ಚಾಮುಂಡಿ ಬೆಟ್ಟದಲ್ಲಿ ಶನಿವಾರ ಚಾಮುಂಡೇಶ್ವರಿಯ ಚಿನ್ನದ ಪಲ್ಲಕ್ಕಿ ಮೆರವಣಿಗೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಜಿ.ಟಿ. ದೇವೇಗೌಡ ಚಾಲನೆ ನೀಡಿದರು.
ಮೈಸೂರು: ಶಕ್ತಿದೇವತೆ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವವು ಚಾಮುಂಡಿ ಬೆಟ್ಟದಲ್ಲಿ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಚಿನ್ನದ ಪಲ್ಲಕ್ಕಿಯಲ್ಲಿ ದೇವಿಯ ಮೂರ್ತಿಯನ್ನು ಇರಿಸಿ ದೇಗುಲದ ಸುತ್ತ ಮೆರವಣಿಗೆ ಮಾಡಲಾಯಿತು. ಅಪಾರ ಸಂಖ್ಯೆಯ ಭಕ್ತರು ‘ಜೈ ದುರ್ಗೆ, ಜೈ ಚಾಮುಂಡೇಶ್ವರಿ’ ಎಂಬ ಘೋಷಣೆ ಕೂಗುತ್ತ ಸಂಭ್ರಮಿಸಿದರು. ಅರಮನೆ ಪೊಲೀಸ್ ಬ್ಯಾಂಡ್ ಜೊತೆಗೆ ಮಂಗಳವಾದ್ಯ, ಛತ್ರಿ, ಚಾಮರಗಳೊಂದಿಗೆ ಮೆರವಣಿಗೆ ಮುಂದುವರಿಯಿತು. ಆಷಾಢ ಮಾಸದ ಕೃಷ್ಣ ಪಕ್ಷದ ಅಷ್ಟಮಿ ರೇವತಿ ನಕ್ಷತ್ರದಲ್ಲಿ ಪ್ರತಿ ವರ್ಷ ನಡೆಯುವ ಈ ಉತ್ಸವಕ್ಕೆ ಭಕ್ತರ ದಂಡು ಹರಿದು ಬಂದಿತ್ತು.
ಬೆಳಿಗ್ಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರದಲ್ಲಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಇರಿಸಿ, ದೇವಸ್ಥಾನದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. 10.30ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಯದುವೀರ್, ಪ್ರಮೋದಾದೇವಿ ಒಡೆಯರ್ ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಒಳ ಆವರಣವನ್ನು ಗುಲಾಬಿ, ಸೇವಂತಿಗೆ, ಚೆಂಡು ಹೂ ಸೇರಿದಂತೆ ಬಗೆ ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕಾರ ವಾಡಲಾಗಿತ್ತು. ಗರ್ಭಗುಡಿ, ಪ್ರವೇಶದ್ವಾರ, ಹೊರಭಾಗವನ್ನೂ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆ 4 ಗಂಟೆಯಿಂದ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ದೇವಿಯ ಮೂರ್ತಿಗೆ ಅಭ್ಯಂಜನ ಸ್ನಾನ ವಾಡಿಸಿ, ಬಳಿಕ ಅಲಂಕಾರ ವಾಡಿ ಪೂಜೆ ನೆರವೇರಿಸಲಾಯಿತು. ನಂತರದಲ್ಲಿ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುವಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ರಾತ್ರಿ 8.30ಕ್ಕೆ ಉತ್ಸವ ಪೂಜೆ, ದರ್ಬಾರ್ ಉತ್ಸವ, ಮಂಟಪೋತ್ಸವ ನಡೆಸಿ, ರಾಷ್ಟ್ರಾಶೀರ್ವಾದದೊಂದಿಗೆ ವರ್ಧಂತಿಯು ಸಂಪನ್ನಗೊಂಡಿತು.
ಮೈಸೂರು ಮಾತ್ರವಲ್ಲದೆ ನಾಡಿನ ವಿವಿಧ ಭಾಗಗಳ ಸಹಸ್ರಾರು ಭಕ್ತರು ದೇವಾಲಯಕ್ಕೆ ಭೇಟಿ ಕೊಟ್ಟರು. ಭಕ್ತರಿಗಾಗಿ ಬೆಟ್ಟದ ದಾಸೋಹ ಭವನ, ಪಾರ್ಕಿಂಗ್ ಸ್ಥಳ ಸೇರಿದಂತೆ ಅಲ್ಲಲ್ಲಿ ಪ್ರಸಾದದ ವ್ಯವಸ್ಥೆಯೂ ಇತ್ತು.
