
ಮೈಸೂರು: ಭಾರಿ ಮಳೆಯಿಂದ ಇಲ್ಲಿನ ಚಾಮುಂಡಿ ಬೆಟ್ಟದ ನಂದಿ ವಿಗ್ರಹದ ಸಂಪರ್ಕ ರಸ್ತೆಯಲ್ಲಿ ಆಗಿದ್ದ ಭೂಕುಸಿತದ ದುರಸ್ತಿ ಕಾರ್ಯ ಮತ್ತೊಂದು ಮಳೆಗಾಲ ಬಂದರೂ ಮುಗಿದಿಲ್ಲ.
2021ರ ಅಕ್ಟೋಬರ್‌ನಲ್ಲಿ ಕುಸಿತವಾದ ಬಳಿಕ ಜನ–ವಾಹನ ಸಂಚಾರ ಬಂದ್ ಆಗಿದ್ದು, ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ರಸ್ತೆಯ ಮರುನಿರ್ಮಾಣ ಮಾತ್ರ ಆಮೆವೇಗದಲ್ಲಿ ನಡೆದಿದೆ. ಈ ಮಾರ್ಗದಲ್ಲಿ ‘ನಂದಿ’ ಕಡೆಗೆ ಸಂಚರಿಸಲು ಅವಕಾಶವಿಲ್ಲ.
‘ನಂದಿ’ ಸಂಪರ್ಕ ರಸ್ತೆಯಲ್ಲಿ ಭೂಕುಸಿತವಾದ ಕೆಲವೇ ದಿನಗಳಲ್ಲಿ, ಕುಸಿತದ ಸ್ಥಳದಿಂದ 50 ಮೀಟರ್‌ನಷ್ಟು ರಸ್ತೆ ಬಿರುಕು ಬಿಟ್ಟು ಮೂರು ಕಡೆ ಕುಸಿದಿತ್ತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಭೂತಾಂತ್ರಿಕ ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳು ಪರಿಶೀಲಿಸಿದ್ದರು. ಸ್ಥಳದ ಮಣ್ಣಿನ ಮಾದರಿಯನ್ನು ಪರೀಕ್ಷೆ ಮಾಡಿಸಲಾಗಿತ್ತು. ರಸ್ತೆಯನ್ನು ಯಥಾಸ್ಥಿತಿಗೆ ತರಲು ತಗಲುವ ವೆಚ್ಚದೊಂದಿಗೆ ಸಮಗ್ರ ವರದಿ ಸಲ್ಲಿಸಲಾಗಿತ್ತು. ಸದ್ಯ, ಹೆಚ್ಚಿನ ಪ್ರಮಾಣ ದಲ್ಲಿ ಕುಸಿತ ಉಂಟಾಗಿದ್ದ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಪ್ರಗತಿಯಲ್ಲಿದೆ. ಅದಕ್ಕಿಂತ ಮುಂದೆ, ಕಲ್ಲುಗಳನ್ನು ಜೋಡಿಸಿ ಕಬ್ಬಿಣದ ಜಾಲರಿಯನ್ನು ಅಳವಡಿಸಿ ಮತ್ತೊಂದು ತಡೆಗೋಡೆ ಕಟ್ಟುವ ಕೆಲಸವೂ ನಡೆಯುತ್ತಿರುವುದು ಗುರುವಾರ ಕಂಡುಬಂತು.
ತಳ್ಳಿ ಹಾಕಲಾಗದು: ‘2021ರಲ್ಲಿ ಕುಸಿತವಾದರೆ, 2022ರ ಡಿಸೆಂಬರ್‌ನಲ್ಲಿ ದುರಸ್ತಿ ಶುರುವಾಗಿತ್ತು. ಈಗ ಮತ್ತೊಂದು ಮಳೆಗಾಲ ಎದುರಾಗಿದೆ. ಈಗ ಕಾಮಗಾರಿಯನ್ನು ವೇಗವಾಗಿ ನಡೆಸಲು ಸಾಧ್ಯವಾಗುವುದಿಲ್ಲ. ಭಾರಿ ಮಳೆಯಾದಲ್ಲಿ ಮಣ್ಣು ಜರುಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’ ಎಂಬುದು ಸ್ಥಳೀಯರ ವಾದ.
