ADVERTISEMENT

ಒಳಮೀಸಲಾತಿ ಜಾರಿ ಕುರಿತು ಮನೆಮನೆ ಸಮೀಕ್ಷೆ: ಮಾದಿಗ ಎಂದೇ ಬರೆಸಲು ಮನವಿ

ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 3 ಮೇ 2025, 15:29 IST
Last Updated 3 ಮೇ 2025, 15:29 IST
ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ನಡೆದ ಸಭೆಯಲ್ಲಿ ಒಳಮೀಸಲಾತಿ ಮನೆಮನೆ ಸಮೀಕ್ಷೆ ಕುರಿತ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕೋಟೆ ಶಿವಣ್ಣ, ಲೋಕೇಶ್‌, ಆರ್. ಧರ್ಮಸೇನಾ, ಶ್ಯಾಂ ಪ್ರಸಾದ್, ಬಿ.ಎಸ್. ರಂಗನಾಥ್ ಪ್ರಸಾದ್, ಪ್ರೊ. ವೆಂಕಟೇಶ್ ಕುಮಾರ್, ಶಿವಪ್ರಸಾದ್ ಜೊತೆಗಿದ್ದರು – ಪ್ರಜಾವಾಣಿ ಚಿತ್ರ
ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ನಡೆದ ಸಭೆಯಲ್ಲಿ ಒಳಮೀಸಲಾತಿ ಮನೆಮನೆ ಸಮೀಕ್ಷೆ ಕುರಿತ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕೋಟೆ ಶಿವಣ್ಣ, ಲೋಕೇಶ್‌, ಆರ್. ಧರ್ಮಸೇನಾ, ಶ್ಯಾಂ ಪ್ರಸಾದ್, ಬಿ.ಎಸ್. ರಂಗನಾಥ್ ಪ್ರಸಾದ್, ಪ್ರೊ. ವೆಂಕಟೇಶ್ ಕುಮಾರ್, ಶಿವಪ್ರಸಾದ್ ಜೊತೆಗಿದ್ದರು – ಪ್ರಜಾವಾಣಿ ಚಿತ್ರ   

ಮೈಸೂರು: ‘ಇದೇ ತಿಂಗಳ 5ರಿಂದ 17ರವರೆಗೆ ನಡೆಯಲಿರುವ ಪರಿಶಿಷ್ಟ ಜಾತಿ/ ಪಂಗಡಗಳ ಮನೆ ಮನೆ ಸಮೀಕ್ಷೆಯಲ್ಲಿ ಒಟ್ಟು 42 ಪ್ರಶ್ನೆಗಳಿದ್ದು, ಅವುಗಳಿಗೆ ಸೂಕ್ತ ಉತ್ತರ ನೀಡಿ ಮಾದಿಗ ಎಂದು ಬರೆಸಬೇಕು. ಬೇರೆ ಧರ್ಮಕ್ಕೆ ಮತಾಂತರವಾದರೂ ಆತಂಕ ಪಡುವ ಅಗತ್ಯವಿಲ್ಲ. ಸಮೀಕ್ಷೆಯಲ್ಲಿ ಧರ್ಮದ ಕಾಲಂ ಇಲ್ಲ’ ಎಂದು ರಾಜ್ಯ ಮಾತಂಗ ಜಾಗೃತಿ ಸಮಿತಿ ಗೌರವ ಅಧ್ಯಕ್ಷ ಲೋಕೇಶ್ ತಿಳಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರಾಜ್ಯ ಮಾತಂಗ ಜಾಗೃತಿ ಸಮಿತಿ ವತಿಯಿಂದ ಒಳ ಮೀಸಲಾತಿ ಸಮೀಕ್ಷೆ ಕುರಿತು ನಡೆದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಸದಾಶಿವ ಆಯೋಗ ಹಾಗೂ ನಾಗಮೋಹನ್ ದಾಸ್ ಆಯೋಗಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಸುಪ್ರೀಂಕೋರ್ಟ್‌ನ ಆದೇಶದಂತೆ ಜಾತಿ ಸಮೀಕ್ಷೆ ನಡೆಯುತ್ತಿದೆ. ಸೂಕ್ಷ್ಮವಾಗಿ ನಡೆಯುತ್ತಿರುವುದರಿಂದ ಇದು ಸಂಪೂರ್ಣ ವೈಜ್ಞಾನಿಕವಾಗಿದೆ ಎಂದರು.

‘ಆಧಾರ್ ಸಂಖ್ಯೆ ಇಲ್ಲದಿದ್ದರೆ ತಕ್ಷಣ ಆಧಾರ್ ಕೇಂದ್ರಗಳಿಗೆ ಹೋಗಿ ತಾತ್ಕಾಲಿಕ ಆಧಾರ್ ನಂಬರ್ ಪಡೆದುಕೊಂಡು ಅದರ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ. ಪೌರಕಾರ್ಮಿಕರು ಮಾದಿಗ ಎಂದು ಬರೆಸಿ’ ಎಂದು ಹೇಳಿದರು.

ADVERTISEMENT

ಮಾಜಿ ಸಚಿವ ಎಂ.ಕೋಟೆ ಶಿವಣ್ಣ, ‘ಸಮುದಾಯದ ಮುಖಂಡರು ತಂಡ ಕಟ್ಟಿಕೊಂಡು ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ಕುಟುಂಬದ ಸಾಮಾಜಿಕ, ಶ್ರೇಣಿತ ಹಾಗೂ ಆರ್ಥಿಕ, ಸ್ಥಿತಿಗತಿಗಳ ಜೊತೆಗೆ ರಾಜಕೀಯ ಮತ್ತು ಉದ್ಯೋಗ ಪ್ರಾತಿನಿಧ್ಯ ದೊರೆಕಿರುವ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು. ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಬೇಕು’ ಎಂದು ಕೋರಿದರು.

ಕಾಂಗ್ರೆಸ್ ಮುಖಂಡ ಆರ್.ಧರ್ಮಸೇನಾ, ‘ನಗರ ಪ್ರದೇಶದಲ್ಲಿ ಒಂಟಿ ಮನೆಗಳಿರುತ್ತದೆ. ಆ ಮನೆಗಳನ್ನು ಗುರುತಿಸಿ ಸಮೀಕ್ಷೆ ಮಾಡುವವರನ್ನು ಕರೆದುಕೊಂಡು ಹೋಗಿ ಸಮೀಕ್ಷೆ ಮಾಡಿಸಬೇಕು. ಮಾದಿಗ ಎಂದು ಬರೆಸದಿದ್ದರೆ ಶೇ 6ರಷ್ಟು ಮೀಸಲಾತಿ ಸಿಗದು’ ಎಂದರು.

ನಿವೃತ್ತ ನ್ಯಾಯಮೂರ್ತಿ ಶ್ಯಾಂ ಪ್ರಸಾದ್, ರಾಜ್ಯ ಮಾತಂಗ ಜಾಗೃತಿ ಸಮಿತಿಯ ಮೈಸೂರು ವಿಭಾಗೀಯ ಅಧ್ಯಕ್ಷ ಬಿ.ಎಸ್.ರಂಗನಾಥ್ ಪ್ರಸಾದ್, ಪ್ರೊ. ವೆಂಕಟೇಶ್ ಕುಮಾರ್, ದೇವದತ್ತ ಫೌಂಡೇಷನ್‌ನ ಅಧ್ಯಕ್ಷ ಶಿವಪ್ರಸಾದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.