ADVERTISEMENT

ಮೈಸೂರು | ‘ಕ್ಯಾನ್ಸರ್‌ ಪೀಡಿತರಿಗೆ ಆತ್ಮಸ್ಥೈರ್ಯ ತುಂಬಿ’

ಕಾರ್ಸಿನೋ ಯೋಗ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 5:09 IST
Last Updated 10 ಸೆಪ್ಟೆಂಬರ್ 2025, 5:09 IST
ಕಾರ್ಸಿನೋ ಯೋಗ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳೊಂದಿಗೆ ಡಾ. ವಿಜಯಲಕ್ಷ್ಮೀ ದೇಶಮಾನೆ, ಡಾ. ಕುಮಾರಸ್ವಾಮಿ, ಡಾ. ಲಕ್ಷ್ಮೀನಾರಾಯಣ ಶೆಣೈ, ಡಾ. ಗುರುಬಸವರಾಜ ಹಾಗೂ ಡಾ. ಎಸ್‌.ಎಸ್. ಪ್ರಕಾಶ್‌ ಜೊತೆಗಿದ್ದಾರೆ – ಪ್ರಜಾವಾಣಿ ಚಿತ್ರ
ಕಾರ್ಸಿನೋ ಯೋಗ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳೊಂದಿಗೆ ಡಾ. ವಿಜಯಲಕ್ಷ್ಮೀ ದೇಶಮಾನೆ, ಡಾ. ಕುಮಾರಸ್ವಾಮಿ, ಡಾ. ಲಕ್ಷ್ಮೀನಾರಾಯಣ ಶೆಣೈ, ಡಾ. ಗುರುಬಸವರಾಜ ಹಾಗೂ ಡಾ. ಎಸ್‌.ಎಸ್. ಪ್ರಕಾಶ್‌ ಜೊತೆಗಿದ್ದಾರೆ – ಪ್ರಜಾವಾಣಿ ಚಿತ್ರ   

ಮೈಸೂರು: ‘ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಮಾಡುವ ಜೊತೆಗೆ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದೂ ಮುಖ್ಯ’ ಎಂದು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿವೃತ್ತ ನಿರ್ದೇಶಕಿ ಡಾ. ವಿಜಯಲಕ್ಷ್ಮೀ ದೇಶಮಾನೆ ಹೇಳಿದರು.

ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಮೈಸೂರು ವೈದ್ಯಕೀಯ ಕಾಲೇಜಿನ ಕ್ಯಾನ್ಸರ್‌ ವಿಭಾಗದ ಸಹಯೋಗದಲ್ಲಿ ಜೆ.ಕೆ. ಮೈದಾನದ ಸಭಾಂಗಣದಲ್ಲಿ ಮಂಗಳವಾರ ನಡೆದ ಕ್ಯಾನ್ಸರ್‌ ಮತ್ತು ಕಾರ್ಸಿನೋ ಯೋಗ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕ್ಯಾನ್ಸರ್‌ ಬಂದಾಗ ರೋಗಿಗೆ ಕೊನೆಯವರೆಗೂ ಕೇವಲ ಕಿಮೋಥೆರಪಿ ನೀಡಬಾರದು. ಜೊತೆಗೆ ಆತ್ಮಸೈರ್ಯ ತುಂಬಬೇಕು. ಯೋಗ, ಧ್ಯಾನ, ಪ್ರಾರ್ಥನೆಯಂತಹ ಸಮಗ್ರ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದರು.

‘ಭಾರತದಲ್ಲೂ ಈಚೆಗೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಲಿವೆ. ರೋಗಲಕ್ಷಣಗಳನ್ನು ಬೇಗ ಪತ್ತೆ ಮಾಡಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಗುಣಮುಖವಾಗಬಹುದು. ಅದಕ್ಕೆ ತಕ್ಕಂತೆ ನಮ್ಮ ಜೀವನ ವಿಧಾನವನ್ನೂ ಬದಲಿಸಿಕೊಳ್ಳುವ ಅಗತ್ಯವಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಕುಮಾರಸ್ವಾಮಿ ‘ಯೋಗವು ಜೀವನದ ಅವಿಭಾಜ್ಯ ಅಂಗ. ಯೋಗ ಮತ್ತು ಆಯುರ್ವೇದದಿಂದಲೂ ರೋಗ ಗುಣಪಡಿಸಬಹುದು’ ಎಂದು ಅಷ್ಟಾಂಗ ಯೋಗದ ಧಾರಣ ಪದ್ಧತಿಯ ಬಗ್ಗೆ ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ ‘ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು, ವರ್ಷವಿಡೀ ನಡೆಯಬೇಕು ಎಂಬ ಉದ್ದೇಶದಿಂದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕಾರ್ಡಿಯೋ, ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಮಾನಸ ಯೋಗ, ಮೈಸೂರು ವಿವಿಯಲ್ಲಿ ಯುವ ಯೋಗ ಹಾಗೂ ಇದೀಗ ಕಾರ್ಸಿನೋ ಯೋಗ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸಿ, ಅರಿವು ಮೂಡಿಸಲಾಗುತ್ತಿದೆ’ ಎಂದರು.

ಮೈಸೂರು ವೈದ್ಯಕೀಯ ಕಾಲೇಜು ಕ್ಯಾನ್ಸರ್‌ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಎಸ್.ಎಸ್. ಪ್ರಕಾಶ್‌, ಆಯುರ್ವೇದ ವೈದ್ಯರಾದ ಡಾ. ಗುರುಬಸವರಾಜು, ಡಾ. ಅರುಣಾ, ಡಾ. ಪರಶುರಾಂ, ಡಾ. ಎಚ್.ಎಸ್‌. ಶಿಲ್ಪಲತಾ, ಡಾ. ಎಂ.ಸಿ. ಶೋಭಾ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.