ADVERTISEMENT

‘ಯೋಗಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ಕೃಷ್ಣಮಾಚಾರ್ಯ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 10:46 IST
Last Updated 3 ಜುಲೈ 2022, 10:46 IST
ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಹಿಮಾಲಯ ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗಪಟು ಎ.ಎನ್.ಮೂರ್ತಿ ವಿರಚಿತ ‘ಯೋಗ ಪಿತಾಮಹ ಶ್ರೀಕೃಷ್ಣಮಾಚಾರ್ಯರು’ ಪುಸ್ತಕವನ್ನು ವಿದುಷಿ ಡಾ.ಲೀಲಾ ‍‍ಪ್ರಕಾಶ್ ಹಾಗೂ ಅತಿಥಿಗಳು ಬಿಡುಗಡೆ ಮಾಡಿದರು
ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಹಿಮಾಲಯ ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗಪಟು ಎ.ಎನ್.ಮೂರ್ತಿ ವಿರಚಿತ ‘ಯೋಗ ಪಿತಾಮಹ ಶ್ರೀಕೃಷ್ಣಮಾಚಾರ್ಯರು’ ಪುಸ್ತಕವನ್ನು ವಿದುಷಿ ಡಾ.ಲೀಲಾ ‍‍ಪ್ರಕಾಶ್ ಹಾಗೂ ಅತಿಥಿಗಳು ಬಿಡುಗಡೆ ಮಾಡಿದರು   

ಮೈಸೂರು: ‘ಪ್ರಾಚೀನ ಪರಂಪರಾಗತ ಯೋಗ ವಿದ್ಯೆಗೆ ಆಧುನಿಕತೆಯ ಸ್ಪರ್ಶ ನೀಡಿದವರು ಕೃಷ್ಣಮಾಚಾರ್ಯರು’ ಎಂದು ಯೋಗ ಪಟು ಯೋಗಪ್ರಕಾಶ್ ನೆನೆದರು.

ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಹಿಮಾಲಯ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಗಪಟು ಎ.ಎನ್.ಮೂರ್ತಿ ವಿರಚಿತ ‘ಯೋಗ ಪಿತಾಮಹ ಶ್ರೀಕೃಷ್ಣಮಾಚಾರ್ಯರು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಬಿ.ಕೆ.ಎಸ್. ಅಯ್ಯಂಗಾರ್ ಹಾಗೂ ಪಟ್ಟಾಭಿ ಜೋಯಿಸ್ ಅವರಂತಹ ಶಿಷ್ಯರಿಗೆ ಯೋಗ ವಿದ್ಯೆ ಕಲಿಸಿದ ಕೀರ್ತಿ ಕೃಷ್ಣಮಾಚಾರ್ಯರಿಗೆ ಸಲ್ಲುತ್ತದೆ’ ಎಂದು ಸ್ಮರಿಸಿದರು.

ADVERTISEMENT

ಪುಸ್ತಕ ಬಿಡುಗಡೆ ಮಾಡಿದ ವಿದುಷಿ ಡಾ.ಲೀಲಾ ಪ್ರಕಾಶ್, ‘ಯೋಗದಲ್ಲಿ ವಿನ್ಯಾಸ ಕ್ರಮವನ್ನು ರೂಪಿಸಿದ ಹೆಗ್ಗಳಿಕೆ ಕೃಷ್ಣಮಾಚಾರ್ಯರದು. ಪ್ರಚಾರದಿಂದ ದೂರವಿದ್ದ ಅವರ ಜೀವನ ಸಾಧನೆಯನ್ನು ತೆರೆದಿಡುವಲ್ಲಿ ಈ ಕೃತಿಯು ಸಫಲವಾಗಿದೆ. ಕಿರು ಕೃತಿಯಾದರೂ ಯೋಗಾಸಕ್ತರಿಗೆ ಅತ್ಯಂತ ಮಹತ್ವಪೂರ್ಣವಾದುದಾಗಿದೆ’ ಎಂದರು.

‘ಹಿಮಾಲಯ ಪ್ರತಿಷ್ಠಾನವು ಈಗಾಗಲೇ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ, ಬಿ.ಕೆ.ಎಸ್. ಅಯ್ಯಂಗಾರ್, ಪಟ್ಟಾಭಿಜೋಯಿಸ್ ಮೊದಲಾದ ಯೋಗಪುರುಷರ ಜೀವನ ಚಿತ್ರಣವನ್ನು ಪ್ರಕಟಿಸಿ ಜನಸಾಮಾನ್ಯರಲ್ಲಿ ಯೋಗ ಮತ್ತು ಯೋಗಾಚಾರ್ಯರ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಲೇಖಕ ಎ.ಎನ್. ಮೂರ್ತಿ–ಶಾಮಲಾ ಮೂರ್ತಿ ದಂಪತಿಯನ್ನು ಗೌರವಿಸಲಾಯಿತು.

ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಸಮಾಜಸೇವಕ ಕಲ್ಯಾಣ್ ಕುಮಾರ್, ವ್ಯಂಗ್ಯಚಿತ್ರ ಕಲಾವಿದ ಎಂ.ವಿ.ನಾಗೇಂದ್ರ ಬಾಬು, ಪತ್ರಕರ್ತ ಮಹೇಶ್ ನಾಯಕ್, ಬರಹಗಾರ ಮಂಜುನಾಥ್, ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಲತಾ ಮೋಹನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.