ADVERTISEMENT

‘ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ ಬಿಜೆಪಿ ಸರ್ಕಾರ’

ಅಧಿವೇಶನಕ್ಕೆ ಕಾಂಗ್ರೆಸ್‌ ಶಾಸಕರ ಆಗ್ರಹ: ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 8:30 IST
Last Updated 1 ಆಗಸ್ಟ್ 2020, 8:30 IST

ಮೈಸೂರು: ‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆಡಳಿತ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವಲ್ಲೂ ಮುಗ್ಗರಿಸಿದೆ’ ಎಂದು ಕಾಂಗ್ರೆಸ್‌ ಶಾಸಕರಾದ ಎಚ್‌.ಪಿ.ಮಂಜುನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ, ಆರ್.ಧರ್ಮಸೇನ ಅವರು ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಬಿಜೆಪಿಗರು ಪಲಾಯನವಾದಿಗಳು. ಮುಖ್ಯಮಂತ್ರಿಯಿಂದ ಹಿಡಿದು ಸಚಿವರು ನಾಮಕಾವಸ್ತೆಗಾಗಿ ಅಧಿಕಾರದ ಕುರ್ಚಿಯಲ್ಲಿದ್ದಾರೆ. ಗಾಂಧಿ ಕೊಂದ ಆರ್‌ಎಸ್‌ಎಸ್‌ ಸಂಘಟನೆಯವರ ಕೈಯಲ್ಲಿದೆ ಈ ಸರ್ಕಾರದ ರಿಮೋಟ್‌ ಕಂಟ್ರೋಲ್‌. ಬೊಟ್ಟು ಇಟ್ಕೊಂಡವರು ನೀಡುವ ಸೂಚನೆ ಪಾಲಿಸುವುದಷ್ಟೇ ಇವರ ಕೆಲಸವಾಗಿದೆ’ ಎಂದು ಹುಣ ಸೂರು ಶಾಸಕ ಎಚ್‌.ಪಿ.ಮಂಜುನಾಥ್ ಕಟುಶಬ್ದಗಳಲ್ಲಿ ಟೀಕಿಸಿದರು.

‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸುವುದ ಕ್ಕಾಗಿಯೇ ಯಡಿಯೂರಪ್ಪ ಇಬ್ಬರನ್ನು ಈಚೆಗಷ್ಟೇ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿಕೊಂಡಿದ್ದಾರೆ’ ಎಂದು ಎಚ್‌.ಪಿ.ಮಂಜುನಾಥ್‌ ಅವರು ಎಚ್‌.ವಿಶ್ವನಾಥ್, ಯೋಗೇಶ್ವರ್ ಅವರ ನೇಮಕವನ್ನು ಮೂದಲಿಸಿದರು.

