ADVERTISEMENT

ಎಲ್ಲರ ಏಳಿಗೆಗೆ ಜಾತಿ ಜನಗಣತಿ ಅಗತ್ಯ: ಎ.ನಾರಾಯಣ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ ‍ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 13:28 IST
Last Updated 1 ಜೂನ್ 2025, 13:28 IST
ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ ‘ಜಾತಿ ಜನಗಣತಿ - ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ‍ಪ್ರೊ.ಎ. ನಾರಾಯಣ ಮಾತನಾಡಿದರು. ಜಿ.ಕೆ. ಮೋಹನ್, ಸುಹೈಲ್ ಅಹ್ಮದ್, ಸುಧಾ ಶಿವಮಲ್ಲು ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ ‘ಜಾತಿ ಜನಗಣತಿ - ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ‍ಪ್ರೊ.ಎ. ನಾರಾಯಣ ಮಾತನಾಡಿದರು. ಜಿ.ಕೆ. ಮೋಹನ್, ಸುಹೈಲ್ ಅಹ್ಮದ್, ಸುಧಾ ಶಿವಮಲ್ಲು ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಎಲ್ಲ ಜಾತಿಗಳ ಏಳಿಗೆಗಾಗಿ ಜಾತಿ ಜನಗಣತಿ ಅಗತ್ಯವಾಗಿದೆ’ ಎಂದು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ ‍ಪ್ರತಿಪಾದಿಸಿದರು.

ಜಾಗೃತ ಕರ್ನಾಟಕ ಮೈಸೂರು ವಲಯದಿಂದ ಭಾನುವಾರ ಇಲ್ಲಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ‘ಜಾತಿ ಜನಗಣತಿ–ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಲವು ಕಾರಣಗಳಿಂದ ಜಾತಿಜನಗಣತಿ ಬೇಕಾಗಿದೆ. ಜಾತಿ–ಜಾತಿಗಳ ನಡುವೆ ಕೆಟ್ಟಿರುವ ಸಂಬಂಧ ಸರಿಪಡಿಸಲು, ಪರಸ್ಪರ ಮೂಡಿಸಲಾಗಿರುವ ಅಪನಂಬಿಕೆ ಹೋಗಲಾಡಿಸಲು ಅಗತ್ಯವಾಗಿದೆ’ ಎಂದರು.

ADVERTISEMENT

ಸ್ಥಿತಿಗತಿ ತಿಳಿದುಕೊಳ್ಳಲು: ‘ಜಾತಿಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಿತಿಗತಿ ತಿಳಿದುಕೊಳ್ಳಲು ಜಾತಿಜನಗಣತಿ ಬೇಕಾಗಿದೆ. ಯಾವುದೇ ವ್ಯವಸ್ಥೆಯಲ್ಲಿ ಅಸಮಾನತೆ ಹಾಗೂ ಪಾಳೇಗಾರಿಕೆ ಇರಬಾರದು. ಇದನ್ನು ಸರಿಪಡಿಸಲು ಯಾವ ಜಾತಿಯವರು ಎಷ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇವರೆಗೆ ಲಾಭ ಪಡೆದುಕೊಂಡವರು ಯಾರು ಎಂಬುದು ಬಹಿರಂಗ ಆಗಬೇಕಾಗುತ್ತದೆ’ ಎಂದು ಹೇಳಿದರು.

‘ಹಿಂದೆ ಜಾತಿಜನಗಣತಿಯನ್ನು ವಿರೋಧಿಸುತ್ತಿದ್ದವರೇ ಈಗ ನಡೆಸುತ್ತೇವೆ ಎನ್ನುತ್ತಿದ್ದಾರೆ. ಮುಂದಿನ ಜನಗಣತಿಯೊಂದಿಗೆ ಜಾತಿ ಜನಗಣತಿಯನ್ನೂ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರವೇ ಪ್ರಕಟಿಸಿದೆ. ಈ ಗಣತಿಯನ್ನು ಹಂಗಿಸುವ ಕೆಲಸವನ್ನು ರಾಜ್ಯದ ಆ ಪಕ್ಷದ ನಾಯಕರು ಮಾಡುತ್ತಿದ್ದರು. ಆದರೆ, ಕೇಂದ್ರ ಇದ್ದಕ್ಕಿದ್ದಂತೆಯೇ ಯೂಟರ್ನ್‌ ತೆಗೆದುಕೊಂಡಿತು. ಈ ವಿಷಯದಲ್ಲಿ ಕಾಂಗ್ರೆಸ್‌ನದ್ದೂ ಯೂಟರ್ನೇ. ಇದೆಲ್ಲವನ್ನೂ ನಾವು ಸೂಕ್ಷ್ಮವಾಗಿ ಯೋಚಿಸಬೇಕಾಗುತ್ತದೆ’ ಎಂದು ತಿಳಿಸಿದರು.

‘ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನದಲ್ಲಿ ನಿರ್ದಿಷ್ಟವಾಗಿ ಹೇಳಿಲ್ಲ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳಷ್ಟೆ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದರೂ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಟ್ಟಿಲ್ಲ.‌ ಆದರೆ, ಸರ್ಕಾರ ವಿಶೇಷ ಸವಲತ್ತು ಒದಗಿಸಿದರೆ ಯಾವುದೇ ಅಡ್ಡಿ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರು ಯಾರು ಎಂಬುದನ್ನು ತಿಳಿದುಕೊಳ್ಳಲು ಜಾತಿ ಜನಗಣತಿ ಬೇಕಾಗುತ್ತದೆ’ ಎಂದು ಹೇಳಿದರು.

