ADVERTISEMENT

ಕಾರಂತರ ಜನ್ಮದಿನ ಇನ್ನು ರಂಗಸಂಗೀತ ದಿನ

ಮುಂದಿನ ವರ್ಷದಿಂದ ವಿಜೃಂಭಣೆಯಿಂದ ಆಚರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:52 IST
Last Updated 20 ಸೆಪ್ಟೆಂಬರ್ 2020, 2:52 IST
ಮೈಸೂರು ರಂಗಾಯಣ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಪರಮಶಿವನ್ ಅವರು ‘ಭಾರತೀಯ ರಂಗಸಂಗೀತ ದಿನ’ದ ಘೋಷಣಾ ಪತ್ರ ಬಿಡುಗಡೆ ಮಾಡಿದರು. ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ, ಅಡ್ಡಂಡ ಸಿ.ಕಾರ್ಯಪ್ಪ, ಶ್ರೀನಿವಾಸ್ ಜಿ.ಕಪ್ಪಣ್ಣ ಇದ್ದಾರೆ
ಮೈಸೂರು ರಂಗಾಯಣ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಪರಮಶಿವನ್ ಅವರು ‘ಭಾರತೀಯ ರಂಗಸಂಗೀತ ದಿನ’ದ ಘೋಷಣಾ ಪತ್ರ ಬಿಡುಗಡೆ ಮಾಡಿದರು. ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ, ಅಡ್ಡಂಡ ಸಿ.ಕಾರ್ಯಪ್ಪ, ಶ್ರೀನಿವಾಸ್ ಜಿ.ಕಪ್ಪಣ್ಣ ಇದ್ದಾರೆ   

ಮೈಸೂರು: ರಂಗಾಯಣದ ಸ್ಥಾಪಕ ಹಾಗೂ ರಂಗ ನಿರ್ದೇಶಕ ಬಿ.ವಿ.ಕಾರಂತ ಅವರ ಜನ್ಮದಿನವಾದ ಸೆ.19 ಅನ್ನು ಮುಂದಿನ ವರ್ಷದಿಂದ ‘ಭಾರತೀಯ ರಂಗಸಂಗೀತ ದಿನ’ವನ್ನಾಗಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಮೈಸೂರು ರಂಗಾಯಣ ಶುಕ್ರವಾರ ಘೋಷಿಸಿದೆ.

ರಂಗಾಯಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುಬ್ಬಿ ನಾಟಕ ಕಂಪನಿಯ ಸಂಗೀತ ನಿರ್ದೇಶಕ ಪರಮಶಿವನ್ ಈ ಘೋಷಣೆ ಮಾಡಿ, ಘೋಷಣಾ ಪತ್ರ ಬಿಡುಗಡೆಗೊಳಿಸಿದರು.

ರಂಗಸಂಗೀತಕ್ಕೆ ಕಾರಂತರು ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ದೇಶದ ಖ್ಯಾತ ರಂಗಕರ್ಮಿಗಳ ಸಲಹೆ–ಸೂಚನೆ ಪಡೆಯಲಾಗಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.

ADVERTISEMENT

ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಮಾತನಾಡಿ, ‘ರಂಗಸಂಗೀತ ದಿನವನ್ನಾಗಿ ಕೇವಲ ರಂಗಾಯಣ ವತಿಯಿಂದ ಘೋಷಿಸಿದರೆ ಸಾಲದು. ಇದಕ್ಕೆ ಅಧಿಕೃತ ಮುದ್ರೆ ಸಿಗಬೇಕು. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು. ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಸಲಹೆ ಮಾಡಿದರು.

‘ಜನ್ಮದಿನ ಹಾಗೂ ಇತರ ಆಚರಣೆಗಳಲ್ಲಿ ಕಾರಂತರು ನಂಬಿಕೆ ಇಟ್ಟವರಲ್ಲ. ತುಸು ಗೊಂದಲದ ವ್ಯಕ್ತಿ ಕೂಡ. ಆದರೆ, ಅವರನ್ನು ನೆನಪಿಸಿಕೊಳ್ಳಲು ಇದು ಸೂಕ್ತವಾದ ದಿನ. ಹಲವು ಭಾಷೆಗಳಲ್ಲಿ ರಂಗ ಸಂಗೀತ ಸಂಯೋಜನೆ ಮಾಡಿದ ಕಾರಂತ ಅವರಂಥ ಮತ್ತೊಬ್ಬ ವ್ಯಕ್ತಿ ಈ ದೇಶದಲ್ಲಿ ಇಲ್ಲ. ದೇಶಿ ಸೂತ್ರ ಹಿಡಿದು ಮುಂದೆ ಸಾಗಿದ್ದರು. ಷೇಕ್ಸ್‌ಪಿಯರ್‌ನ ಮೆಕ್‌ಬೆತ್‌ ನಾಟಕದಲ್ಲಿ ಯಕ್ಷಗಾನ ಪ್ರಯೋಗ ಮಾಡಿದ್ದರು’ ಎಂದು ಶ್ಲಾಘಿಸಿದರು.

ಕಾರಂತರು ರಂಗಾಯಣದ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ ಗೀತೆಗಳನ್ನು ರಂಗಾಯಣದ ಕಲಾವಿದರು ಪ್ರಸ್ತುತಪಡಿಸಿದರು. ಇದು ರಂಗಾಯಣದ ಫೇಸ್‌ಬುಕ್‌ ಪೇಜ್‌ನಲ್ಲೂ ಲಭ್ಯವಿರಲಿದೆ.

ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಅವರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಇಡೀ ಕಾರ್ಯಕ್ರಮ ವೀಕ್ಷಿಸಿದರು. ರಂಗಾಯಣ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.