ADVERTISEMENT

ಕಾವಾ ಕಾಲೇಜಿನಲ್ಲಿ ಕಲಾ ಪ್ರದರ್ಶನ ಉದ್ಘಾಟನೆ; ಪರಿಸರದೊಳಗಿನ ಕಲಾಲೋಕದ ಅನಾವರಣ

​ಪ್ರಜಾವಾಣಿ ವಾರ್ತೆ
Published 23 ಮೇ 2025, 13:13 IST
Last Updated 23 ಮೇ 2025, 13:13 IST
ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಶಶಿಧರ ಅಡಪ, ಎ. ದೇವರಾಜು, ನಿರ್ಮಲಾ ಮಠಪತಿ, ಎ.ಪಿ. ಚಂದ್ರಶೇಖರ್ ಕಲಾಕೃತಿಗಳನ್ನು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ
ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಶಶಿಧರ ಅಡಪ, ಎ. ದೇವರಾಜು, ನಿರ್ಮಲಾ ಮಠಪತಿ, ಎ.ಪಿ. ಚಂದ್ರಶೇಖರ್ ಕಲಾಕೃತಿಗಳನ್ನು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ಪರಿಸರದಲ್ಲೇ ಸಿಗುವ ವಸ್ತುಗಳನ್ನು ಸಂಗ್ರಹಿಸಿ, ರಚಿಸಿರುವ ಕಲಾಕೃತಿಗಳು ಪ್ರಸ್ತುತ ಸಮಾಜ ಎದುರಿಸುತ್ತಿರುವ ಅಪಾಯವನ್ನು ತಿಳಿಸುತ್ತಿದ್ದವು. ಗಂಭೀರ ಚಿಂತನೆಗಳನ್ನು ವಿದ್ಯಾರ್ಥಿಗಳು ಕಲೆಯ ಮೂಲಕ ಪ್ರಸ್ತುತಪಡಿಸಿದರು.

ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಶುಕ್ರವಾರದಿಂದ ಆಯೋಜಿಸಿರುವ ವಾರ್ಷಿಕ ಕಲಾ ಪ್ರದರ್ಶನವು ಈ ರೀತಿಯ ಭಿನ್ನ ಕಲಾಕೃತಿಗಳಿಂದ ಕಂಗೊಳಿಸುತ್ತಿದೆ. ಶಿಲ್ಪಕಲಾ ವಿಭಾಗದ ವಿದ್ಯಾರ್ಥಿಗಳಾದ ಶರಣ್‌ ರಚಿಸಿರುವ ಕಲಾಕೃತಿಗಳು ‍ಪರಿಸರ ಸಂರಕ್ಷಣೆಯ ಪಾಠ ಹೇಳುತ್ತಿವೆ.

‘ಮನೆಯಿಲ್ಲದ ಹಕ್ಕಿಗಳು’ ಎಂಬ ಪರಿಕಲ್ಪನೆಯಲ್ಲಿ ಮಹಾಗನಿ ಮರದ ಕಾಯಿ ಹಾಗೂ ಎಲೆಗಳನ್ನು ಬಳಸಿ ಹಕ್ಕಿಗಳು ಸತ್ತು ನೇತಾಡುತ್ತಿರುವ ದೃಶ್ಯವನ್ನು ಸೃಷ್ಟಿಸಲಾಗಿದೆ. ಆ ಮೂಲಕ ಈಚೆಗೆ ಮರಗಳನ್ನು ಕಡಿದು ಹಾಕಿ, ಹಕ್ಕಿಗಳ ವಾಸಸ್ಥಾನ ಕಸಿಯುತ್ತಿರುವುದರಿಂದ ಉಂಟಾಗುತ್ತಿರುವ ಸಾವಿನ ಬಗ್ಗೆ ತಿಳಿಸಲಾಗಿದೆ. ಮರದ ಎಲೆಗಳಿಂದ ರಚಿಸಿದ ಜಿರಳೆ, ಕಲ್ಲಿನಲ್ಲಿ ಓಡಾಡುತ್ತಿರುವ ಇರುವೆಯ ಆಕೃತಿ ಎಲ್ಲರ ಗಮನಸೆಳೆಯುತ್ತಿವೆ.

