ವಿದ್ಯುತ್ (ಸಾಂದರ್ಭಿಕ ಚಿತ್ರ)
ಮೈಸೂರು: ಬಿರು ಬೇಸಿಗೆಯ ಹಿನ್ನೆಲೆಯಲ್ಲಿ ಮನೆಗಳಲ್ಲಿ ವಿದ್ಯುತ್ ಬಳಕೆಯೂ ಹೆಚ್ಚಿದ್ದು, 200 ಯುನಿಟ್ ಮೀರಿದ ಗ್ರಾಹಕರಿಗೆ ವಿದ್ಯುತ್ ಬಿಲ್ ಶಾಕ್ ನೀಡತೊಡಗಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವ್ಯಾಪ್ತಿಯಲ್ಲಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಿಂದ ಒಟ್ಟು 22.33 ಲಕ್ಷ ಗೃಹ ಬಳಕೆ ವಿದ್ಯುತ್ ಸಂಪರ್ಕಗಳಿವೆ. ಇದರಲ್ಲಿ ಪ್ರಸ್ತುತ 42,384 ಬಳಕೆದಾರರು 200 ಯುನಿಟ್ ಮೀರಿ ವಿದ್ಯುತ್ ಬಳಸುತ್ತಿದ್ದು, ಇವರೆಲ್ಲ ಸಂಪೂರ್ಣ ವಿದ್ಯುತ್ ಬಿಲ್ ಪಾವತಿಸಬೇಕಿದೆ. ಮೈಸೂರು ಜಿಲ್ಲೆಯೊಂದರಲ್ಲೇ ಇಂತಹ 26,958 ಬಳಕೆದಾರರು ಇದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಗೆ ಬಂದಿದ್ದು, ಪ್ರತಿ ಮನೆಗೆ 200 ಯುನಿಟ್‌ವರೆಗಿನ ವಿದ್ಯುತ್ ಬಳಕೆಗೆ ರಾಜ್ಯ ಸರ್ಕಾರ ವಿದ್ಯುತ್ ಶುಲ್ಕದ ವಿನಾಯಿತಿ ನೀಡಿದೆ. ಇಡೀ ವರ್ಷದ ವಿದ್ಯುತ್ ಬಳಕೆಯ ಸರಾಸರಿ ತೆಗೆದುಕೊಂಡು ಅದರ ಆಧಾರದಲ್ಲಿ ಪ್ರತಿ ತಿಂಗಳು ಇಂತಿಷ್ಟು ಯುನಿಟ್‌ವರೆಗೆ ಉಚಿತ ವಿದ್ಯುತ್ ಕೊಡುಗೆ ನೀಡಿದೆ.
200 ಯುನಿಟ್ ಮೀರಿದರೆ ಅಷ್ಟೂ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು ಎಂದು ಸರ್ಕಾರ ‘ಗೃಹಜ್ಯೋತಿ’ ಜಾರಿಗೊಳಿಸಿದ ಆರಂಭದಲ್ಲೇ ಹೇಳಿತ್ತು. ಪ್ರತಿ ಯನಿಟ್‌ಗೆ ₹6ರಂತೆ 200 ಯುನಿಟ್‌ಗೆ ಸರಾಸರಿ ₹1,200 (ತೆರಿಗೆ ಹೊರತುಪಡಿಸಿ) ಶುಲ್ಕವಾಗಲಿದೆ. 201 ಯುನಿಟ್ ಬಳಸಿದ ಗ್ರಾಹಕರು ಕನಿಷ್ಠ ₹1,206 (ತೆರಿಗೆ ಹೊರತುಪಡಿಸಿ) ಶುಲ್ಕ ಪಾವತಿಸಬೇಕಿದೆ. 200 ಯುನಿಟ್ ಮೀರಿದವರಿಗೆ ಪ್ರತಿ ಯುನಿಟ್‌ನ ಶುಲ್ಕವೂ ಹೆಚ್ಚಾಗಲಿದೆ.
ಸರಾಸರಿ ದಾಟಿದರೂ ಹೊರೆ: ಬೇಸಿಗೆಯಲ್ಲಿ ವಿದ್ಯುತ್‌ನ ಬಳಕೆ ಸರಾಸರಿ ಶೇ 20–25ರಷ್ಟು ಹೆಚ್ಚಿದ್ದು, ಇದರಿಂದ ಉಚಿತ ಯುನಿಟ್ ಮೀರಿದ ಗ್ರಾಹಕರಿಗೆ ಹೆಚ್ಚುವರಿ ಬಿಲ್ ಬರತೊಡಗಿದೆ. ಏಪ್ರಿಲ್ ಹಾಗೂ ಮೇ ತಿಂಗಳ ಆರಂಭದಲ್ಲಿ ಕೆಲವು ಮನೆಗಳಿಗೆ ₹500ರಿಂದ ₹1 ಸಾವಿರದವರೆಗೂ ಹೆಚ್ಚುವರಿ ಬಿಲ್ ಬಂದಿದೆ.
‘ನಮ್ಮ ಮನೆಗೆ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳಿಗೆ 90 ಯುನಿಟ್ ಉಚಿತ ನೀಡಿದ್ದಾರೆ. ಅದರಾಚೆ 10–15 ಯುನಿಟ್ ಹೆಚ್ಚು ಬಳಕೆ ಆಗುತ್ತಿದ್ದು, ₹100–150 ಬಿಲ್ ಬರುತ್ತಿತ್ತು. ಆದರೆ, ಮೇನಲ್ಲಿ 50 ಯುನಿಟ್‌ನಷ್ಟು ಹೆಚ್ಚುವರಿ ವಿದ್ಯುತ್ ಬಳಸಿದ್ದು, ಇದಕ್ಕೆ ಪ್ರತಿಯಾಗಿ ₹400 ಹೆಚ್ಚುವರಿ ಬಿಲ್ ಬಂದಿದೆ’ ಎಂದು ವಿದ್ಯಾರಣ್ಯಪುರಂ ನಿವಾಸಿ ಮಹದೇವ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.