‘ನಂದಿ ಮಾರ್ಗದಲ್ಲಿ ₹ 9.75 ಕೋಟಿ ವೆಚ್ಚದಲ್ಲಿ ಐಐಎಸ್‌ಸಿ ವಿಜ್ಞಾನಿಗಳ ಸಲಹೆಯಂತೆ 350 ಮೀಟರ್ ರಸ್ತೆ ಮರು ನಿರ್ಮಿಸಲಾಗುತ್ತಿದೆ. ಶೇ 40ರಷ್ಟು ಪೂರ್ಣಗೊಂಡಿದೆ. ಚೆನ್ನೈ ಮೂಲದ ಗುತ್ತಿಗೆದಾರರು ವೈಯಕ್ತಿಕ ಸಮಸ್ಯೆಯ ಕಾರಣದಿಂದ 15 ದಿನ ಕೆಲಸ ಮಾಡಿರಲಿಲ್ಲ. ಈಗ ಪುನರಾರಂಭಗೊಂಡಿದ್ದು, 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ್ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಕಿರಿದಾದ ರಸ್ತೆಯಲ್ಲಿ ಹೆಚ್ಚಿನ ವಾಹನಗಳ ಬಳಕೆ ಅಸಾಧ್ಯ. ಒಂದು ಕಡೆಯಿಂದಷ್ಟೇ ಸಂಚರಿಸಬೇಕು. ವಾಹನ ರಿವರ್ಸ್ ತೆಗೆದುಕೊಳ್ಳುವುದು, ಸರಕು–ಸಾಮಗ್ರಿ ಸಾಗಿಸುವುದು ಕಷ್ಟದ ಕೆಲಸ. ಮಳೆಗಾಲದಲ್ಲಿ ಸಾಧ್ಯವಾಗುವಷ್ಟು ಕೆಲಸ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
‘ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ. ಜೋರು ಮಳೆಯಾದರೆ ಮತ್ತೆ ಕುಸಿಯುವ ಕಳವಳ ನಮ್ಮದು. ಅದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಬೆಟ್ಟದ ಸಂರಚನೆ ತುಂಬಾ ದುರ್ಬಲ ಹಾಗೂ ಸೂಕ್ಷ್ಮವೆಂಬುದನ್ನು ಅರ್ಥ ಮಾಡಿಕೊಂಡು ಕೆಲಸ ನಿರ್ವಹಿಸಬೇಕು. ಆದರೆ, ಅದಕ್ಕೆ ತಕ್ಕಂತೆ ಕ್ರಮ ವಹಿಸಿಲ್ಲ’ ಎಂಬುದು ಪರಿಸರ ಬಳಗ ಮತ್ತು ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ಅವರ ಆರೋಪ.
2021ರ ಅಕ್ಟೋಬರ್ ಕೊನೆಯ ವಾರ ಕುಸಿತ ಐಐಎಸ್‌ಸಿ ವಿಜ್ಞಾನಿಗಳಿಂದ ಪರಿಶೀಲನೆ 2022ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭ
ತಜ್ಞರು ವರದಿ ನೀಡಿದ್ದರೆ ವಿವರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಉತ್ತಮ ಗುಣಮಟ್ಟದ ವೈಜ್ಞಾನಿಕ ಕೆಲಸ ನಡೆಯಬೇಕು
-ಪರಶುರಾಮೇಗೌಡ ಸಂಸ್ಥಾಪಕ ಸದಸ್ಯ ಪರಿಸರ ಬಳಗ ಮತ್ತು ಚಾಮುಂಡಿ ಬೆಟ್ಟ ಉಳಿಸಿ ಸಮಿತಿ
ನೂತನ ತಂತ್ರಜ್ಞಾನದಂತೆ ತಡೆಗೋಡೆ ನಿರ್ಮಿಸ ಲಾಗುತ್ತಿದೆ. ಅಗತ್ಯ ಸಾಮಗ್ರಿಗಳನ್ನೂ ಸಂಗ್ರಹಿಸಲಾಗಿದೆ. 30 ಅಡಿ ಆಳದವರೆಗೆ ಮಣ್ಣನ್ನು ತೆಗೆಯಲಾಗಿದೆ
-ನಾಗರಾಜ್ ಎಇಇ ಲೋಕೋಪಯೋಗಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.