ADVERTISEMENT

ಕಾಂಗ್ರೆಸ್ ಮಧುಬಲೆಯ ಕಂಪನಿ: ಛಲವಾದಿ ಆರೋಪ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 14:13 IST
Last Updated 28 ಮಾರ್ಚ್ 2025, 14:13 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಮೈಸೂರು: ‘ಕಾಂಗ್ರೆಸ್ ಮಧುಬಲೆಯ (ಹನಿಟ್ರ್ಯಾಪ್‌) ಕಂಪನಿ. ವಿರೋಧಿಸುವವರು, ಪ್ರಶ್ನಿಸುವವರು ಅಥವಾ ಭ್ರಷ್ಟಾಚಾರ ಹೊರತರುವವರನ್ನು ಟ್ರ್ಯಾಪ್ ಮಾಡುತ್ತದೆ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಆ ಕಂಪನಿಯವರು ಹೊರಗಿನವರಿಗಿಂತ ಕಾಂಗ್ರೆಸ್‌ನವರನ್ನೇ ಹೆಚ್ಚು ಟ್ರ್ಯಾಪ್ ಮಾಡುತ್ತಾರೆ. ಮಧುಬಲೆಗೆ ಬೀಳಿಸುವುದಷ್ಟೇ ಅಲ್ಲದೇ ಪೋನ್ ಟ್ಯಾಪ್ ಕೂಡ ಮಾಡುತ್ತಾರೆ. ಇದೆಲ್ಲದಕ್ಕೂ ಉತ್ತರ ಕೊಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿ ಮುಚ್ಚಿ ಕುಳಿತಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ, ಮುಖ್ಯಮಂತ್ರಿಯೂ ಟ್ರ್ಯಾಪ್ ಆಗಿದ್ದಾರೆಯೇ ಎಂಬ ಅನುಮಾನ ನನ್ನದು’ ಎಂದು ಹೇಳಿದರು.

‘ಸತ್ಯ ಆಚೆಗೆ ಬಂದರೆ ಕಾಂಗ್ರೆಸ್ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸುಮ್ಮನಿದ್ದಾರೆ. ತಪ್ಪು ಮಾಡುವುದು ಎಷ್ಟು ತಪ್ಪೋ ಅಂತೆಯೇ ಮುಚ್ಚಿ ಹಾಕುವುದೂ ತಪ್ಪೇ. ಆದರೆ, ಮುಚ್ಚಿ ಹೋಗಲು ಬಿಜೆಪಿ ಬಿಡುವುದಿಲ್ಲ’ ಎಂದರು.

ADVERTISEMENT

ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಹೈಕಮಾಂಡ್ ಈಗ ಟೆಸ್ಟ್ ಆಟ ಬಿಟ್ಟಿದೆ. ಈಗೇನಿದ್ದರೂ ಟಿ– ಟ್ವೆಂಟಿ ಮ್ಯಾಚ್ ಆಡುತ್ತದೆ. ನೆಕ್ಷ್ಟ್ ವಿಕೆಟ್ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್‌ ಹೆಬ್ಬಾರ್’ ಎಂದು ಹೇಳಿದರು.

‘ಯತ್ನಾಳ ಮೈಕ್ ಮುಂದೆ ನಿಂತಾಗ ಏನೇನೋ ಮಾತನಾಡಿಬಿಡುತ್ತಾರೆ. ತಪ್ಪು ತಿದ್ದುಕೊಳ್ಳಲು ಪಕ್ಷವು ಸಾಕಷ್ಟು ಅವಕಾಶವನ್ನು ಅವರಿಗೆ ಕೊಟ್ಟಿತ್ತು. ಆದರೆ, ಸರಿಯಾಗಲಿಲ್ಲ. ಹೀಗಾಗಿ, ಉಚ್ಚಾಟಿಸಿದೆ. ಇದು ಬೇರೆಯವರಿಗೆ ಎಚ್ಚರಿಕೆಯ ಗಂಟೆ. ನಮ್ಮ ಪಕ್ಷ ಕಾರ್ಯಕರ್ತರಿಂದ ಉಳಿದಿದೆಯೇ ಹೊರತು ನಾಯಕರಿಂದಲ್ಲ. ನಮ್ಮಲ್ಲಿ ಹುಲಿಗಳಾರೂ ಇಲ್ಲ. ಹುಲಿ ಎಂದರೆ ಕಾಡಿಗೆ ಕಳುಹಿಸಿಬಿಡುತ್ತಾರೆ’ ಎಂದರು.

‘ಹೈಕಮಾಂಡ್ ನಿರ್ಧಾರವನ್ನು ಯಾರೂ ವಿರೋಧಿಸಬಾರದು. ಯತ್ನಾಳ ಪರವಾಗಿ ನಾವಿದ್ದೇವೆ ಎಂದು ಯಾರೂ ಹೇಳಬಾರದು. ಹೊಂದಾಣಿಕೆ ರಾಜಕಾರಣಕ್ಕೆ ಹೈಕಮಾಂಡ್ ಬ್ರೇಕ್ ಹಾಕುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.