ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಸಾವಿರಾರು ಭಕ್ತರ ಜಯಘೋಷಗಳ ನಡುವೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ರಥೋತ್ಸವವು ಸೋಮವಾರ ವಿಜೃಂಭಣೆಯಿಂದ ನಡೆಯಿತು.
‘ಸಿಂಹವಾಹಿನಿ’ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಉತ್ಸವಮೂರ್ತಿಗೆ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೂಜೆ ಸಲ್ಲಿಸಿದರು. ನಂತರ ಮೂರ್ತಿಯನ್ನು ರಥದೊಳಗೆ ಪ್ರತಿಷ್ಠಾಪಿಸಲಾಯಿತು. ಯದುವೀರ್ ಅವರು ರಥದ ಹಗ್ಗ ಎಳೆದು ರಥೋತ್ಸವಕ್ಕೆ ಚಾಲನೆ ನೀಡಿದರು.
ಚಾಮುಂಡೇಶ್ವರಿಗೆ ಜಯವಾಗಲಿ ಎಂಬ ಘೋಷಣೆ, ವಾದ್ಯಗೋಷ್ಠಿಗಳ ನಾದ, ಸಿಡಿಮದ್ದಿನ ಸದ್ದು, ಕಲಾ ತಂಡಗಳ ಪ್ರದರ್ಶನ ರಥೋತ್ಸವದ ರಂಗು ಹೆಚ್ಚಿಸಿತು. ಸಾವಿರಾರು ಭಕ್ತರು ಒಕ್ಕೊರಲಿನಿಂದ ನಾಡದೇವತೆಗೆ ಜೈಕಾರ ಕೂಗುತ್ತಾ, ಬಾಳೆಹಣ್ಣು, ಜವನ ಎಸೆದು ಪ್ರಾರ್ಥಿಸಿದರು.
ಕುಶಾಲತೋಪು:
ತಾಯಿ ಚಾಮುಂಡೇಶ್ವರಿಗೆ ಜೈಕಾರ ಮೊಳಗಿಸಿದ ಭಕ್ತರು ರಥವನ್ನು ಎಳೆಯಲು ಆರಂಭಿಸಿದರು. ರಥ ಚಲಿಸುತ್ತಿದ್ದಂತೆ 21 ಬಾರಿ ಕುಶಾಲುತೋಪು ಸಿಡಿಸಿದ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ದೇವಿಗೆ ಗೌರವ ಸಲ್ಲಿಸಿದರು. ರಥಬೀದಿಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತಸಾಗರದ ಮಧ್ಯೆ ಚಾಮುಂಡೇಶ್ವರಿ ರಥ ಸಾಗಿಬಂತು.
45 ನಿಮಿಷಗಳವರೆಗೆ ಸಾಗಿಬಂದ ರಥ ಚಾಮುಂಡೇಶ್ವರಿ ದೇವಸ್ಥಾನದ ಪ್ರವೇಶದ್ವಾರ ತಲುಪಿತು. ಅಲ್ಲಿ ನೆರೆದಿದ್ದ ಭಕ್ತರು, ರಥದ ಹಗ್ಗ ಮುಟ್ಟಿ ಪುನೀತರಾದರು. ಮತ್ತೆ ಕೆಲವರು ನಮಸ್ಕರಿಸಿದರು. ರಥಕ್ಕೆ ಸಿಂಗರಿಸಿದ್ದ ಹೂವುಗಳನ್ನು ಪಡೆಯಲು ಮುಗಿಬಿದ್ದರು.
ಬೆಟ್ಟದ ಸುತ್ತಲಿನ ಗ್ರಾಮಗಳಾದ ಉತ್ತನಹಳ್ಳಿ, ಹೊಸ ಹುಂಡಿ, ಬಂಡಿಪಾಳ್ಯ, ಲಲಿತಾದ್ರಿಪುರ, ಆಲನಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಜಮಾಯಿಸಿದ್ದರು. ರಥೋತ್ಸವ ಹಾಗೂ ನಂತರದ ದೇಗುಲ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ರಥದ ಸುತ್ತಲೂ, ಹಗ್ಗ ಹಿಡಿದು ಜನಸಂದಣಿಯಾಗದಂತೆ ತಡೆದರು.
ಮೂಲ ಮೂರ್ತಿಯ ದರ್ಶನಕ್ಕೆ ಅವಕಾಶ ಮಾಡಲಾಯಿತು. ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ವಿಧಾನಗಳು ನೆರವೇರಿದವು. ಸಂಜೆ ಮಂಟಪೋತ್ಸವ, ಸಿಂಹವಾಹನೋತ್ಸವ ಹಾಗೂ ಹಂಸವಾಹನೋತ್ಸವವೂ ನೆರವೇರಿತು. ಬುಧವಾರ ಸಂಜೆ 7ಕ್ಕೆ ‘ತೆಪ್ಪೋತ್ಸವ’ವು ನಡೆಯಲಿದೆ.