ADVERTISEMENT

‘ಬಿಜೆಪಿಯವರದ್ದು ಬಾಯಲ್ಲಿ ಬೆಣ್ಣೆ–ಬಗಲಲ್ಲಿ ದೊಣ್ಣೆ ಎಂಬ ನೀತಿ. ಹಿಂದಿನ ವರ್ಷದ ಪ್ರವಾಹಕ್ಕೆ ಮಾರ್ಚ್‌ನಲ್ಲಿ ₹50 ಲಕ್ಷ ಪರಿಹಾರ ಹುಣಸೂರಿಗೆ ಬಿಡುಗಡೆಗೊಂಡಿತ್ತು. ಆದರೆ, ಇದನ್ನು ಕೋವಿಡ್‌ಗೆ ಖರ್ಚು ಮಾಡುತ್ತಿದ್ದಾರೆ. ಅವರ ಬೆನ್ನನ್ನು ಅವರೇ ತಟ್ಟಿಕೊಳ್ತಿದ್ದಾರೆ. ಎಲ್ಲ ಆಟೊ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಸಿಕ್ಕಿಲ್ಲ. ತರಕಾರಿ ಹಾನಿಯ ಪರಿಹಾರವೂ ರೈತರಿಗೆ ದಕ್ಕಿಲ್ಲ. ಪಿಂಚಣಿದಾರರಿಗೆ ಖಜಾನೆ–2 ಗೊಂದಲದಿಂದ ಆರೇಳು ತಿಂಗಳಿಂದ ಮಾಸಾಶನವೇ ದೊರಕದಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಕೋವಿಡ್ ನೆಪದಲ್ಲಿ ಸಾವಿನಿಂದಲೂ ಸಂಪಾದನೆಗಿಳಿದಿದ್ದಾರೆ ಬಿಜೆಪಿಗರು. ಸಾವಿನ ವೈರಸ್‌ ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿ ಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ಹಳ್ಳಿ ಜನರನ್ನು ರಕ್ಷಿಸಿ: ‘ಗ್ರಾಮೀಣ ಸ್ಥಳೀಯ ಆಡಳಿತವಾದ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರ ಅವಧಿ ಪೂರ್ಣಗೊಂಡಿದೆ. ಇದೀಗ ಆಡಳಿತಾಧಿಕಾರಿಗಳ ಅಧಿಕಾರವಿದೆ. ಗ್ರಾಮೀಣ ಜನರನ್ನು ಕೊರೊನಾದಿಂದ ರಕ್ಷಿಸಲು ಯಾರೊಬ್ಬರೂ ಇಲ್ಲ. ಎಲ್ಲದಕ್ಕೂ ಲಾಕ್‌ಡೌನ್ ತೆರವುಗೊಳಿಸ ಲಾಗಿದೆ. ತುರ್ತಾಗಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಿ’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಆಗ್ರಹಿಸಿದರು.

‘ಸಚಿವ ಸಂಪುಟದಲ್ಲಿ ಅನುಭವಸ್ಥ ಸಚಿವರ ಕೊರತೆಯಿದೆ. ಸಚಿವರಾಗಲಿ ಕ್ಕಾಗಿಯೇ ಬಿಜೆಪಿಗೆ ಬಂದವರನ್ನು ಸಂಪುಟದಿಂದ ವಜಾಗೊಳಿಸಿ. ಉಮೇಶ ಕತ್ತಿ ಅವರಂತಹ ಹಿರಿಯರಿಗೆ ಅವಕಾಶ ಕೊಟ್ಟು ಕೊರೊನಾ ಎದುರಿಸಿ. ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ನಿಮ್ಮ ಸರ್ಕಾರ ರಚನೆಗೆ ಕಾರಣರಾದವರಿಗೆ ಅವಕಾಶಕೊಟ್ಟುಕೊಳ್ಳಿ’ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಗ್ರಾಮಾಂತರ ಘಟಕದ ಪದಾಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿದ್ದರು.

ಅಧಿವೇಶನ ಕರೆಯಿರಿ; ಕ್ಷೇತ್ರಕ್ಕೆ ಅನುದಾನ ಕೊಡಿ

‘ಬಿಜೆಪಿ ಎಂದೆಂದೂ ಉಳ್ಳವರ ಪರ. ಬಡವರ ವಿರೋಧಿ. ಲಾಕ್‌ಡೌನ್‌ ಅವಧಿಯಲ್ಲೇ ಸುಗ್ರೀವಾಜ್ಞೆ ಮೂಲಕ ಹಲವು ಮಹತ್ವದ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಈ ಎಲ್ಲ ಕಾಯ್ದೆ ಬಗ್ಗೆ ಚರ್ಚಿಸಲು ತುರ್ತಾಗಿ ಅಧಿವೇಶನ ಕರೆಯಿರಿ’ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು.

‘ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಬಿಡುಗಡೆಯಾಗಿಲ್ಲ. 2018–19ನೇ ಸಾಲಿನ ಅನುದಾನದಲ್ಲೇ ಇನ್ನೂ ಬಿಡುಗಡೆಯಾಗಬೇಕಿದೆ. ಸಕಾಲಕ್ಕೆ ಅನುದಾನ ಬಿಡುಗಡೆಯಾಗದಿರುವುದರಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.