ಬೆಟ್ಟದಲ್ಲಿ ದಿನವಿಡೀ ಧಾರ್ಮಿಕ ಕಾರ್ಯಕ್ರಮ ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ರಾಜ್ಯದ ವಿವಿಧ ಭಾಗಗಳ ಭಕ್ತರು ಭಾಗಿ
ಚಾಮುಂಡಿಯ ಮೂಲ ಹಾಗೂ ಉತ್ಸವಮೂರ್ತಿಗಳಿಗೆ ಸೀರೆ ಅರ್ಪಿಸಿ ನಾಡಿನ ಒಳಿತಿಗೆ ಪ್ರಾರ್ಥಿಸಿದೆವು. ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿ ಅಲ್ಲಿಯೂ ಪೂಜೆ ಸಲ್ಲಿಸುತ್ತೇವೆ- ಪ್ರಮೋದಾದೇವಿ ಒಡೆಯರ್
ಮುಮ್ಮಡಿ ಕೃಷ್ಣರಾಜ ಒಡೆಯರ್ ಇದೇ ದಿನ ಬೆಟ್ಟದಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ನೀಡಿದ್ದರು. ಅಂದಿನಿಂದ ವರ್ಧಂತಿ ಆಚರಣೆಯಲ್ಲಿದೆ. ಚಿನ್ನದ ಪಲ್ಲಕ್ಕಿಯಲ್ಲಿ ಮೂರ್ತಿ ಇಟ್ಟು ಮೆರವಣಿಗೆ ಮಾಡುವುದು ಇಲ್ಲಿನ ವಿಶೇಷ-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದ
ವಿವಿಧೆಡೆ ಪ್ರಸಾದ ವಿನಿಯೋಗ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ನಗರದ ವಿವಿಧ ದೇಗುಲಗಳಲ್ಲಿ ಶನಿವಾರ ವಿಶೇಷ ಪೂಜೆಗಳು ನಡೆದವು. ವಿವಿಧೆಡೆ ಭಕ್ತರಿಂದ ಪ್ರಸಾದ ವಿನಿಯೋಗ ನಡೆಯಿತು. ನಗರದ ಕೆ.ಜಿ. ಕೊಪ್ಪಲಿನಲ್ಲಿ ಇರುವ ಚಾಮುಂಡೇಶ್ವರಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ನೆರೆದಿದ್ದು ಸರದಿ ಸಾಲಿನಲ್ಲಿ ನಿಂತು ಜನರು ದರ್ಶನ ಪಡೆದರು. ನಗರದ ಬಸ್ ನಿಲ್ದಾಣ ಅಗ್ರಹಾರ ವೃತ್ತ ಚಾಮುಂಡಿಪುರಂ ಕೆ.ಜಿ. ಕೊಪ್ಪಲು ಚಾಮರಾಜ ಮೊಹಲ್ಲಾ ವಿದ್ಯಾರಣ್ಯಪುರಂ ಕುವೆಂಪುನಗರ ಕಲ್ಯಾಣಗಿರಿ ದಟ್ಟಗಳ್ಳಿ ಜೆ.ಪಿ. ನಗರ ಶಾರದಾದೇವಿ ನಗರ ಸೇರಿದಂತೆ ಅಲ್ಲಲ್ಲಿ ಪ್ರಸಾದ ವಿತರಣೆ ನಡೆಯಿತು. ಚಾಮುಂಡಿಪುರಂನ ಬಸವ ಬಳಗವು ಚಾಮುಂಡಿಪುರಂ ವೃತ್ತದಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆಗೆ ಸ್ವಾಮಿ ಮಠದ ಅಡವಿ ಸ್ವಾಮೀಜಿ ಕಾಂಗ್ರೆಸ್ ಮುಖಂಡ ಎಂ.ಕೆ. ಸೋಮಶೇಖರ್ ಎಚ್.ವಿ. ರಾಜೀವ್ ಚಾಲನೆ ನೀಡಿದರು. ಬಳಗದ ಅಧ್ಯಕ್ಷ ಸಿ. ಸಂದೀಪ್ ಗೌರವ ಅಧ್ಯಕ್ಷ ಅಂಬಳೆ ಶಿವಣ್ಣ ಉಪಾಧ್ಯಕ್ಷ ಎಂ. ಬಸವರಾಜು ಖಜಾಂಜಿ ವಿ. ಬಸವರಾಜು ಹಾಗೂ ಪದಾಧಿಕಾರಿಗಳು ಜೊತೆಗಿದ್ದರು. ವಿಶ್ವೇಶ್ವರ ನಗರದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.