ADVERTISEMENT

ಹುಣಸೂರು: ಕಾಡಾನೆ ದಾಳಿಗೆ ಕಾರು, ಟ್ರಾಕ್ಟರ್ ಜಖಂ

ನಾಗರಹೊಳೆ ಅರಣ್ಯದಂಚಿನಲ್ಲಿ ಮತ್ತೆ ಸಲಗದ ದಾಂದಲೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 3:53 IST
Last Updated 17 ಫೆಬ್ರುವರಿ 2021, 3:53 IST
ಚಿಕ್ಕಹೆಜ್ಜೂರು ಗ್ರಾಮ ದಲ್ಲಿ ಸೋಮವಾರ ರಾತ್ರಿ ಕಾಡಾನೆ ದಾಳಿಗೆ ಜಖಂಗೊಂಡ ಕಾರು
ಚಿಕ್ಕಹೆಜ್ಜೂರು ಗ್ರಾಮ ದಲ್ಲಿ ಸೋಮವಾರ ರಾತ್ರಿ ಕಾಡಾನೆ ದಾಳಿಗೆ ಜಖಂಗೊಂಡ ಕಾರು   

ಹುಣಸೂರು: ನಾಗರಹೊಳೆ ಅರಣ್ಯದಂಚಿನ ಚಿಕ್ಕಹೆಜ್ಜೂರು ಮತ್ತು ಮುದಗನೂರು ಗ್ರಾಮದಲ್ಲಿ ಕಾಡಾನೆ ದಾಳಿ ಮುಂದುವರೆದಿದ್ದು ಸೋಮವಾರ ರಾತ್ರಿ ಕಾರು ಮತ್ತು ಟ್ರಾಕ್ಟರ್ ಮೇಲೆ ದಾಳಿ ನಡೆಸಿ ಜಖಂಗೊಳಿಸಿವೆ.

ಎರಡು ದಿನದಿಂದ ನಿರಂತರವಾಗಿ ನಾಗರಹೊಳೆ ವೀರನಹೊಸಹಳ್ಳಿ ವಲಯದ ಅರಣ್ಯದಂಚಿನ ಚಿಕ್ಕಹೆಜ್ಜೂರು ಮತ್ತು ಮುದಗನೂರು ಗ್ರಾಮಗಳಿಗೆ ರಾತ್ರಿ ವೇಳೆ ಕಾಡಾನೆ ದಾಳಿ ನಡೆಸಿ ಮನೆಯ ಹೊರ ಭಾಗದಲ್ಲಿ ನಿಲ್ಲಿಸಿದ ವಾಹನಗಳನ್ನು ಜಖಂಗೊಳಿಸುತ್ತಿವೆ. ಶನಿವಾರದ ದಾಳಿಯಲ್ಲಿ ಎರಡು ಟ್ರಾಕ್ಟರ್ ಮತ್ತು ಮನೆ ಜಖಂಗೊಳಿಸಿದ್ದು, ಈ ಘಟನೆಯಲ್ಲಿ ಆನೆಯ ದಂತ ಮುರಿದಿತ್ತು.

ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ಮುದಗನೂರು ಗ್ರಾಮದ ಶ್ರೀನಿವಾಸ್ ಅವರಿಗೆ ಸೇರಿದ ಟ್ರಾಕ್ಟರ್ ಟ್ರೇಲರ್ ಹಳ್ಳಕ್ಕೆ ತಳ್ಳಿ ಜಖಂಗೊಂಡಿದ್ದು, ಚಿಕ್ಕಹೆಜ್ಜೂರು ಗಿರಿಜನರ ಹಾಡಿಯ ನಿವಾಸಿ ಭಾಸ್ಕರ್‌ ಅವರ ಮಾರುತಿ ಕಾರಿನ ಗಾಜು ಒಡೆದಿದೆ.

ADVERTISEMENT

ಸಲಗದ ಪುಂಡಾಟದ ವಿಷಯ ತಿಳಿದು ಆರ್‌ಎಫ್‌ಒ ನಮನ್ ನಾರಾಯಣ್ ನಾಯಕ್, ಡಿಆರ್‌ಎಫ್‌ಒಗಳಾದ ಚಂದ್ರೇಶ್, ದ್ವಾರಕನಾಥ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಪುಂಡಾನೆಯನ್ನು ಹಿಂಬಾಲಿಸಿ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ವುಡ್‌ಲಾಟ್ ಮೂಲಕ ವೀರನಹೊಸಹಳ್ಳಿ ವಲಯದ ಅರಣ್ಯ ಪ್ರದೇಶಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನರ ಆತಂಕ: ಸಲಗದ ಕಾಟಕ್ಕೆ ಜನರು, ರೈತರು ಆತಂಕಕ್ಕೆ ಒಳಗಾಗಿದ್ದು, ಆನೆಗಳು ಅರಣ್ಯದಿಂದ ಹೊರಬಾರದಂತೆ ಹೆಚ್ಚಿನ ಸಿಬ್ಬಂದಿ ನೇಮಿಸಿ. ರಾತ್ರಿ ಕಾವಲು ಕಾಯುವಂತೆ ಹಾಗೂ ತಕ್ಷಣವೇ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.