ಮೈಸೂರು: ‘ಮಕ್ಕಳಲ್ಲಿ ಕನ್ನಡ ಸಾಹಿತ್ಯ ಪ್ರಜ್ಞೆ ಮೂಡಿಸುವ ಶಿಕ್ಷಣ ವ್ಯವಸ್ಥೆ ಅಗತ್ಯ’ ಎಂದು ಲೇಖಕ ಬಿ.ಎಸ್. ಪ್ರಣತಾರ್ತಿಹರನ್ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂಸ್ಕೃತಿ ಬುಕ್ ಏಜೆನ್ಸಿಸ್ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ರಾಷ್ಟ್ರೀಯ ಒಂದು ಪುಸ್ತಕ ಓದು ದಿನ ಆಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಉತ್ತಮ ಪುಸ್ತಕಗಳ ಓದಿನಿಂದ ವ್ಯಕ್ತಿತ್ವ ವಿಕಾಸವಾಗುತ್ತದೆ. ಪುಸ್ತಕಗಳು ಅನೇಕ ಮಹನೀಯರ ಬದುಕು ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಪುಸ್ತಕ ಓದುವ ಹವ್ಯಾಸವು ನೋವು, ದುಃಖ, ಬೇಸರವನ್ನು ಕಳೆಯುತ್ತವೆ. ಆದ್ದರಿಂದ ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ವಿಶ್ವ ಮಟ್ಟದಲ್ಲಿ ಕನ್ನಡ ಸಾಹಿತ್ಯದ ಪತಾಕೆ ಹಾರಿಸಿದ ಅನೇಕ ಶ್ರೀಮಂತ ಸಾಹಿತಿಗಳು ನಮ್ಮ ನಡುವೆ ಇದ್ದಾರೆ. ಇಂತಹ ಸಾಹಿತ್ಯದ ಅಭ್ಯಾಸ ನಮ್ಮ ಮಕ್ಕಳಿಗೆ ಆಗಬೇಕು. ಆದರೆ ಪೋಷಕರು ಮಕ್ಕಳಿಗೆ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಬರಲು ಪ್ರೋತ್ಸಾಹಿಸುತ್ತಿಲ್ಲ, ಶಿಕ್ಷಣ ವ್ಯವಸ್ಥೆಯೂ ಅದಕ್ಕೆ ಪೂರಕವಾಗಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಲೇಖಕ ಸಂತದೇವ ಅವರ ‘ಕೃಷ್ಣಾರ್ಪಣಮಸ್ತು’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಹಿರಿಯ ಪುಸ್ತಕ ಪ್ರೇಮಿ ಎನ್.ಲಕ್ಷ್ಮೀನರಸಿಂಹ ಅವರನ್ನು ಅಂಭಿನಂದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕಿ ಎಂ.ಎಸ್. ವಿಜಯಾಹರನ್, ಸಂಸ್ಕೃತಿ ಸುಬ್ರಹ್ಮಣ್ಯ ಇದ್ದರು.
ಪುಸ್ತಕ ಪ್ರದರ್ಶನ ಮತ್ತು ಮಾರಾಟವು ಬುಧವಾರ (ಸೆ.10)ರವರೆಗೂ ನಡೆಯಲಿದ್ದು, ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ನಡೆಯಲಿದ್ದು, ಭಾನುವಾರ ಸಂಜೆ 5 ರಿಂದ 9ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.