ಮಾಡಿದ್ದಾಳೆ. ಆ ಕರೆಯನ್ನು ಕಿರಣ್ ರಿಸೀವ್ ಮಾಡಿದ್ದರಿಂದ ಕೋಪಗೊಂಡ ವಸಂತ, ಕಿರಣ್‌ಗೆ ಥಳಿಸಿ ಹಲ್ಲೆ ನಡೆಸಿದ್ದಾನೆ. ಬೈಕ್ ಹರಿಸಿ ಕೊಲೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ಆರೋಪಿಗಳು ಕಿರಣ್ ಅಪಘಾತವಾಗಿ ಗಾಯಗೊಂಡಿದ್ದಾನೆಂದು ಬಿಂಬಿಸಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸುನಿಲ್ ಕುಮಾರ್ ತನಿಖೆ ನಡೆಸಿ ಇದು ಅಪಘಾತವಲ್ಲ, ಉದ್ದೇಶ ಪೂರ್ವಕವಾಗಿ ಕೊಲೆ ನಡೆಸಿದ್ದಾರೆ ಎಂದು ಪ್ರಕರಣದ ಸತ್ಯಾಂಶ ಭೇದಿಸಿದ್ದಾರೆ. ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.