ಮೈಸೂರು: ಆಷಾಢ ಶುಕ್ರವಾರಗಳಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಪೂಜೆಗೆಂದು ಬರುವ ಭಕ್ತರಿಗೆ ಒಣಹಣ್ಣುಗಳ (ಡ್ರೈಫ್ರೂಟ್ಸ್) ಪೊಟ್ಟಣ ಹಾಗೂ ಬಾದಾಮಿ ಹಾಲು ವಿತರಿಸಲು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.
ಇದೇ ಮೊದಲ ಬಾರಿಗೆ ಇಂಥದೊಂದು ಕ್ರಮ ಕೈಗೊಳ್ಳಲಾಗುತ್ತಿದೆ. ಇದು, ಸಾಮಾನ್ಯ ಕೌಂಟರ್‌ಗಳಲ್ಲಿ ‘ಧರ್ಮದರ್ಶನ’ದ ಸರದಿ ಸಾಲಿನಲ್ಲಿ ಹಾಗೂ ಬೆಟ್ಟದ ಪಾದದ ಮೂಲಕ ಮೆಟ್ಟಿಲುಗಳ ಮೂಲಕ ಬರುವವರಿಗೆ ಮಾತ್ರ ದೊರೆಯಲಿದೆ. ಹೀಗೆ, ನಿತ್ಯ ಸರಾಸರಿ 50 ಸಾವಿರ ಮಂದಿ ಬರುತ್ತಾರೆ ಎಂದು ನಿರೀಕ್ಷಿಸಲಾಗಿದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಶುಕ್ರವಾರಗಳಂದು ಹಾಗೂ ವರ್ಧಂತಿಯಂದು, ಎಲ್ಲ ಭಕ್ತರಿಗೂ ನಿರ್ಗಮನ ದ್ವಾರದಲ್ಲಿ ಕುಂಕುಮದ ಪಾಕೆಟ್ ಕೊಡಲಾಗುವುದು. 18 ವರ್ಷ ಮೇಲಿನ ಹೆಣ್ಣು ಮಕ್ಕಳಿಗೆ ಬಾಗಿನ ಪಾಕೆಟ್ (ಬೌಸ್ ಪೀಸ್, ಬಳೆ, ಅಕ್ಕಿ ಮೊದಲಾದವು ಇರುವಂಥವು) ಕೂಡ ನೀಡಲು ಪ್ರಾಧಿಕಾರ ನಿರ್ಣಯಿಸಿದೆ. ಇದು ಈ ಬಾರಿಯ ವಿಶೇಷ ‘ಕೊಡುಗೆ’ಯಾಗಿದೆ.
ಈ ಬಾರಿ ಜೂನ್ 27, ಜುಲೈ 4, ಜುಲೈ 11, ಜುಲೈ 18ರಂದು–ನಾಲ್ಕು ಆಷಾಢ ಶುಕ್ರವಾರಗಳು ಬರುತ್ತವೆ. ಜುಲೈ 17ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಸುತ್ಸವ ನಡೆಯಲಿದೆ.
ಕಷ್ಟಪಟ್ಟು ಬಂದವರಿಗೆ: ‘ಧರ್ಮದರ್ಶನ’ ಸಾಲಿನಲ್ಲಿ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವುದೇ ನಮ್ಮ ಆದ್ಯತೆಯಾಗಿದೆ. ಹೀಗಾಗಿ, ಸುಗಮವಾಗಿ ಬರಲು ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಪ್ರತ್ಯೇಕ ಬ್ಯಾರಿಕೇಡ್‌ಗಳನ್ನು ಮಾಡಿ ಸರದಿ ಸಾಲಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಸ್ ನಿಲುಗಡೆ ಮಾಡುವ ಬಳಿಯಿಂದಲೇ ಕ್ಯೂ ಆರಂಭವಾಗಲಿದೆ. ಸರದಿಯಲ್ಲಿ ನಿಂತುಕೊಂಡು ಹಾಗೂ ಕಷ್ಟಪಟ್ಟು ಬೆಟ್ಟ ಹತ್ತಿ ಬಂದವರಿಗೆ ಸುಸ್ತಾಗುವುದರಿಂದ ಅವರ ನೆರವಿಗೆಂದು 30ರಿಂದ 40 ಗ್ರಾಂ. ತೂಕದ ಡ್ರೈಫ್ರೂಟ್ಸ್ ಪೊಟ್ಟಣ (ಗೋಡಂಬಿ, ಬಾದಾಮಿ, ಖರ್ಜೂರ, ಒಣದ್ರಾಕ್ಷಿ ಮೊದಲಾದವು) ಹಾಗೂ ಬಾದಾಮಿ ಹಾಲು ಕೊಡಲಾಗುವುದು. ಇದರಿಂದ ಮಧುಮೇಹ ಮೊದಲಾದ ಸಮಸ್ಯೆ ಇರುವವರಿಗೆ ಅನುಕೂಲ ಆಗಲಿ ಎಂಬುದು ನಮ್ಮ ಆಶಯ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ‘ಪ್ರಜಾವಾಣಿ’ಗೆ ತಿಳಿಸಿದರು.
