ಮೈಸೂರು: ‘ಹಿಂದುಳಿದ ವರ್ಗಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ನ್ಯಾಯ ಸಿಗಬೇಕಾದರೆ ಕೇಂದ್ರ ಸರ್ಕಾರವು ವ್ಯವಸ್ಥಿತ ಮತ್ತು ವೈಜ್ಞಾನಿಕವಾಗಿ ನಡೆಸುವ ಜಾತಿ ಮತ್ತು ಜನ ಗಣತಿಗೆ ರಾಜ್ಯ ಸರ್ಕಾರವು ಕೈ ಜೋಡಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯು ಆಯೋಜಿಸಿದ್ದ ‘ಜಾತಿ ಜನ ಗಣತಿ ಹಿನ್ನೆಲೆ-ಮುನ್ನೆಲೆ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಮತ್ತು ಜನಗಣತಿಗೆ ಕಾನೂನಾತ್ಮಕವಾಗಿ ಸಂವಿಧಾನದ ಮನ್ನಣೆ ಇದೆ. ದೇಶದಲ್ಲಿ 1931ರಿಂದ ಇದುವರೆವಿಗೂ ಜಾತಿ ಗಣತಿಯಾಗಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಗಣತಿಯ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ನಾಡಿನ ಜನತೆ ಬೆಂಬಲಿಸಬೇಕಿದೆ’ ಎಂದರು.
‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ನಡೆಸುವ ನೆಪದಲ್ಲಿ ಜನರ ₹165 ಕೋಟಿ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ. ಈಗಾಗಲೇ ಸಿದ್ಧಗೊಂಡ ಕಾಂತರಾಜು ಆಯೋಗದ ವರದಿಯನ್ನು ಮೂಲೆ ಗುಂಪು ಮಾಡಿ ಮತ್ತೆ ಜಾತಿವಾರು ಗಣತಿಯನ್ನು ಒಂದು ತಿಂಗಳಲ್ಲಿ ನಡೆಸುವುದಾಗಿ ಹೇಳಿದ್ದಾರೆ. ಅದು ಅಸಾಧ್ಯದ ಮಾತಾಗಿದೆ’ ಎಂದು ಟೀಕಿಸಿದರು.
‘ಕೇಂದ್ರ ಸರ್ಕಾರವು ವೈಜ್ಞಾನಿಕವಾಗಿ ನಡೆಸುವ ಸಮೀಕ್ಷೆಯಿಂದ ಹಿಂದುಳಿದ ವರ್ಗದವರು ಎಷ್ಟು ಸಂಖ್ಯೆಯಲ್ಲಿ ಇದ್ದಾರೆ, ಅವರ ಆರ್ಥಿಕ ಸ್ಥಿತಿಗತಿ ಏನು ಎಂಬ ನಿಖರ ಮಾಹಿತಿ ಸಿಗುತ್ತದೆ. ಇದರ ಮೂಲಕ ಅಂತಹ ಸಮುದಾಯಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರ ಸಮಿತಿ ನೇಮಿಸಿ ಸಮಿತಿ ನೀಡುವ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧ ಮಾಡಬಹುದಾಗಿದೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ‘ಹಿಂದುಳಿದ ಜಾತಿಗಳ ಹೆಸರೇ ಗೊತ್ತಿಲ್ಲದ ಸಿದ್ದರಾಮಯ್ಯ ಅವರೇ ಹಿಂದುಳಿದ ವರ್ಗದ ನಾಯಕರಾಗಿದ್ದಾರೆ’ ಎಂದು ಲೇವಡಿ ಮಾಡಿದರು.
‘ರಾಜ್ಯ ಸರ್ಕಾರ ಈಗಾಗಲೇ ಜಾತಿ ಗಣತಿ ನಡೆಸಿ ಅನುಷ್ಠಾನಗೊಳಿಸದೇ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡಿದೆ. ಈಗ ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ನಡೆಸುತ್ತಿರುವ ಜಾತಿ ಮತ್ತು ಜನ ಗಣತಿಯ ಬಗ್ಗೆ ಜನ ಸಾಮಾನ್ಯರಿಗೆ ಸ್ಪಷ್ಟವಾಗಿ ತಿಳಿಸುವ ಕಾರ್ಯ ನಡೆಯಬೇಕಿದೆ. ಹಿಂದುಳಿದವರ ಮನೆ ತಲುಪಬೇಕಿದೆ’ ಎಂದು ಸಲಹೆ ನೀಡಿದರು.
ರಾಜ್ಯಸಭಾ ಸದಸ್ಯ, ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಕೆ. ಲಕ್ಷ್ಮಣ್ ಮಾತನಾಡಿದರು. ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೋಟಾ ಶ್ರೀನಿವಾಸ್ ಪೂಜಾರಿ, ಮೈಸೂರು ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಹೇಮಂತ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಡಿ.ಜಗನ್ನಾಥ್ ಸಾಗರ್, ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಪಾಲ್ಗೊಂಡಿದ್ದರು.
‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ’
‘ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೇ ಅಧಿಕಾರಕ್ಕೆ ತಂದ ನಮಗೆ ಒಳ್ಳೆಯದೇ ಆಗಲಿಲ್ಲ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ನಮಗೇನೂ ಆಗಲಿಲ್ಲ. ಇದುವರೆವಿಗೂ ಬಿಜೆಪಿ ಕಾರ್ಯಕ್ರಮಗಳಿಗೆ ಯಾರೂ ಸಹ ನಮ್ಮನ್ನು ಕರೆಯಲಿಲ್ಲ. ಈಗ ಬಿಜೆಪಿ ಜಿಲ್ಲಾ ಅಧ್ಯಕ್ಷರು ಆಹ್ವಾನಿಸಿರುವುದು ಒಳ್ಳೆಯ ಬೆಳವಣಿಗೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಮುಖ್ಯವಾಗಿದೆ’ ಎಂದು ಎ.ಎಚ್. ವಿಶ್ವನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.