ದೇವಿಗೆ ವಿಶೇಷ ಪೂಜೆ:
ರಥೋತ್ಸವ ಪ್ರಯುಕ್ತ ಮುಂಜಾನೆ 4ರಿಂದಲೇ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ಪಂಚಾಮೃತಾಭಿಷೇಕ ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆ ನೆರವೇರಿಸಲಾಯಿತು.
ತಡವಾಗಿ ಆರಂಭವಾದ ರಥೋತ್ಸವ:
ಬೆಳಿಗ್ಗೆ 9.32ರಿಂದ 9.52ರೊಳಗಿನ ಶುಭ ಲಗ್ನದಲ್ಲಿ ರಥೋತ್ಸವ ಆರಂಭಗೊಳ್ಳಲಿದೆ ಎಂದು ತಿಳಿಸಲಾಗಿತ್ತು. ಆದರೆ ರಥೋತ್ಸವ ಆರಂಭವಾಗುವಾಗ 10.05 ಗಂಟೆಯಾಗಿತ್ತು. ಹೀಗಾಗಿ ನಿಗದಿತ ಸಮಯಕ್ಕಿಂತ 13 ನಿಮಿಷ ತಡವಾಗಿ ರಥೋತ್ಸವ ನಡೆಯಿತು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯದುವೀರ್ ಅವರ ಪತ್ನಿ ತ್ರಿಷಿಕಾ ಕುಮಾರಿ, ಶಾಸಕ ಜಿ.ಟಿ.ದೇವೇಗೌಡ ಭಾಗವಹಿಸಿದ್ದರು.
ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಉತ್ಸವಮೂರ್ತಿಗೆ ವಜ್ರಾಭರಣಗಳ ಅಲಂಕಾರ ಸಾವಿರಾರು ಭಕ್ತರು ಭಾಗಿ
ನಾಡಿನ ಜನರಿಗೆ ಒಳಿತಾಗಲಿ: ಯದುವೀರ್
ಮಾಧ್ಯಮದವರೊಂದಿಗೆ ಮಾತನಾಡಿದ ಯದುವೀರ್ ಒಡೆಯರ್ ‘ಪದ್ಧತಿಯಂತೆ ಅಮ್ಮನವರ ರಥೋತ್ಸವ ಸಮಯಕ್ಕೆ ಸರಿಯಾಗಿ ನಡೆದಿದೆ. ನಾಡಿನ ಜನರಿಗೆ ಆರೋಗ್ಯ ಅಭಿವೃದ್ಧಿ ಸಮೃದ್ಧಿ ದೊರೆಯಲಿ’ ಎಂದು ಹೇಳಿದರು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾತನಾಡಿ ‘ದಸರಾ ಕಾರ್ಯಕ್ರಮದ ಭಾಗವಾದ ರಥೋತ್ಸವವನ್ನು ಸಂತೋಷದಿಂದ ಆಚರಿಸಿದ್ದೇವೆ. ಚಾಮುಂಡೇಶ್ವರಿ ದಯೆಯಿಂದ ದೇಶ ಸುಭಿಕ್ಷವಾಗಿರಲಿ’ ಎಂದು ಪ್ರಾರ್ಥಿಸಿದರು.
ರಥದ ಹಾದಿಯಲ್ಲಿ ವಾಹನ: ತೊಂದರೆ
ಚಾಮುಂಡೇಶ್ವರಿ ದೇವಿಯು ಆರೂಢವಾಗಿದ್ದ ರಥವು ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿತು. ದೇವಾಲಯದ ಎಡಭಾಗದಲ್ಲಿ ರಥ ಸಾಗುವ ದಾರಿಯಲ್ಲೇ ಪೊಲೀಸ್ ಅಧಿಕಾರಿಗಳ ವಾಹನ ಹಾಗೂ ಅಗ್ನಿಶಾಮಕದಳದ ವಾಹನಗಳನ್ನು ನಿಲ್ಲಿಸಲಾಗಿತ್ತು. ಕೊನೆ ಕ್ಷಣದಲ್ಲಿ ಅವುಗಳನ್ನು ತೆರವುಗೊಳಿಸಲು ಪ್ರಯತ್ನಿಸಿದ್ದರಿಂದ ಗೊಂದಲ ಉಂಟಾಯಿತು. ವಾಹನಗಳು ಅಡ್ಡಲಾಗಿ ನಿಂತಿದ್ದರಿಂದ ರಥೋತ್ಸವದಲ್ಲಿ ಪಾಲ್ಗೊಳ್ಳಲು ಭಕ್ತರು ಸಮಸ್ಯೆ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.