ಹುಣಸೂರು: ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ ಬಡವ ಭೂಮಿ ಹಕ್ಕು ನೀಡಿ ರಾಷ್ಟ್ರಕ್ಕೆ ಮಾದರಿಯಾಗಿದ್ದ ನಾಡಿನಲ್ಲಿ ಅಹೋರಾತ್ರಿ ಸುಗ್ರೀವಾಜ್ಞೆ ರಕ್ಷಣೆಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಅನ್ನದಾತನ ಹಕ್ಕು ಕಸಿದುಕೊಂಡಿದೆ ಎಂದು ಐಎಎಸ್ ಮಾಜಿ ಅಧಿಕಾರಿ ಶಶಿಕಾಂತ್ ಸೆಂಥಿಲ್ ವಿಷಾದಿಸಿದರು.
ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಭೂಸುಧಾರಣಾ ಕಾಯ್ದೆಯ ಹರಿಕಾರ ದೇವರಾಜ ಅರಸು ಸಮಾಧಿಗೆ ಸೋಮವಾರ ಹಣತೆ ದೀಪ ಬೆಳಗಿಸಿ ’ನಮ್ಮ ಭೂಮಿ ನಮ್ಮ ಹಕ್ಕು –ಭಿಕ್ಷೆಯಲ್ಲ’ ಜನಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
21ನೇ ಶತಮಾನದಲ್ಲಿ ಭೂ ಹೀನರೂ ಬದುಕು ಕಟ್ಟಿಕೊಳ್ಳುವ ಆಶಾದಾಯಕ ಕಾಯ್ದೆ ರಾಜ್ಯದಲ್ಲಿ ದೇವರಾಜ ಅರಸು ಜಾರಿಗೊಳಿಸಿ ಪ್ರತಿಯೊಬ್ಬರೂ ಹಿಡುವಳಿದಾರರಾಗಿ ಸ್ವಾಭಿಮಾನಿ ಬದುಕಿಗೆ ದಾರಿ ದೀಪವಾಗಿದ್ದರು. ಕೋವಿಡ್ ನೆಪದಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿ ಭೂ ಮತ್ತು ವಸತಿ ಹಕ್ಕನ್ನು ಬಡವರಿಂದ ಕಸಿದುಕೊಂಡ ಈ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ ಇಲ್ಲದೆ ತಲೆ ಎತ್ತುವ ಕಾಯ್ದೆಗಳು ಉರುಳಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಡವಾಳಕ್ಕೆ ಮಣೆ: ಬಗರ್ ಹುಕುಂ ಭೂಮಿ ಉಳುಮೆ ಮಾಡಿ ಬದುಕು ಕಟ್ಟಿಕೊಂಡಿದ್ದ ರೈತ, ದಲಿತರ ಹಕ್ಕು ಕಸಿದುಕೊಂಡಿದೆ. ದೇವರಾಜ ಅರಸು ಅವರು ತಳಸಮುದಾಯ ಸುಧಾರಣೆಗೆ, ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಮನೆ ದೀಪ ಬೆಳಗಿಸಿದರು. ಮಹಾಪುರಷರಾಗಿದ್ದ ನಾಡಿನಲ್ಲಿ ಬಂಡವಾಳ ಶಾಹಿಗಳಿಗೆ ಕೆಂಪು ಹಾಸು ಹಾಸಿ ರಾಜ್ಯ ಸರ್ಕಾರ ಸಾಮಾಜಿಯ ನ್ಯಾಯ ಕಿತ್ತುಕೊಂಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.