ಮೈಸೂರು: ಕೊಲೆಯಾಗಿದ್ದಾರೆಂದು ಬಿಂಬಿಸಲಾಗಿದ್ದ ಮಹಿಳೆಯು (ಮಲ್ಲಿಗೆ) ಪ್ರಿಯತಮನೊಂದಿಗೆ ಪತ್ತೆಯಾದ ಪ್ರಕರಣದಲ್ಲಿ, →‘ನಿರಪರಾಧಿ’ಯಾಗಿ ಬಿಡುಗಡೆಗೊಂಡ ಆಕೆಯ ಪತಿ ಸುರೇಶ್ ಅವರಿಗೆ ಪೊಲೀಸರ →ವಿಚಾರಣೆಯಿಂದ ಮುಕ್ತಿ ದೊರೆತಿಲ್ಲ. ಅವರನ್ನು ಮತ್ತೆ ವಿಚಾರಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ.
ಸುರೇಶ್, ಅವರ ಮಗ ಕೃಷ್ಣ, ಮಲ್ಲಿಗೆಯ ತಾಯಿ ಗೌರಿ ಸಹಿತ ಹದಿನೇಳು ಜನ ಶನಿವಾರ ಬೈಲುಕುಪ್ಪೆ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗಬೇಕು ಎಂದು ಪೊಲೀಸರು ನೋಟಿಸ್ ನೀಡಿದ್ದಾರೆ. ‘ಕರ್ತವ್ಯ ಲೋಪದ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸುವ ಸಲುವಾಗಿ ಪೂರ್ವ ವಿಚಾರಣೆ ನಿಗದಿ
ಪಡಿಸಲಾಗಿದೆ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಪೊಲೀಸರು ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ, ಸುರೇಶ್ ತಪ್ಪು ಮಾಡಿಲ್ಲ’ ಎಂದು ಸ್ಪಷ್ಟಪಡಿಸಿ ನ್ಯಾಯಾಲಯವು ಏಪ್ರಿಲ್ 23ರಂದು ಆದೇಶ ಹೊರಡಿಸಿತ್ತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಬೈಲಕುಪ್ಪೆ ಸಿಪಿಐ ಬಿ.ಜಿ.ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗೆ ಹಾಗೂ ತನಿಖಾ ತಂಡದಲ್ಲಿದ್ದ ಅಂದಿನ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್, ಬೆಟ್ಟದಪುರ ಪಿಎಸ್‌ಐ ಮಹೇಶ್ ಕುಮಾರ್, ಎಸ್‌ಐ ಪ್ರಕಾಶ್ ಯತ್ತಿಮನಿ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಮೈಸೂರು ಐಜಿಪಿಗೆ ತಿಳಿಸಿತ್ತು.
ಮಲ್ಲಿಗೆಯು ಪತ್ತೆಯಾದ ಸಂದರ್ಭದಲ್ಲಿ ನ್ಯಾಯಾಲಯ ನೀಡಿದ ಸೂಚನೆಯಂತೆ, ಎಸ್‌ಪಿ ಎನ್.ವಿಷ್ಣುವರ್ಧನ್ ಅವರು ಸುರೇಶ್ ಹಾಗೂ ಪ್ರಕರಣದ ಸಾಕ್ಷಿಗಳ ವಿಚಾರಣೆ ನಡೆಸಿ, ನ್ಯಾಯಾ
ಲಯಕ್ಕೆ ವರದಿ ಒಪ್ಪಿಸಿದ್ದರು. ಮತ್ತೆ ಈಗ ಅವರನ್ನೇ ತನಿಖೆಗಾಗಿ ಎರಡನೇ ಬಾರಿ ಕರೆಸಿಕೊಳ್ಳಲಾಗುತ್ತಿದೆ.
‘ಸುರೇಶ್ ಹಾಗೂ ಪ್ರಕರಣದ ಸಾಕ್ಷಿಗಳನ್ನು ಮತ್ತೆ ಯಾಕೆ ತನಿಖೆ ನಡೆಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ವಿಚಾರಣೆಯಲ್ಲಿ ಏನು ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕು’ ಎಂದು ಸುರೇಶ್ ಪರ ವಕೀಲ ಪಾಂಡು ಪೂಜಾರಿ ತಿಳಿಸಿದರು.
ಸುರೇಶ್ ಮೇಲೆ ಒತ್ತಡ: ‘ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಲು ಸುರೇಶ್ ಪರ ವಕೀಲರು ಸಿದ್ಧತೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖಾ ತಂಡದಲ್ಲಿದ್ದ ಪೊಲೀಸ್ ಅಧಿಕಾರಿ
ಯೊಬ್ಬರು ತಮ್ಮ ಹೆಸರನ್ನು ಪ್ರಕರಣದಿಂದ ಕೈಬಿಡುವಂತೆ ಸಂಬಂಧಿಕರ ಮೂಲಕ ಸುರೇಶ್‌ಗೆ ಒತ್ತಡ ಹಾಕಿದ್ದಾರೆ. ಗ್ರಾಮದ ಮುಖಂಡರ ಮೂಲಕವೂ ಈ ಪ್ರಯತ್ನ ಆಗಿದೆ’ ಎನ್ನಲಾಗಿದೆ.
ಪ್ರಿಯತಮನೊಂದಿಗೆ ಹೋದ ಮಲ್ಲಿಗೆ ಆರಾಮವಾಗಿದ್ದಾಳೆ. ಪೊಲೀಸರ ಬಲೆಯಲ್ಲಿ ಸಿಲುಕಿದ ನನಗೆ ಹೊರಬರಲಾಗುತ್ತಿಲ್ಲ. ಮತ್ತೆ ವಿಚಾರಣೆಗೆ ಕರೆದಿದ್ದಾರೆ
ಸುರೇಶ್ ಪ್ರಕರಣದ ಸುತ್ತಮುತ್ತ...
ನಾಲ್ಕು ವರ್ಷದ ಹಿಂದೆ ಬೆಟ್ಟದಪುರದ ಶಾನುಭೋಗನಹಳ್ಳಿಯಲ್ಲಿ ದೊರಕಿದ್ದ ಮಹಿಳೆಯ ಶವವನ್ನು ಕುಶಾಲನಗರದ ಮಹಿಳೆ ಮಲ್ಲಿಗೆಯವರದ್ದು ಎಂದು ಬಿಂಬಿಸಿ ‘ಮಲ್ಲಿಗೆಯನ್ನು ಆಕೆಯ ಗಂಡ ಸುರೇಶ್ ಕೊಲೆ ಮಾಡಿದ್ದಾನೆ’ ಎಂದು ಆರೋಪಿಸಿ ಬೆಟ್ಟದಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಾಣಾಧೀನ ಕೈದಿಯಾಗಿದ್ದ ಸುರೇಶ್ ಜಾಮೀನಿನ ಮೂಲಕ ಬಿಡುಗಡೆಗೊಂಡಿದ್ದರು. ಏ.1ರಂದು ಮಲ್ಲಿಗೆಯು ತನ್ನ ಪ್ರಿಯತಮ ಗಣೇಶ್‌ನೊಂದಿಗೆ ಪತ್ತೆಯಾದ ಬಳಿಕ ಪ್ರಕರಣ ತಿರುವು ಪಡೆದುಕೊಂಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ಪೊಲೀಸ್ ತನಿಖಾಧಿಕಾರಿಗಳ ಕರ್ತವ್ಯ ಲೋಪವನ್ನು ಎತ್ತಿಹಿಡಿದು ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ಆದೇಶ ಹೊರಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.