ಮೈಸೂರು: ಉದ್ಯಮಿ ಹರ್ಷವರ್ಧನ ಕಿಕ್ಕೇರಿ (57) ಅಮೆರಿಕದ ವಾಷಿಂಗ್ಟನ್ ಸಮೀಪದ ನ್ಯೂ ಕ್ಯಾಸೆಲ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ನಿ ಶ್ವೇತಾ ಹಾಗೂ ಪುತ್ರನಿಗೆ ಗುಂಡಿಕ್ಕಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಮೆರಿಕ ಕಾಲಮಾನದಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದ್ದು, ಅಲ್ಲಿನ ಪೊಲೀಸರು ತನಿಖೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
7 ವರ್ಷದ ಮತ್ತೊಬ್ಬ ಪುತ್ರ ಮನೆಯ ಹೊರಗೆ ಇದ್ದುದರಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಹರ್ಷವರ್ಧನ ಅವರ ತಾಯಿ ಗಿರಿಜಾ ನಾರಾಯಣ್ ಹಾಗೂ ಸಹೋದರ ಚೇತನ್ ಇಲ್ಲಿನ ವಿಜಯನಗರದಲ್ಲಿ ನೆಲಸಿದ್ದಾರೆ. ಹರ್ಷವರ್ಧನ ಹಾಗೂ ಚೇತನ್ ಇಬ್ಬರೂ ಚೆಸ್ ಆಟಗಾರರಾಗಿದ್ದರು. ಭಾಷಾತಜ್ಞ ತಂದೆ ಕಿಕ್ಕೇರಿ ನಾರಾಯಣ್ 2017ರಲ್ಲಿ ಮೃತಪಟ್ಟಿದ್ದರು.
ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯವರಾದ ಹರ್ಷವರ್ಧನ್ ಅವರು ನಗರದ ಎಸ್‌ಜೆಸಿಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಮೈಕ್ರೋಸಾಫ್ಟ್ ಉದ್ಯೋಗಿಯಾಗಿದ್ದರು. ನಂತರ ರೋಬೊಟಿಕ್ ತಂತ್ರಜ್ಞಾನ ಆಧಾರಿತ ‘ಹೋಲೊವರ್ಲ್ಡ್’ ಹಾಗೂ ‘ಹೋಲೊಸ್ಯೂಟ್’ ಕಂಪನಿಗಳನ್ನು ಸ್ಥಾಪಿಸಿದ್ದರು.
ಅವರು ‘ಹೋಲೊವರ್ಲ್ಡ್’ ಕಂಪನಿಯ ಸಿಇಒ ಮತ್ತು ಸಿಟಿಒ ಆಗಿದ್ದರೆ, ಪತ್ನಿ ಶ್ವೇತಾ ಅಧ್ಯಕ್ಷರಾಗಿದ್ದರು. ಕಂಪನಿಯ ಉತ್ಪನ್ನಗಳಿಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಾಯಭಾರಿ ಆಗಿದ್ದರು. ಗಡಿಯಲ್ಲಿ ಯೋಧರಂತೆ ಕಾವಲು ಕಾಯುವ ರೋಬೊಟ್‌ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹರ್ಷ ಮಾತುಕತೆ ನಡೆಸಿದ್ದರು. ವಿಶ್ವಸಂಸ್ಥೆಯ ‘ನೊವುಸ್’ ಸಮ್ಮೇಳನದಲ್ಲಿ ಕಂಪನಿಗೆ ‘ಸುಸ್ಥಿರ ತಂತ್ರಜ್ಞಾನ ಕಂಪನಿ’ ಎಂಬ ಶ್ರೇಯ ಸಿಕ್ಕಿತ್ತು.
ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ನವೋದ್ಯಮ ಸ್ಥಾಪಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸು ತ್ತಿದ್ದರು. ನಗರದ ಎನ್‌ಐಇ, ಎಸ್‌ಜೆಸಿಇ ಕಾಲೇಜುಗಳು ಹಾಗೂ ಸಿಎಫ್‌ಟಿಆರ್‌ಐ ಕಾರ್ಯಕ್ರಮ, ತಂತ್ರಜ್ಞಾನ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು.
ವಿಜಯನಗರ ಮೂರನೇ ಹಂತದ ನಿರ್ಮಿತಿ ಕೇಂದ್ರದ ರಸ್ತೆಯಲ್ಲಿ 2018ರಲ್ಲಿ ‘ಹೋಲೊವರ್ಲ್ಡ್’ ಕಂಪನಿಯ ಕಾರ್ಪೊರೇಟ್ ಕಚೇರಿ ಆರಂಭಿಸಿ, ನಂತರ ಅಮೆರಿಕಕ್ಕೆ ವಾಪಸಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.