ADVERTISEMENT

ರಾಜ್ಯಪಾಲರು ಕಾಂಗ್ರೆಸ್ ಟೂಲ್‌ಕಿಟ್ ಅಲ್ಲ: ಕೆ. ವಸಂತಕುಮಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 15:37 IST
Last Updated 22 ಜನವರಿ 2026, 15:37 IST
   

ಮೈಸೂರು: ‘ರಾಜ್ಯಪಾಲರದು ಸಾಂವಿಧಾನಿಕ ಹಾಗೂ ಗೌರವಾನಿತ ಹುದ್ದೆ. ಅವರು ಕಾಂಗ್ರೆಸ್‌ ಪ್ರಚಾರದ ಸಾಧನವಾಗಲಿ, ಅರ್ಧಸತ್ಯಗಳ ಅಥವಾ ಅನುಕೂಲಸಿಂಧು ಸುಳ್ಳುಗಳ ವಕ್ತಾರರಾಗಲಿ ಅಲ್ಲ. ಆ ಪಕ್ಷ ಟೂಲ್‌ಕಿಟ್ ಕೂಡ ಅಲ್ಲ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ವಕ್ತಾರ ಕೆ. ವಸಂತಕುಮಾರ ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ತೋರಿದ ವರ್ತನೆ ಭಿನ್ನಮತವಾಗಿರಲಿಲ್ಲ, ಬದಲಿಗೆ ಬೆದರಿಕೆಯಾಗಿತ್ತು. ಹಿಂದೆಂದೂ ಕೇಳರಿಯದ ರೀತಿಯಲ್ಲಿ ಸದನದ ಒಳಗೇ ರಾಜ್ಯಪಾಲರನ್ನು ಬಹಿರಂಗವಾಗಿ ಬೆದರಿಸಲಾಯಿತು ಮತ್ತು ಘೋಷಣೆಗಳ ಮೂಲಕ ಅವಮಾನಿಸಲಾಯಿತು. ಇದು ಸಾಂವಿಧಾನಿಕ ಕಚೇರಿಯ ಮೇಲೆ ನಡೆದ ದೊಡ್ಡಮಟ್ಟದ ದಾಳಿಯಾಗಿದ್ದು, ವಿಧಾನಮಂಡಲದ ಇತಿಹಾಸದಲ್ಲೇ ದೊಡ್ಡ ಕಪ್ಪುಚುಕ್ಕೆ ಎನಿಸಿದೆ’ ಎಂದು ಆರೋಪಿಸಿದ್ದಾರೆ.

‘ಇದು ಕಾಂಗ್ರೆಸ್‌ ಪಕ್ಷದವರು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಹೊಂದಿರುವ ಆಳವಾದ ತಿರಸ್ಕಾರವನ್ನು ಎತ್ತಿ ತೋರಿಸುತ್ತದೆ. ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ಕನ್ನಡಿ ಹಿಡಿದಿದೆ. ಕಾಂಗ್ರೆಸ್‌ ಶಾಸಕರ ಮೇಲೆ ವಿಧಾನಸಭಾಧ್ಯಕ್ಷರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.