ಕ್ಯೂ ಆರಂಭದಲ್ಲೇ: ‘ಸರದಿ ಸಾಲಿನ ಆರಂಭದಲ್ಲೇ ಒಣಹಣ್ಣು, ಬಾದಾಮಿ ಹಾಲು ಕೊಡಲಾಗುತ್ತದೆ. ಪಾದದಿಂದ ಮೆಟ್ಟಲುಗಳನ್ನು ಹತ್ತಿ ಬರುವವರಿಗೆ ನೇರವಾಗಿ ಧರ್ಮದರ್ಶನ ಕೌಂಟರ್‌ಗೆ ಸೇರಿಕೊಳ್ಳುವಂತೆ ಬ್ಯಾರಿಕೇಡಿಂಗ್ ಮಾಡಲಾಗುತ್ತಿದೆ. ₹ 300 ಟಿಕೆಟ್ ಪಡೆದವರು, ₹ 2ಸಾವಿರ ಟಿಕೆಟ್ ಇರುವವರಿಗೆ ಪ್ರತ್ಯೇಕ ಕ್ಯೂ ಇರುತ್ತದೆ’ ಎಂದು ಮಾಹಿತಿ ನೀಡಿದರು.
ಪ್ರತಿ ಶುಕ್ರವಾರ ಬೆಟ್ಟಕ್ಕೆ ಸರಾಸರಿ ಒಂದು ಲಕ್ಷ ಮಂದಿ ಭಕ್ತರು ಬರುವ ನಿರೀಕ್ಷೆಯಿಂದ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡುತ್ತಿದ್ದೇವೆ.– ಎಂ.ಜೆ. ರೂಪಾ, ಕಾರ್ಯದರ್ಶಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
‘ವರ್ಧಂತಿಯಂದು ಲಡ್ಡು ಪ್ರಸಾದ’
‘ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ದಿನವಾದ ಜುಲೈ 17ರಂದು ಚಾಮುಂಡಿಬೆಟ್ಟಕ್ಕೆ ಬರುವ ಎಲ್ಲ ಭಕ್ತರಿಗೂ ಕರ್ನಾಟಕ ಹಾಲು ಮಹಾಮಂಡಳದಿಂದ ‘ನಂದಿನಿ’ ಉತ್ಪನ್ನವಾದ ‘ಗೋಧಿ ಲಡ್ಡು’ ವಿತರಿಸಲಾಗುವುದು’ ಎಂದು ರೂಪಾ ತಿಳಿಸಿದರು.
‘ಸರದಿ ಸಾಲಿನಲ್ಲಿರುವವರಿಗೆ ನೀರು’
‘ಕರ್ನಾಟಕ ಹಾಲು ಮಹಾಮಂಡಳದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಬೆಟ್ಟದ ಅಲ್ಲಲ್ಲಿ ‘ನಂದಿನಿ’ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೂತ್‌ಗಳನ್ನು ಹಾಕಲಾಗುತ್ತಿದೆ. ಭಕ್ತರು ಅಲ್ಲಿ ಉತ್ಪನ್ನಗಳನ್ನು ಖರೀದಿಸಬಹುದು. ಕುಡಿಯುವ ನೀರು ಶೌಚಾಲಯ ಮೊದಲಾದ ಮೂಲಸೌಲಭ್ಯಗಳನ್ನು ಒದಗಿಸಲಾಗುವುದು. ಸರದಿಯಲ್ಲಿ ಬರುವವರಿಗೆ ನೀರು ವಿತರಣೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ’ ಎನ್ನುತ್ತಾರೆ ರೂಪಾ.
ಕಣ್ಗಾವಲಿಡಲು ‘ಎಐ ಕ್ಯಾಮೆರಾ’
ಚಾಮುಂಡಿಬೆಟ್ಟದ ಮೇಲೆ ಪಾದದಲ್ಲಿ ಹಾಗೂ ಮೆಟ್ಟಲುಗಳ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿಡಲಾಗುತ್ತಿದೆ. ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. 100ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಹಾಕಲಾಗುತ್ತಿದೆ. ಸರದಿ ಸಾಲಿನಲ್ಲಿ ಬರುವವರಿಗೆ ದೇವಿಯ ವೀಕ್ಷಣೆಗೆಂದು ಎರಡು ಕಡೆಗಳಲ್ಲಿ ಡಿಜಿಟಲ್ ಬೋರ್ಡ್‌ನಲ್ಲಿ ನೇರಪ್ರಸಾರ ಮಾಡಲಾಗುವುದು. ಸಾರ್ವಜನಿಕರ ಕುಂದುಕೊರತೆ ಆಲಿಸಿ ಪರಿಹರಿಸಲು ನಿಯಂಯ್ರಣ ಕೊಠಡಿ ವೀಲ್‌ಚೇರ್‌ಗಳು ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಲು ಪ್ರಾಧಿಕಾರದಿಂದ ತೀರ್ಮಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.