ADVERTISEMENT

ಚಾಂದ್‌ಪಾಷ ಹಾಗೂ ನಂದಕುಮಾರ್‌ಗೆ ‘ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಮೇ 2025, 16:23 IST
Last Updated 10 ಮೇ 2025, 16:23 IST
ಮೈಸೂರಿನ ಕಿರುರಂಗಮಂದಿರದಲ್ಲಿ ಶನಿವಾರ ಕಲಬುರಗಿಯ ಎನ್.ಎಸ್‌. ಚಾಂದ್‌ಪಾಷ ಹಾಗೂ ಯಾದಗಿರಿಯ ಪಿ. ನಂದಕುಮಾರ್‌ ಅವರಿಗೆ ‘ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು
ಮೈಸೂರಿನ ಕಿರುರಂಗಮಂದಿರದಲ್ಲಿ ಶನಿವಾರ ಕಲಬುರಗಿಯ ಎನ್.ಎಸ್‌. ಚಾಂದ್‌ಪಾಷ ಹಾಗೂ ಯಾದಗಿರಿಯ ಪಿ. ನಂದಕುಮಾರ್‌ ಅವರಿಗೆ ‘ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು   

ಮೈಸೂರು: ‘ಸಮಾಜಕ್ಕೆ ಅರ್ಪಿಸಿಕೊಂಡವರನ್ನು ಜನ ಸ್ಮರಿಸುತ್ತಾರೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ಹೇಳಿದರು.

ಚಾಮರಾಜನಗರ ರಂಗವಾಹಿನಿ, ಮೈಸೂರಿನ ನೆಲೆ- ಹಿನ್ನೆಲೆ, ರಾಮಮನೋಹರ ಲೋಹಿಯಾ ಟ್ರಸ್ಟ್‌ ವತಿಯಿಂದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ, ರಾಜಶೇಖರ ಕೋಟಿ ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಸಾರಕ್ಕೆ ಸೀಮಿತರಾದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಕೆಲವರು ಸಾಧಕರಿರುತ್ತಾರೆ. ಮತ್ತೆ ಕೆಲವರು ಸಮಯ ಸಾಧಕರು. ನಿಜವಾದ ಸಾಧಕರು ಸಮಾಜಕ್ಕಾಗಿ ಬದುಕುತ್ತಾರೆ’ ಎಂದರು.

ADVERTISEMENT

‘ಮುಳ್ಳೂರು ನಾಗರಾಜ ಸರ್ಕಾರಿ ಕೆಲಸ ತಿರಸ್ಕರಿಸಿ, ಸಮಾಜಕ್ಕೆ ಅರ್ಪಿಸಿಕೊಂಡವರು. ಸಾಹಿತ್ಯದ ಮೂಲಕ ದಸಂಸ ಹೋರಾಟಕ್ಕೆ ಜೀವ ತುಂಬಿದರು. ಕೋಟಿ ಅವರು ಪತ್ರಿಕೋದ್ಯಮದ ಮೂಲಕ ಎಲ್ಲಾ ಹೋರಾಟಗಳಿಗೆ ಪ್ರೋತ್ಸಾಹ ನೀಡಿದರು’ ಎಂದು ಸ್ಮರಿಸಿದರು.

ಆಧ್ಯಕ್ಷತೆ ವಹಿಸಿದ್ದ ನಂಜನಗೂಡು ಶಾಸಕ ದರ್ಶನ್‌ ಧ್ರುವನಾರಾಯಣ್‌, ‘ಮುಳ್ಳೂರು ನಾಗರಾಜ ಅವರ ಕೊಡುಗೆಯನ್ನು ಸ್ಮರಿಸಿ ನಂಜನಗೂಡಿನ ಪ್ರಮುಖ ರಸ್ತೆಗೆ ಅವರ ಹೆಸರಿಡಲಾಗಿದೆ’ ಎಂದರು.

ಮುಳ್ಳೂರು ನಾಗರಾಜ ಕುರಿತು ಕಲಬುರಗಿ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್‌, ರಾಜಶೇಖರ ಕೋಟಿ ಬಗ್ಗೆ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕಿ ಲಕ್ಷ್ಮಮ್ಮ, ರಂಗಕರ್ಮಿ ಕೆ.ಆರ್‌. ಗೋಪಾಲಕೃಷ್ಣ, ನಂಜನಗೂಡು ತಾ.ಪಂ. ಮಾಜಿ ಅಧ್ಯಕ್ಷ ನಾಗೇಶ್‌ ರಾಜ್‌ ಮುಖ್ಯ ಅತಿಥಿಗಳಾಗಿದ್ದರು. ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಸಂಚಾಲಕ ರೂಬಿನ್‌ ಸಂಜಯ್‌, ಪತ್ರಕರ್ತ ಮುಳ್ಳೂರು ರಾಜು ಪಾಲ್ಗೊಂಡಿದ್ದರು.

ನಂತರ ಹನೂರು ಚನ್ನಪ್ಪ ರಚನೆಯ ‘ಬೆಲ್ಲದ ದೋಣಿ’ ನಾಟಕ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.