ADVERTISEMENT

ರಾಹುಲ್‌ಗಾಂಧಿ ಕ್ಷಮೆಗೆ ಬಿಜೆಪಿ ಆಗ್ರಹ

ರಫೇಲ್ ಯುದ್ಧ ವಿಮಾನಗಳ ಖರೀದಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 15:38 IST
Last Updated 16 ನವೆಂಬರ್ 2019, 15:38 IST
ರಫೇಲ್ ವಿಷಯದಲ್ಲಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು PHOTO / SAVITHA B R
ರಫೇಲ್ ವಿಷಯದಲ್ಲಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು PHOTO / SAVITHA B R   

ಮೈಸೂರು: ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ದೇಶದ ಜನರಿಗೆ ಸುಳ್ಳು ಮಾಹಿತಿ ನೀಡುವ ಜತೆಗೆ, ಪ್ರಧಾನಿ ಮೋದಿಯನ್ನು ‘ಚೋರ್‘ ಎಂದು ಸಂಬೋಧಿಸಿ ಸುಪ್ರೀಂಕೋರ್ಟ್‍ನಿಂದ ಛೀಮಾರಿ ಹಾಕಿಸಿಕೊಂಡಿರುವ ಕಾಂಗ್ರೆಸ್‌ ಮುಖಂಡ ರಾಹುಲ್‍ಗಾಂಧಿ, ಕೂಡಲೇ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ನಗರದ ವಿವಿಧೆಡೆ ಪ್ರತಿಭಟಿಸಿದರು.

ಗಾಂಧಿವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್‍ಗಾಂಧಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಇಲ್ಲಸಲ್ಲದ ಆರೋಪ ಮಾಡಿದರು. ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆಯದಿದ್ದರೂ; ಸುಳ್ಳು ಸುದ್ದಿ ಹಬ್ಬಿಸಿ ದೇಶದ ಜನರ ದಾರಿ ತಪ್ಪಿಸಲು ಯತ್ನಿಸಿದರು ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ADVERTISEMENT

ರಫೇಲ್‍ಗೆ ಸಂಬಂಧಿಸಿದಂತೆ ಪ್ರಧಾನಿಗೆ ಸುಪ್ರೀಂಕೋರ್ಟ್‍ನಲ್ಲೂ ಜಯ ದೊರಕಿದೆ. ರಾಹುಲ್‌ಗಾಂಧಿಗೆ ಇನ್ಮುಂದೆ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡದಂತೆ ಕೋರ್ಟ್‌ ಎಚ್ಚರಿಸಿದೆ ಎಂದರು.

ಶಾಸಕ ಎಲ್.ನಾಗೇಂದ್ರ, ಬಿಜೆಪಿ ಮುಖಂಡರಾದ ಸೋಮಶೇಖರ್, ಪ್ರೇಮ್‌ಕುಮಾರ್, ಪ್ರಮೀಳಾ ಭರತ್, ಪ್ರಭಾಕರ ಶಿಂಧೆ, ಗೋಕುಲ್ ಗೋವರ್ಧನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಅಗ್ರಹಾರ ವೃತ್ತದಲ್ಲೂ: ರಾಹುಲ್‍ಗಾಂಧಿ ದೇಶದ ಜನರ ಕ್ಷಮೆ ಯಾಚಿಸುವಂತೆ ಒತ್ತಾಯಿಸಿ ಅಗ್ರಹಾರ ವೃತ್ತದಲ್ಲೂ ಪ್ರತಿಭಟನೆ ನಡೆಯಿತು.

ಮಹಾನಗರ ಪಾಲಿಕೆಯ ವಿರೋಧಪಕ್ಷದ ನಾಯಕ ಬಿ.ವಿ.ಮಂಜುನಾಥ್, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಎಂ.ವಡಿವೇಲು ಮಾತನಾಡಿ, ರಾಹುಲ್ ವಿರುದ್ಧ ಹರಿಹಾಯ್ದರು.

ನಗರಪಾಲಿಕೆ ಸದಸ್ಯರಾದ ಎಂ.ಸೌಮ್ಯಾ ಉಮೇಶ್, ಶಿವಕುಮಾರ್‌, ಎಂ.ಸಿ.ರಮೇಶ್, ಬಿಜೆಪಿ ಪದಾಧಿಕಾರಿಗಳಾದ ಕಿಟ್ಟಿ, ಸಂತೋಷ್(ಶಂಭು), ಅಪ್ಪಿ ವಿಜಯ್, ಪ್ರಸನ್ನ, ಗಿರಿ, ರೇಖಾ, ಅನ್ನಪೂರ್ಣ, ಸೋಮಶೇಖರ್, ಸಿ.ಪಿ.ರಾಜೀವ್, ನಾಗರಾಜ್ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.