ADVERTISEMENT

ಪರಧರ್ಮ ಸಹಿಷ್ಣುತೆ, ಸಹಬಾಳ್ವೆ ಅಗತ್ಯ: ಸಿಎಂ ಸಿದ್ದರಾಮಯ್ಯ

ಬೌದ್ದ ಮಹಾಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 2:10 IST
Last Updated 16 ಅಕ್ಟೋಬರ್ 2025, 2:10 IST
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಬೌದ್ಧ ಮಹಾಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ– ಪ್ರಜಾವಾಣಿ ಚಿತ್ರ 
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಬೌದ್ಧ ಮಹಾಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಜನಸ್ತೋಮ– ಪ್ರಜಾವಾಣಿ ಚಿತ್ರ    

ಮೈಸೂರು: ‘ಜಡ್ಡುಗಟ್ಟಿರುವ ಸಮಾಜದಲ್ಲಿ ಪರಿವರ್ತನೆ ಆಗಬೇಕಾದರೆ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವ– ಆದರ್ಶಗಳು ಹೆಚ್ಚು ಜನರಿಗೆ ಪರಿಚಿತವಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಭಿಕ್ಕು ಸಂಘ, ಬೌದ್ಧ ಸಂಘ ಸಂಸ್ಥೆಗಳು ಹಾಗೂ ರಾಜ್ಯ ಅಂಬೇಡ್ಕರ್‌ವಾದಿ ಸಂಘ ಸಂಸ್ಥೆಗಳು ಮತ್ತು ವಿಶ್ವಮೈತ್ರಿ ಬುದ್ಧ ವಿಹಾರದ ಸಹಯೋಗದಲ್ಲಿ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಬೌದ್ಧ ಮಹಾ ಸಮ್ಮೇಳನ ಮತ್ತು ಮಾನವ ಮೈತ್ರಿಯ ಪಯಣ–2025– ಅಂತರರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲರಿಗೂ ಸಮಾನ ಅವಕಾಶಗಳಿಲ್ಲದೆ ಅಸಮಾನತೆ ನಿರ್ಮಾಣವಾಗಿದೆ. ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಹೊಂದಿದರೆ ಸಮಾನತೆ ಸಾಧ್ಯವಾಗುತ್ತದೆ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಪರಧರ್ಮ ಸಹಿಷ್ಣುತೆ, ಸಹಬಾಳ್ವೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಮಾತ್ರ ದೇಶದಲ್ಲಿ ಶಾಂತಿ, ಅಹಿಂಸೆ ಹಾಗೂ ಸತ್ಯ ನೆಲೆಗೊಳ್ಳಲು ಸಾಧ್ಯ’ ಎಂದು ಹೇಳಿದರು.

ADVERTISEMENT

ಮಾತಿನಿಂದ ಸಮಾನತೆ ಬಾರದು?: ‘ಸಮಾನತೆಗಾಗಿಯೇ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗಾಗಿ ₹ 42ಸಾವಿರ ಕೋಟಿ ಮೀಸಲಿಡಲಾಗಿದೆ. ನಮ್ಮ ಸರ್ಕಾರ ಗುತ್ತಿಗೆಗಳಲ್ಲಿ ಮೀಸಲಾತಿಯನ್ನು ತಂದಿದೆ. ಬಡ್ತಿಯಲ್ಲಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ಕೊಡದಿದ್ದರೂ ಸಮಿತಿ ರಚಿಸಿ, ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ಇದೆಲ್ಲವನ್ನೂ ಬೇರಾವ ರಾಜ್ಯದಲ್ಲಾದರೂ ಮಾಡಲಾಗಿದೆಯೇ?’ ಎಂದು ಕೇಳಿದರು. 

‘ಅಸಮಾನತೆಯನ್ನು ಹೋಗಲಾಡಿಸಲೆಂದೇ ಭಾಗ್ಯಗಳು ಮತ್ತು ಗ್ಯಾರಂಟಿ ಯೋಜನೆಗಳನ್ನು ನೀಡಲಾಗಿದೆ. ಬುದ್ಧ , ಬಸವಣ್ಣ ಹಾಗೂ ಅಂಬೇಡ್ಕರ್ ಅವರಂತಹ ಮಹಾನ್ ಚೇತನರು ಈ ನಿಟ್ಟಿನಲ್ಲಿ ಪ್ರಯತ್ನಿಸಿದರು. ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಕೆಲವು ಮನುವಾದಿಗಳ ಸಂಚಿನಿಂದ ಇಂದಿಗೂ ಬದಲಾವಣೆ ಸಾಧ್ಯವಾಗಿಲ್ಲ. ಅವರು ಶೋಷಣೆ ಒಳಗೊಂಡಿರುವ ಸಮಾಜವನ್ನೇ ಬಯಸುತ್ತಿದ್ದಾರೆ’ ಎಂದರು.

‘ಸಚಿವ ಪ್ರಿಯಾಂಕ ಖರ್ಗೆಯವರು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘ–ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಕೋರಿ ಪತ್ರ ಬರೆದಿದ್ದರು. ತಮಿಳುನಾಡಿನಲ್ಲಿ ಈ ದಿಸೆಯಲ್ಲಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದಾಗಿ, ಅವರಿಗೂ ಬೆದರಿಕೆ ಬಂದಿದೆ. ಬೌದ್ಧ ಮಹಾಸಮ್ಮೇಳನ ನಡೆಸಿದ್ದಕ್ಕಾಗಿ ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಪುರುಷೋತ್ತಮ ಅವರಿಗೂ ಬೆದರಿಕೆ ಬರಬಹುದು’ ಎಂದರು.

‘ಅಂಬೇಡ್ಕರ್ ಯಾವುದೇ ಜಾತಿಯ ಪರವಾಗಿಯೂ ನಿಂತವರಲ್ಲ. ಎಲ್ಲಾ ಜಾತಿ ವರ್ಗಗಳನ್ನು ಒಂದೇ ಎಂದು ಪರಿಗಣಿಸುವ ಸಮಾನತೆ ಹಾಗೂ ಸಮಸಮಾಜ ನಿರ್ಮಾಣ ಆಗಬೇಕೆಂದು ಬಯಸಿದವರು. ಚಲನೆ ಇಲ್ಲದ ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬುವ ಮೂಲಕ ಚಲನೆ ನೀಡಬೇಕಾಗಿದೆ’ ಎಂದು ಹೇಳಿದರು.

ನಮ್ಮಲ್ಲಿ ಇಂದಿಗೂ ಇರುವ ಗುಲಾಮಗಿರಿಯ ಮನಸ್ಥಿತಿ ಕಿತ್ತೊಗೆಯಬೇಕು
ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.