ADVERTISEMENT

ಐನೂರು ವರ್ಷದ ಇತಿಹಾಸದ ಚಾಮುಂಡಿ ಬೆಟ್ಟದ ಏಕಶಿಲಾ ನಂದಿಗೆ ಮಹಾಭಿಷೇಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 7:46 IST
Last Updated 17 ನವೆಂಬರ್ 2025, 7:46 IST
   

ಮೈಸೂರು: ಚಾಮುಂಡಿ ಬೆಟ್ಟದ ಐನೂರು ವರ್ಷದ ಇತಿಹಾಸದ ಏಕಶಿಲಾ ನಂದಿ ವಿಗ್ರಹಕ್ಕೆ ಸೋಮವಾರ ಮಹಾಭಿಷೇಕವು ಅದ್ದೂರಿಯಾಗಿ ನೆರವೇರಿತು. ಬೆಟ್ಟದ ಗ್ರಾಮಸ್ಥರು ಹಾಗೂ ನೂರಾರು ಭಕ್ತರು ಅಭಿಷೇಕದ ಬಣ್ಣಗಳಲ್ಲಿ ಹೊಳೆದ ನಂದಿಯನ್ನು ಕಣ್ತುಂಬಿಕೊಂಡರು.

ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ 20ಮೇ ವರ್ಷದ ಮಹಾಭಿಷೇಕಕ್ಕೆ ಬೆಳಿಗ್ಗೆ 10.01ಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥಾನಂದ ಸ್ವಾಮೀಜಿ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು. 

ವಿಗ್ರಹದ ಅಂಗಳದಲ್ಲಿ ಬಿಲ್ವಪತ್ರೆ ಗಿಡವನ್ನು ನೆಟ್ಟು ಪೂಜೆ ಮಾಡಿದ ನಂತರ ವಿಗ್ರಹದ ಮೇಲ್ಬಾಗದಲ್ಲಿ ಮಾಡಿದ್ದ ಅಟ್ಟಣಿಗೆಯ ಮೇಲೆ ನಿಂತು 38 ವಿವಿಧ ಬಗೆಯ ಅಭಿಷೇಕಗಳನ್ನು ನಂದಿಯ ಮಸ್ತಕಕ್ಕೆ ಧಾರೆ ಎರೆದರು. ಪಾದ್ಯಂ, ಅರ್ಘ್ಯ, ಆಚಮನದ ನಂತರ ಗಂಧ ಪಂಚಕಾಭಿಷೇಕ, ಪಂಚಾಮೃತಾಭಿಷೇಕ, ಫಲ ಪೂಜಾಮೃತ, ರಸಪಂಚಾಮೃತ, ಪಿಷ್ಟ ಪಂಚಕಾಭಿಷೇಕ ನಡೆದವು.  

ADVERTISEMENT

ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಸಕ್ಕರೆ, ಕದಳೀ, ದ್ರಾಕ್ಷಿ, ಬೇಲ, ಖರ್ಜೂರ, ಸೌತೆಕಾಯಿ, ಎಳನೀರು, ಕಬ್ಬಿನ ಹಾಲು, ನಿಂಬೆ, ಎಳ್ಳೆಣ್ಣೆ, ಪಾಯಸ, ಗೋಧಿ, ಕಡಲೆ, ಹೆಸರು ಹಿಟ್ಟು, ದರ್ಬೆ, ಪತ್ರೆ, ಕೇಸರಿ ಹಾಗೂ ಪುಷ್ಪ ಸೇರಿದಂತೆ ವಿವಿಧ ದ್ರವ್ಯಗಳ ಅಭಿಷೇಕವನ್ನು ನಂದಿಗೆ ಎರೆಯಲಾಯಿತು. ಒಂದೊಂದು ಅಭಿಷೇಕದಲ್ಲೂ ವಿವಿಧ ಬಣ್ಣಗಳಲ್ಲಿ ನಂದಿ ವಿಗ್ರಹವು ಕಂಗೊಳಿಸಿತು. 

ಕನಕ ಅಭಿಷೇಕ ಸಂದರ್ಭದಲ್ಲಿ ನಂದಿ ಮೇಲಿಂದ ನಾಣ್ಯಗಳು ಉದುರಿದವು. ಪಂಚಾಮೃತ, ಶಾಲ್ಯಾನ್ನ, ಸುಗಂಧ ದ್ರವ್ಯ ಅಭಿಷೇಕ ಮತ್ತು ಪಂಚ ಕಲಶ ವಿಸರ್ಜನೆಯೊಂದಿಗೆ ಅಭಿಷೇಕ ಪೂರ್ಣಗೊಂಡಿತು. ಒಂದೂವರೆ ತಾಸು ನಡೆದ ಅಭಿಷೇಕವು ನೋಡುಗರನ್ನು ಭಕ್ತಿಭಾವದಲ್ಲಿ ಮೀಯಿಸಿತು. ಅಷ್ಟೋತ್ತರ, ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ನೆರವೇರಿತು. 

ಬಳಗದ ಅಧ್ಯಕ್ಷ ಎಸ್.ಪ್ರಕಾಶನ್‌, ಕಾರ್ಯದರ್ಶಿ ಎನ್‌.ಗೋವಿಂದ, ಖಜಾಂಚಿ ಶಂಕರ್ ಸೇರಿದಂತೆ ಸದಸ್ಯರು ಪಾಲ್ಗೊಂಡರು. ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನೂ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.