ADVERTISEMENT

ನರೇಶ್‌ ಅವರು ಕಾಡು, ಸ್ಮಶಾನ ಅಲೆದು ಸಂಗ್ರಹಿಸಿದ ತಲೆಬುರುಡೆಗಳನ್ನು ಪ್ರದರ್ಶನಕ್ಕೆ ಇರಿಸಿದ್ದಾರೆ. ಮಾನವ, ಕೋತಿ, ಕೋಣ, ಹಂದಿಯ ತಲೆಬುರುಡೆಗಳನ್ನು ಕಲಾಸಕ್ತರು ಕುತೂಹಲದಿಂದ ವೀಕ್ಷಿಸಿದರು. ಉದ್ದನೆಯ ಮರದ ರೆಂಬೆಯಲ್ಲಿ ಜಿಂಕೆಯ ಮುಖ ಹಾಗೂ ಕೊಂಬುಗಳನ್ನು ರಚಿಸಿದ್ದು ಮನೋಜ್ಞವಾಗಿವೆ. ಹಸುವಿನ ಅವಶೇಷಗಳಿಂದ ‘ಹಲ್ಲಿನ ಸಾಮ್ರಾಜ್ಯ’ ಎಂಬ ಪರಿಕಲ್ಪನೆಯಲ್ಲಿ ಕಲಾಕೃತಿ ರಚಿಸಲಾಗಿದೆ.

ಇವಿಷ್ಟೇ ಅಲ್ಲದೆ ಹಾರುವ ಆಮೆ, ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ರಚಿಸಿದ ಚಿತ್ರಕಲೆಗಳು, ಮನಸೆಳೆಯುವ ಛಾಯಾಚಿತ್ರಗಳು ಮನಮೋಹಕವಾಗಿವೆ. ಪ್ರಮೋದ್ ಅವರು ‘ಕುರಿಗಳ ಜೊತೆ ಸಮಯ’ ಪರಿಕಲ್ಪನೆಯಲ್ಲಿ ರಚಿಸಿರುವ ಕಲಾಕೃತಿಯು ಆಕರ್ಷಣೀಯವಾಗಿತ್ತು.

‘ಕಲಾವಿದರು ಸ್ವಾರ್ಥ ಬಿಡಬೇಕು

‘ಕಲಾವಿದರು ಸ್ವಾರ್ಥ ಬಿಟ್ಟು ಯೋಚಿಸಿದಾಗ ಸಮಾಜದ ಜನರ ಯೋಚನಾ ಲಹರಿಯನ್ನು ಬದಲಿಸಬಹುದು’ ಎಂದು ಕಲಾ ವಿನ್ಯಾಸಕ ಶಶಿಧರ ಅಡಪ ಹೇಳಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ಕಲಾವಿದನಿಗೆ ಕೌಶಲವೊಂದೇ ಮುಖ್ಯವಲ್ಲ. ಆತನ ವ್ಯಕ್ತಿತ್ವವೂ ಗಣನೆಗೆ ಬರುತ್ತದೆ. ಹೀಗಾಗಿ ವ್ಯಕ್ತಿತ್ವವನ್ನು ಕಲಾತ್ಮಕವಾಗಿಡಬೇಕು’ ಎಂದು ಸಲಹೆ ನೀಡಿದರು. ಕಾಲೇಜಿನ ಡೀನ್ ಎ.ದೇವರಾಜು ಆಡಳಿತಾಧಿಕಾರಿ ನಿರ್ಮಲಾ ಮಠಪತಿ ಶೈಕ್ಷಣಿಕ ಸಂಯೋಜಕ ಎ.ಪಿ.ಚಂದ್ರಶೇಖರ್ ಕುಂಚ ಕಾವ್ಯ ವಿದ್ಯಾರ್ಥಿ ಸಮಿತಿಯ ಕಾರ್ಯದರ್ಶಿ ಸ್ಕಂದ ಆರ್. ಭಾರದ್ವಾಜ್ ಉಪಕಾರ್ಯದರ್ಶಿ ಹೇಮಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.