ADVERTISEMENT

ಯುವತಿಯರಿಗೆ ಸ್ತನ ಕ್ಯಾನ್ಸರ್‌: ಎಚ್ಚರವಿರಲಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 12:59 IST
Last Updated 28 ಅಕ್ಟೋಬರ್ 2021, 12:59 IST
   

ಮೈಸೂರು: ‘ಮಧ್ಯ ವಯಸ್ಸಿನ ಮಹಿಳೆಯರನ್ನು ಕಾಡುತ್ತಿದ್ದ ಸ್ತನ ಕ್ಯಾನ್ಸರ್, ಈಚಿನ ದಿನಗಳಲ್ಲಿ ಯುವತಿಯರಲ್ಲೂ ಕಾಣಿಸಿಕೊಳ್ಳುತ್ತಿದ್ದು; ಈ ಬಗ್ಗೆ ಎಚ್ಚರ ವಹಿಸಬೇಕಿದೆ’ ಎಂದು ಎಚ್‌ಸಿಜಿ ಭಾರತ್ ಆಸ್ಪತ್ರೆ ಮತ್ತು ಇನ್ಸ್ಟಿಟ್ಯೂಟ್ ಆಫ್‌ ಆಂಕೊಲಾಜಿಯ ಹಿರಿಯ ವಿಕಿರಣ ಆಂಕೊಲಾಜಿಸ್ಟ್ ಡಾ.ವೈ.ಎಸ್. ಮಾಧವಿ ಗುರುವಾರ ಇಲ್ಲಿ ತಿಳಿಸಿದರು.

‘ಸ್ತನ ಕ್ಯಾನ್ಸರ್ ಪೀಡಿತ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಮುಂದಿನ ದಶಕದಲ್ಲಿ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಸಾಮಾನ್ಯವಾಗಿ 40-50 ವಯಸ್ಸಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿತ್ತು. ಇದೀಗ 20-25ರ ವಯೋಮಾನದವರನ್ನೂ ಕಾಡುತ್ತಿದೆ. ಈ ಬಗ್ಗೆ ಆತಂಕಕ್ಕೆ ಒಳಗಾಗಬೇಕಿಲ್ಲ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬಾಣಂತಿಯಿದ್ದಾಗ ಮಗುವಿಗೆ ಚೆನ್ನಾಗಿ ಮೊಲೆ ಹಾಲುಣಿಸಬೇಕು. ಹದಿಹರೆಯ, ಪ್ರೌಢಾವಸ್ಥೆಯಿಂದಲೇ ಉತ್ತಮ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಬೇಕು. ಸೊಪ್ಪು, ತರಕಾರಿ, ಹಣ್ಣು ಹೆಚ್ಚಿರಬೇಕು. ರೆಡ್ ಮೀಟ್ ಕಡಿಮೆ ಬಳಸಬೇಕು. ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ದೈನಂದಿನ ದೈಹಿಕ ವ್ಯಾಯಾಮದೊಂದಿಗೆ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್‌ ಡಾ.ಎಂ.ವಿಜಯಕುಮಾರ್ ಮಾತನಾಡಿ ‘ಮೊದಲು ಕ್ಯಾನ್ಸರ್ ಉಂಟಾದರೆ ಸ್ತನವನ್ನೇ ಸಂಪೂರ್ಣವಾಗಿ ತೆಗೆಯಬೇಕಿತ್ತು. ಈಗ ಆಧುನಿಕ ಶಸ್ತ್ರಚಿಕಿತ್ಸೆ ಮೂಲಕ ಕ್ಯಾನ್ಸರ್ ಟೂಮರ್ ಮಾತ್ರ ಕತ್ತರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ ಮಾತನಾಡಿ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಅಂಗವಾಗಿ, ‘ನಮ್ಮ ಆಸ್ಪತ್ರೆ ವತಿಯಿಂದ ನಗರದಾದ್ಯಂತ ಪ್ರಮುಖ ಉದ್ಯಾನಗಳಲ್ಲಿ ಶಿಬಿರ, ಉಚಿತ ಸ್ಕ್ರೀನಿಂಗ್ ಪರೀಕ್ಷೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಮ್ಯಾಮೊಗ್ರಫಿ ಪರೀಕ್ಷೆಯಲ್ಲೂ ರಿಯಾಯಿತಿ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.

ಆಸ್ಪತ್ರೆಯ ಸಿಒಒ ನಿರ್ಮಲಾ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.