ಕೆ.ಆರ್.ನಗರ: ತಾಲ್ಲೂಕಿನ ದೆಗ್ಗನಹಳ್ಳಿಯಲ್ಲಿ 50 ವರ್ಷಗಳ ನಂತರ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಕರಿಯಮ್ಮ, ಕಂತಮ್ಮ, ದೊಡ್ಡಮ್ಮ ತಾಯಿ ಹಬ್ಬ ಅದ್ದೂರಿಯಾಗಿ ನಡೆಯಿತು.
ಗುರುವಾರ ಸಂಜೆ ದೆಗ್ಗನಹಳ್ಳಿ ಗ್ರಾಮದ ಹೊಲದಲ್ಲಿ ಲಕ್ಷ್ಮೀಪುರ ಬನ್ನಿಮಹಾಕಾಳಮ್ಮ, ಕುಕ್ಕುರಮ್ಮ, ಹೊಂಗನೂರಮ್ಮ, ಬೀರೇಶ್ವರ ಸ್ವಾಮಿ, ಮಾರಗೌಡನಹಳ್ಳಿ ಬನ್ನಮ್ಮ, ಅಜ್ಜಮ್ಮ, ಹೊಂಗಸೂರಮ್ಮ, ಈರಪ್ಪಸ್ವಾಮಿ, ಐಪನಹಳ್ಳಿ ಕೋಗಲೂರಮ್ಮ ತಾಯಿ, ದಗ್ಗನಹಳ್ಳಿ ಮಾಸ್ತಮ್ಮ ತಾಯಿ ದೇವರುಗಳ ದಾಳಪೂಜೆ ನಡೆಯಿತು. ದೆಗ್ಗನಹಳ್ಳಿ ಗ್ರಾಮದ ರಾಜ ಬೀದಿಗಳಲ್ಲಿ ಪೂಜಾ ಕುಣಿತ, ಕರಿಯಮ್ಮ, ಕಂತಮ್ಮ, ದೊಡ್ಡಮ್ಮ ತಾಯಿ ಸೇರಿದಂತೆ ಎಲ್ಲ ದೇವರುಗಳ ಮೆರವಣಿಗೆ ನಡೆಯಿತು.
ಶುಕ್ರವಾರ ಬೆಳಿಗ್ಗೆ ದೇವರನ್ನು ಮನೆ ತುಂಬಿಸಿದ ನಂತರ ವಿಶೇಷ ಪೂಜೆ, ಮಹಾ ಮಂಗಳಾರತಿ, ಬಸವನ ಮೇಲೆ ಮಜ್ಜನ ತರಲಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ದೇವಸ್ಥಾನ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಿಗೆ ತಳಿರು ತೋರಣ ಕಟ್ಟಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಾಲಿಗ್ರಾಮ, ಕೆ.ಆರ್.ನಗರ ಅವಳಿ ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದ ಯುವಕ, ಯುವತಿಯರು, ಮಹಿಳೆಯರು, ಮಕ್ಕಳು ದೇವರ ದರ್ಶನ ಪಡೆದರು. ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಇಂತಹ ಹಬ್ಬಗಳು ನಡೆಯುವುದರಿಂದ ಜನರಲ್ಲಿ ಧಾರ್ಮಿಕ ಭಾವನೆ ಹೆಚ್ಚುತ್ತದೆ. ಇದರಿಂದ ಪರಸ್ಪರ ಸಾಮರಸ್ಯರಿಂದ ಜೀವಿಸಲು ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಹಬ್ಬಗಳು ಹೆಚ್ಚಾಗಿ ನಡೆಯಲಿ, ಅದರಂತೆ ಹಬ್ಬಗಳಲ್ಲಿ ಯುವ ಪೀಳಿಗೆ ಹೆಚ್ಚಾಗಿ ಭಾಗವಹಿಸುವಂತಾಗಲಿ, ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದರು.
ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್, ಶಾಸಕ ಡಿ.ರವಿಶಂಕರ್, ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ದೊಡ್ಡಸ್ವಾಮೇಗೌಡ, ದೇವಸ್ಥಾನದ ಕಮಿಟಿ ಸದಸ್ಯರಾದ ಎಸ್.ಸಿದ್ದೇಗೌಡ, ಡಿ.ಎಸ್.ವರದರಾಜು, ಡಿ.ಸಿ.ಚಂದ್ರಕುಮಾರ್, ಡಿ.ಎಸ್.ಚಿಕ್ಕರಾಮೇಗೌಡ, ದೆಗ್ಗನಹಳ್ಳಿ ಪ್ರೇಮಕುಮಾರ್ ಸೇರಿದಂತೆ ಹಲವರು ಭಾಗವಹಿಸಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.