
ಮೈಸೂರು: ಬೋಯಿಂಗ್ ಕಂಪನಿಯೊಂದಿಗೆ ಸಹಭಾಗಿತ್ವ ಸ್ಥಾಪಿಸಿರುವ ಇಲ್ಲಿನ ರಂಗಸನ್ಸ್ ಏರೊಸ್ಪೇಸ್ ಕಂಪನಿಯ ನೂತನ ಮತ್ತು ಅತ್ಯಾಧುನಿಕ ಘಟಕವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು.
ಅಲ್ಲಿಗೆ ಬುಧವಾರ ಭೇಟಿ ನೀಡಿದ್ದ ಅವರು, ಕಂಪನಿಯಿಂದ ಕೌಶಲ ತರಬೇತಿ ಪಡೆದ 60 ಐಟಿಐ ಪದವೀಧರರಿಗೆ ಪ್ರಮಾಣಪತ್ರ ವಿತರಿಸಿದರು.
ನಂತರ ಮಾತನಾಡಿ, ‘ಅಗರಬತ್ತಿ ವ್ಯಾಪಾರ ಮಾಡುತ್ತಿದ್ದ ಸ್ಥಳೀಯರಾದ ರಂಗಸನ್ಸ್ ಪರಿವಾರದವರು ಈಗ ಏರೋಸ್ಪೇಸ್ ಕ್ಷೇತ್ರದಲ್ಲಿ ಛಾಪು ಮೂಡಿಸಿರುವುದು ಮೈಲಿಗಲ್ಲಾಗಿದೆ. ಮೊದಲಿನಿಂದಲೂ ಇದ್ದ ಸ್ಥಾವರದ ಪಕ್ಕದಲ್ಲೇ ನೂತನ ಕಚೇರಿ ನಿರ್ಮಿಸಿರುವುದು ಗಮನಾರ್ಹವಾಗಿದೆ’ ಎಂದು ಶ್ಲಾಘಿಸಿದರು.
‘ವೈಮಾಂತರಿಕ್ಷ ಕ್ಷೇತ್ರದಲ್ಲಿ ಇವರಿಗೆ ಬೇಕಾದ ಎಲ್ಲ ಸಹಕಾರವನ್ನೂ ಕೈಗಾರಿಕೆ ಇಲಾಖೆ ಕೊಡುತ್ತದೆ. ನೂತನ ಘಟಕವು ವಿಸ್ತಾರ, ವಿನ್ಯಾಸ ಮತ್ತು ಮಹತ್ವಾಕಾಂಕ್ಷೆಯಲ್ಲಿ ಜಾಗತಿಕ ಮಟ್ಟದಲ್ಲಿರುವುದು ಖುಷಿಯ ಸಂಗತಿಯಾಗಿದೆ’ ಎಂದರು.
‘ರಂಗಸನ್ಸ್ ಏರೊಸ್ಪೇಸ್ ಜತೆ ಬೋಯಿಂಗ್ ಕಂಪನಿ ಕೈಜೋಡಿಸಿರುವುದು ಅಭಿನಂದನಾರ್ಹ. ಇಲ್ಲಿ ಅತ್ಯಾಧುನಿಕ ಉತ್ಪಾದನಾ ವಿಧಾನ ಮತ್ತು ಆಧುನಿಕ ಎಂಜಿನಿಯರಿಂಗ್ ಪ್ರಯೋಗಾಲಯಗಳಿವೆ. ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಪ್ರಿಸಿಷನ್ ಉತ್ಪಾದನೆಯಲ್ಲಿ ತೊಡಗಿರುವುದು ಯಶಸ್ಸಿಗೆ ಉದಾಹರಣೆಯಾಗಿದೆ. ನಮ್ಮಲ್ಲಿರುವ ಏರೊಸ್ಪೇಸ್ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ಸಮರ್ಥವಾಗಿವೆ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಇಲ್ಲಿ ತರಬೇತಿ ಪಡೆದವರ ಪೈಕಿ ಶೇ 70ರಷ್ಟು ಮಂದಿಗೆ ಕಂಪನಿಯೇ ಕೆಲಸ ಕೊಡುತ್ತಿರುವುದು ಸ್ವಾಗತಾರ್ಹ. ಇದರಿಂದ ಯುವಜನರಿಗೆ ಮನೆಬಾಗಿಲಲ್ಲೇ ಅವಕಾಶ ಸಿಗುತ್ತದೆ. ಇಂತಹ ಜಂಟಿ ಉಪಕ್ರಮಗಳಿಗೆ ಬೆಂಬಲ ಕೊಡುತ್ತೇವೆ. ದೇಶದ ಏರೊಸ್ಪೇಸ್ ಮತ್ತು ರಕ್ಷಣಾ ವಲಯದ ವಹಿವಾಟಿನಲ್ಲಿ ಕರ್ನಾಟಕದ ಪಾಲು ಶೇ.65ರಷ್ಟಿದೆ. ರಂಗಸನ್ಸ್ ಕಂಪನಿಯ ಹೊಸ ಹೆಜ್ಜೆಯು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಒಳ್ಳೆಯ ಸಂಕೇತವಾಗಿದೆ’ ಎಂದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಮಹೇಶ್, ರಂಗಸನ್ಸ್ ಏರೋಸ್ಪೇಸ್ ಸಿಇಒ ಪವನ್ ರಂಗ, ಬೋಯಿಂಗ್ ಕಂಪನಿಯ ಹಿರಿಯ ನಿರ್ದೇಶಕ ಅಶ್ವನಿ ಭಾರ್ಗವ, ಅಧಿಕಾರಿಗಳಾದ ಮೋಹನದಾಸ್ ಪಿಳ್ಳೈ, ಗಣಪತಿ ಹೆಬ್ಬಾರ್ ಇದ್ದರು.
ಚಾಮರಾಜನಗರದಲ್ಲಿ 20 ಎಕರೆ ಭೂಮಿ: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಟೆಕ್ನಾಲಜೀಸ್ ಮತ್ತು ಸೈಯಂಟ್ ಡಿ.ಎಲ್.ಎಂ ಕಂಪನಿಗೆ ಭೇಟಿ ನೀಡಿದ್ದ ಸಚಿವರು, ಕರ್ನಾಟಕದಲ್ಲಿ ಹೂಡಿಕೆ ವಿಸ್ತರಣೆಗೆ ಕೋರಿದರು. ಇದಕ್ಕೆ ಬೇಕಾದ ಭೂಮಿ ಮತ್ತಿತರ ಸೌಲಭ್ಯಗಳನ್ನು ಕ್ಷಿಪ್ರವಾಗಿ ಒದಗಿಸುವ ಭರವಸೆಯನ್ನೂ ನೀಡಿದರು.
‘ಕಂಪನಿಗೆ ಚಾಮರಾಜನಗರದಲ್ಲಿ ಘಟಕ ವಿಸ್ತರಣೆಗೆ 20 ಎಕರೆ ಭೂಮಿ ಒದಗಿಸಲಾಗುವುದು. ಇದರೊಂದಿಗೆ ಆ ಕಂಪನಿಯು ಮುಂದಿನ ವರ್ಷದ ವೇಳೆಗೆ ಒಟ್ಟು 1,500 ಕೋಟಿ ಹೂಡಿಕೆ ಮಾಡಿದಂತಾಗಲಿದೆ. ಜೊತೆಗೆ 3ಸಾವಿರ ಜನ ಉಳಿದುಕೊಳ್ಳುವಂಥ ಹಾಸ್ವೆಲ್ ನಿರ್ಮಿಸಲಿದೆ’ ಎಂದರು.
‘ಪಿಸಿಬಿ ತಯಾರಿಸುವ ಕೇನ್ಸ್ ಕಂಪನಿಯು ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಕೂಡ ಪಿಸಿಬಿ ಉತ್ಪಾದನಾ ಘಟಕ ಸ್ಥಾಪಿಸಬೇಕು. ಅಲ್ಲಿ ವಿದ್ಯುತ್ ಮತ್ತು ನೀರಿಗೆ ಕೊರತೆ ಇಲ್ಲ. ಇದರಿಂದ ಕೈಗಾರಿಕಾ ವಿಕೇಂದ್ರೀಕರಣವನ್ನೂ ಸಾಧಿಸಿದಂತಾಗುತ್ತದೆ’ ಎಂದು ಕಂಪನಿಯವರನ್ನು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.