ಮೈಸೂರು: ‘ಆಷಾಢ ಶುಕ್ರವಾರಗಳು ಹಾಗೂ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿಯಂದು ಚಾಮುಂಡಿಬೆಟ್ಟಕ್ಕೆ ಸರಾಸರಿ ಒಂದೂವರೆ ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಪೂಜೆ ಮತ್ತು ಜನಸಂದಣಿ ನಿರ್ವಹಣೆಗಾಗಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.
ಬೆಟ್ಟದಲ್ಲಿ ನಡೆದಿರುವ ಸಿದ್ಧತೆಯನ್ನು ಬುಧವಾರ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈ ಬಾರಿ ಹಲವು ಬದಲಾವಣೆ ಹಾಗೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಲ್ತುಳಿತ ಮೊದಲಾದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಮುಂಜಾಗ್ರತೆ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಜೂನ್ 27, ಜುಲೈ 4, ಜುಲೈ 11, ಜುಲೈ 18ರಂದು ಆಷಾಢ ಶುಕ್ರವಾರ, ಜುಲೈ 17ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ನಡೆಯಲಿದೆ. ಆ ದಿನಗಳಂದು ಬರುವ ಭಕ್ತರು ಸುಗಮವಾಗಿ ದೇವಿಯ ದರ್ಶನ ಮಾಡಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶನಿವಾರ ಹಾಗೂ ಭಾನುವಾರದಂದೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗಾಗಿ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಎಲ್ಲರೂ ಲಲಿತಮಹಲ್ ಮೈದಾನದ ಸಮೀಪದಲ್ಲಿ ವಾಹನಗಳನ್ನು ನಿಲ್ಲಿಸಿ, ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬರಬೇಕು. ಶುಕ್ರವಾರ ಉಚಿತ ಇದೆ. ಶನಿವಾರ ಹಾಗೂ ಭಾನುವಾರ ‘ಶಕ್ತಿ’ ಯೋಜನೆ ಅನ್ವಯವಾಗುತ್ತದೆ. ಪುರುಷರು ಟಿಕೆಟ್ ಪಡೆಯಬೇಕಾಗುತ್ತದೆ’ ಎಂದು ಕೋರಿದರು.
ಡ್ರೈಫ್ರೂಟ್ಸ್, ಬಾದಾಮಿ ಹಾಲು: ‘ಧರ್ಮದರ್ಶನದ ಸಾಲಿನಲ್ಲಿ ಬರುವವರಿಗೆ ಉಚಿತವಾಗಿ ಡ್ರೈಫ್ರೂಟ್ಸ್ ಪಾಕೆಟ್, ಬಾದಾಮಿ ಹಾಲು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ ಶೌಚಾಲಯಗಳನ್ನು ತೆರೆಯಲಾಗಿದೆ. ಇದೇ ಸಾಲಿನಲ್ಲಿ ಮಾರಾಟದ ಮಳಿಗೆ ತೆರೆಯಲಾಗಿದ್ದು, ಅಲ್ಲಿ ‘ನಂದಿನಿ’ ಹಾಲಿನ ಉತ್ಪನ್ನಗಳು, ಗಾಜಿನ ನೀರಿನ ಬಾಟಲಿ, ಕಾಫಿ ಮಾರಲಾಗುವುದು. ದೇವಿ ದರ್ಶನ ಪಡೆಯುವ ಎಲ್ಲ ಭಕ್ತರಿಗೂ ಕುಂಕುಮ ಪ್ರಸಾದ, ಮುತ್ತೈದೆಯರಿಗೆ ಮಡಿಲಕ್ಕಿ ಪ್ಯಾಕೆಟ್‌ಗಳನ್ನು ಉಚಿತವಾಗಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ನೀಡಲಾಗುವುದು. ಪ್ಯಾಸ್ಟಿಕ್ ಬಳಕೆಗೆ ಅವಕಾಶ ಇಲ್ಲದಿರುವುದರಿಂದ, ಬಟ್ಟೆ ಬ್ಯಾಗ್‌ಗಳನ್ನು ಮಾರಾಟ ಮಾಡಲಾಗುವುದು’ ಎಂದು ವಿವರಿಸಿದರು.
‘ಸ್ವಚ್ಛತೆಗೆ ಕ್ರಮ ವಹಿಸಲಾಗಿದೆ. ತುರ್ತು ಸಂದರ್ಭದಲ್ಲಿ ನಿರ್ವಹಣೆಗೆ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಯೋಜಕ ಅಜಯ್‌ಕುಮಾರ್ ಜೈನ್ ನೇತೃತ್ವದಲ್ಲಿ 20 ಮಂದಿಯ ರೆಸ್ಕ್ಯೂ ಟೀಂ ರಚಿಸಲಾಗಿದೆ. 100 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮಹದೇಶ್ವರ ಬೆಟ್ಟದ ಸಿಬ್ಬಂದಿಯನ್ನೂ ಈ ಬಾರಿ ನಿಯೋಜಿಸಲಾಗಿದೆ’ ಎಂದರು.
‘ಧರ್ಮದರ್ಶನದವರು ಹಾಗೂ ಟಿಕೆಟ್ ಪಡೆದವರಿಗೆ ಪ್ರತ್ಯೇಕ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ. ಇದಕ್ಕಾಗಿ ಮೂರು ಪ್ರತ್ಯೇಕ ಸರದಿ ಸಾಲುಗಳನ್ನು ಮಾಡಲಾಗಿದೆ. ಬೆಟ್ಟದ ಮೇಲೆ ಬರುವ ಬಸ್‌ಗಳನ್ನು ಆಯಾ ಕ್ಯೂ ಬಳಿಯೇ ನಿಲುಗಡೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್ ಕುಮಾರ್, ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ, ಡಿಸಿಪಿಗಳಾದ ಮುತ್ತುರಾಜ್, ಸುಂದರ್‌ರಾಜ್, ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಪಾಲ್ಗೊಂಡಿದ್ದರು.
ಸಾವಿರ ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ನೇರ ದರ್ಶನದ ಅವಕಾಶ ಕಲ್ಪಿಸಲು ಪ್ರತ್ಯೇಕ ಸರದಿ ಸಾಲನ್ನು ಮಾಡಲಾಗಿದೆಜಿ. ಲಕ್ಷ್ಮೀಕಾಂತರೆಡ್ಡಿ ಜಿಲ್ಲಾಧಿಕಾರಿ
ಆಷಾಢದ ನಾಲ್ಕು ಶುಕ್ರವಾರವೂ ಚಾಮುಂಡೇಶ್ವರಿ ಮೂರ್ತಿಗೆ ಲಕ್ಷ್ಮೀ ಅಲಂಕಾರ ಮಾಡಲಾಗುವುದು ವಿಶೇಷ ಪೂಜೆ ನೆರವೇರಿಸಲಾಗುವುದುಶಶಿಶೇಖರ್ ದೀಕ್ಷಿತ್, ಪ್ರಧಾನ ಅರ್ಚಕ ಚಾಮುಂಡೇಶ್ವರಿ ದೇವಸ್ಥಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.