ಯಾವ ಶಕ್ತಿಯೂ ತಡೆಯಲಾಗದು: ‘ಜಾತಿ ಜನಗಣತಿ ಬೇಕೇ ಬೇಕು ಎಂದು ದೊಡ್ಡ ಮಟ್ಟದಲ್ಲಿ ಒತ್ತಡ ತಂದವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಹೀಗೆ, ಕಾಂಗ್ರೆಸ್ ಹಾಗೂ ಬಿಜೆಪಿ ಅಭಿಪ್ರಾಯ‌ ಬದಲಿಸುವ ಪರಿಸ್ಥಿತಿ ಏಕೆ ಬಂತು? ಇದನ್ನು ಯಾವುದೇ ರಾಜಕೀಯ ಶಕ್ತಿಯೂ ಮುಂದೆ ಹಾಕಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ ಅನಿವಾರ್ಯ ಎದುರಾಗಿದೆ’ ಎಂದು ಪ್ರತಿಪಾದಿಸಿದರು.

‘ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಆದರೆ, ಸರಾಸರಿ ತಲಾ ಆದಾಯ ಬಹಳ ಕಡಿಮೆ ಇದೆ. ಸಂಪತ್ತು ಕೆಲವೇ ವ್ಯಕ್ತಿಗಳ ಬಳಿಯಷ್ಟೇ ಇದೆ. ಇದರಿಂದಾಗಿ ಜನಸಾಮಾನ್ಯರ ಬದುಕಿನಲ್ಲಿ ಬಹಳ ದೊಡ್ಡ ಬದಲಾವಣೆಯೇನೂ ಆಗಿಲ್ಲ. ಇದರಲ್ಲಿ ಜಾತಿಯ ಆಯಾಯವೂ ಇದೆ. ಕೆಲವೇ ಜಾತಿಗಳ ಕೆಲವರಷ್ಟೆ ಆರ್ಥಿಕವಾಗಿ ಮುಂದಿದ್ದಾರೆ. ಎಲ್ಲ ಜಾತಿಗಳೂ ಬೆಳೆಯುತ್ತಿಲ್ಲ. ಆದ್ದರಿಂದ, ಎಲ್ಲ ಜಾತಿಗಳ ಏಳಿಗೆಗಾಗಿ ಜಾತಿ ಜನಗಣತಿ ಬೇಕು. ಇದು ಯಾರೋ‌ ಯಾರಿಗೋ ಮಾಡುವ ಉಪಕಾರವಲ್ಲ. ದೇಶ ಆರ್ಥಿಕ ಸೇರಿದಂತೆ ಎಲ್ಲ ರಂಗದಲ್ಲೂ ಸಮಗ್ರವಾಗಿ ಬೆಳೆಯಬೇಕಾದರೆ ಜಾತಿ ಜನಗಣತಿ ನಡೆಸಬೇಕಾಗುತ್ತದೆ’ ಎಂದರು.

‘ಮೀಸಲಾತಿ ಬಗ್ಗೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸಬೇಕು. ಮೀಸಲಾತಿ ಎನ್ನುವುದು ಬಡತನ ನಿರ್ಮೂಲನೆ ವ್ಯವಸ್ಥೆ ಅಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು’ ಎಂದು ಹೇಳಿದರು.

ಜಾಗೃತ ಕರ್ನಾಟಕ ಮೈಸೂರು ಮುಖಂಡ ಜಿ.ಕೆ. ಮೋಹನ್ ಪಾಲ್ಗೊಂಡಿದ್ದರು. 

‘ಮೌನವನ್ನು ಪ್ರಶ್ನಿಸಬೇಕಾಗಿದೆ’

‘ರಾಜ್ಯ ಸರ್ಕಾರವು ತನ್ನ ಮುಂದಿರುವ ‘ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿ’ (ಜಾತಿ ಜನಗಣತಿ) ಬಗ್ಗೆ ತಳೆದಿರುವ ಮೌನವನ್ನು ನಾವೆಲ್ಲರೂ ‌ಪ್ರಶ್ನೆ ಮಾಡಬೇಕಾಗಿದೆ. ಆ ವರದಿಯಲ್ಲಿರುವಂತೆ ಜಾತಿಗಳ ಈಗಿನ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯನ್ನು ಬಹಿರಂಗಪಡಿಸಬೇಕು. ಯಾರ ಬಳಿ ಎಷ್ಟು ಸಂಪತ್ತಿದೆ ಸಾಮಾಜಿಕವಾಗಿ ಯಾರು ಎಲ್ಲಿದ್ದಾರೆ ಎಂಬುದು ಗೊತ್ತಾಗಬೇಕು.‌ ಅದು ಸಾಧ್ಯವಾದರೆ ಎಲ್ಲರ ಸಾಮಾಜಿಕ ಸಂಬಂಧ ಸುಧಾರಿಸುತ್ತದೆ’ ಎಂದು ನಾರಾಯಣ ಹೇಳಿದರು.

ಜನರು ಮುಂಬರುವ ಜಾತಿ ಜನಗಣತಿಯಲ್ಲಿ ಪಾಲ್ಗೊಳ್ಳಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಹೆಚ್ಚಬೇಕು ‍
ಪ್ರೊ.ಎ. ನಾರಾಯಣ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.