ADVERTISEMENT

ಬೆಟ್ಟದ ಪರಿಷೆಗೆ ನೆರಳಾದ ಮೋಡಗಳು

ತುಂತುರು ಮಳೆಯಲ್ಲಿ ಮಿಂದೆದ್ದ ಭಕ್ತಸಾಗರ, ಎಲ್ಲೆಡೆ ಹರ್ಷೊದ್ಗಾರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:48 IST
Last Updated 19 ಜುಲೈ 2019, 19:48 IST
ಮೂರನೇ ಆಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಭಕ್ತರು ಮೆಟ್ಟಿಲುಗಳ ಮೂಲಕ ಹತ್ತಿ ದರ್ಶನಕ್ಕೆ ಬಂದರು-PHOTO / SAVITHA B R
ಮೂರನೇ ಆಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಭಕ್ತರು ಮೆಟ್ಟಿಲುಗಳ ಮೂಲಕ ಹತ್ತಿ ದರ್ಶನಕ್ಕೆ ಬಂದರು-PHOTO / SAVITHA B R   

ಮೈಸೂರು: ದಟ್ಟ ಮೋಡಗಳಿಂದ ಜಿನುಗುತ್ತಿದ್ದ ಹನಿ ಹನಿ ಮಳೆಯಲ್ಲಿ ಮಿಂದ ಭಕ್ತ ಸಮೂಹ ‘ತಾಯಿ ಚಾಮುಂಡಿಗೆ ಉಘೇ ಉಘೇ’ ಎಂದಿತು. ಇದಕ್ಕೆ ಪೂರಕವಾಗಿ ‘ಒಲಿದು ಬಾರಮ್ಮಯ್ಯಾ ಒಲಿದು ಬಾರೆ ಮೈಸಾಸುರನ್ನು ಕೊಂದು, ಮೈಸೂರಲಿ ನೆಲೆನಿಂತ ಬೆಟ್ಟದ ಚಾಮುಂಡಿ ಒಲಿದು ಬಾರೆ’ ಜನಪದ ಗೀತೆಯು ಧ್ವನಿವರ್ಧಕದಲ್ಲಿ ಕೇಳಿ ಬರುತ್ತಿತ್ತು.

ಪಡುವಣದ ದಿಕ್ಕಿನಿಂದ ಬೀಸುತ್ತಿದ್ದ ಕುಳಿರ್ಗಾಳಿಗೆ ನಡುಗುತ್ತಲೇ ಹೆಜ್ಜೆ ಹಾಕಿದ ಭಕ್ತರು ಸಾಲಿನಲ್ಲಿ ನಿಂತರು. ಮತ್ತೆ ಹಲವರು ಕಾಲ್ನಡಿಗೆಯಲ್ಲಿ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದರು. ಇವರಿಗೆ ಕಳೆದ ವಾರದಂತೆ ಬಿಸಿಲಿನ ತಾಪ ತಟ್ಟಲಿಲ್ಲ. ‘ತಾಯಿ ಚಾಮುಂಡಿ ಜಾಲ ತುರುಬಿನ ಮೇಲೆ ಜಾಗರವಾಡವನೆ ಎಳೆನಾಗ, ಏಳೆಡೆ ಸರ್ಪ ತಾಯಿ ಚಾಮುಂಡಿಗೆ ಬಿಸಿಲೆಂದು’ ಎಂಬ ಜನಪದ ಗೀತೆಯೊಂದರ ಸಾಲಿನಂತೆ ಮೋಡಗಳು ಬೆಟ್ಟಕ್ಕೆ ಚಾವಣಿಯೋಪಾದಿಯಲ್ಲಿ ಆವರಿಸಿದ್ದವು.

ಮೋಡಗಳ ಚಪ್ಪರದ ಕೆಳಗೆ ಭಕ್ತ ಸಮೂಹ ಅಕ್ಷರಶಃ ತಂಪಾಯಿತು. ಇದಕ್ಕೆ ಪೂರಕವಾಗಿ ಪೊಲೀಸರು ಶಿಸ್ತುಬದ್ಧವಾಗಿ ಏರ್ಪಡಿಸಿದ್ದ ಸಾಲುಗಳು ಹೆಚ್ಚಿನ ದಣಿವನ್ನು ಉಂಟು ಮಾಡಲಿಲ್ಲ.

ADVERTISEMENT

ನಿಂಬೆಹಣ್ಣಿನ ಆರತಿ, ಬೆಲ್ಲದಾರತಿ, ಕುಂಕುಮ ನೀಡುವುದು, ಕಾಣಿಕೆ ಅರ್ಪಿಸುವುದು ಹೀಗೆ ಭಕ್ತರು ಮನಸ್ಸಿನಲ್ಲಿ ಅಂದುಕೊಂಡ ಹರಕೆಗಳನ್ನು ಒಪ್ಪಿಸಿದರು. ಗರ್ಭಗುಡಿಯಲ್ಲಿ ‘ಲಕ್ಷ್ಮೀ’ ಅಲಂಕಾರದಿಂದ ಕಂಗೊಳಿಸುತ್ತಿದ್ದ ಮೂರ್ತಿಗೆ ಒಂದರೆಕ್ಷಣ ಕೈಮುಗಿದು ಧನ್ಯರಾದೆವು ಎಂದುಕೊಂಡರು. ಮತ್ತೆ ಹಲವರು ಆವರಣದಲ್ಲಿಟ್ಟಿದ್ದ ಉತ್ಸವಮೂರ್ತಿಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.