ADVERTISEMENT

ಡಿಎನ್‌ಎ ಪರೀಕ್ಷೆಗೆ ಮೈಸೂರಿನ ‘ಚೀತಾ’

ಅಳಿದಿರುವ ‘ಏಷ್ಯಾಟಿಕ್‌ ಚೀತಾ’ ಹೋಲಿಕೆ ಹಿನ್ನೆಲೆ * ಆರ್‌ಎಂಎನ್‌ಎಚ್‌ ನಿರ್ಧಾರ

ಮೋಹನ್ ಕುಮಾರ ಸಿ.
Published 21 ಸೆಪ್ಟೆಂಬರ್ 2022, 20:43 IST
Last Updated 21 ಸೆಪ್ಟೆಂಬರ್ 2022, 20:43 IST
‘ಏಷ್ಯಾಟಿಕ್‌ ಚೀತಾ’ವನ್ನು ಹೋಲುವ ‘ಸ್ಟಫ್ಡ್‌’ ಗೊಂಬೆ
‘ಏಷ್ಯಾಟಿಕ್‌ ಚೀತಾ’ವನ್ನು ಹೋಲುವ ‘ಸ್ಟಫ್ಡ್‌’ ಗೊಂಬೆ   

ಮೈಸೂರು: ‘ಏಷ್ಯಾಟಿಕ್‌ ಚೀತಾ’ವನ್ನು ಹೋಲುವ ‘ಸ್ಟಫ್ಡ್‌’ ಗೊಂಬೆಯು ನಗರದ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತುಸಂಗ್ರಹಾಲಯದಲ್ಲಿದ್ದು (ಆರ್‌ಎಂಎನ್‌ಎಚ್‌), ಅದರ ಕೂದಲನ್ನು ಸಂಸ್ಥೆಯು ಡಿಎನ್‌ಎ ಪರೀಕ್ಷೆಗಾಗಿ ಕಳುಹಿಸಲಿದೆ.

ಇಲ್ಲಿರುವ ‘ಚೀತಾ’ ಗೊಂಬೆಯನ್ನು ‘ಟ್ಯಾಕ್ಸಿಡರ್ಮಿ’ ಕಲೆಯಲ್ಲಿ ಸಿದ್ಧಪಡಿಸಲಾಗಿದೆ. ಇದು ಭಾರತದ್ದೇ ಅಥವಾ ಆಫ್ರಿಕಾದ ಚೀತಾವೇ ಎಂಬುದು ಸ್ಪಷ್ಟವಾಗಿಲ್ಲ. ಈ ಗೊಂಬೆಯನ್ನು 40ರ ದಶಕದಲ್ಲಿ ನಗರದಲ್ಲಿ ನೆಲೆಸಿದ್ದ ‘ಟ್ಯಾಕ್ಸಿಡೆರ್ಮಿ’ ತಜ್ಞ ವ್ಯಾನ್ ಈಗನ್, ಚಾಮರಾಜೇಂದ್ರ ಮೃಗಾಲಯದಲ್ಲಿ ಮೃತಪಟ್ಟಿದ್ದ ಚೀತಾದ ಚರ್ಮದಿಂದ ತಯಾರಿಸಿದ್ದರೆನ್ನಲಾಗಿದೆ.

‘ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿನ ಪಾಕೃತಿಕ ಇತಿಹಾಸ ಸಂಗ್ರಹ ವಿಭಾಗವನ್ನು ಮುಚ್ಚುವಾಗ ಈ ಬೊಂಬೆಯನ್ನು ನಮಗೆ ಹಸ್ತಾಂತರಿಸಲಾಗಿತ್ತು’ ಎಂದು ಸಂಸ್ಥೆಯ ನಿರ್ದೇಶಕ ಅರ್ಜುನ್‌ ಪ್ರಸಾದ್‌ ತಿವಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೈದರಾಬಾದ್‌ನ ಸಿಸಿಎಂಬಿ ಹಾಗೂ ಕೋಲ್ಕತ್ತಾದ ಭಾರತೀಯ ಪ್ರಾಣಿ ಸರ್ವೇಕ್ಷಣಾಲಯದ ವಿಜ್ಞಾನಿ ಅರ್ಚನಾ ಬಹುಗುಣ ಅವರಿಗೆ ಚೀತಾದ ಚರ್ಮದ ಕೂದಲನ್ನು ಕಳುಹಿಸಲಾಗುವುದು’ ಎಂದರು.

‘ಚಾಮರಾಜೇಂದ್ರ ಮೃಗಾಲಯದಲ್ಲಿ ಏಷ್ಯಾಟಿಕ್‌ ಹಾಗೂ ಆಫ್ರಿಕಾ ಚೀತಾಗಳು ಒಂದೇ ಕಡೆಯಿದ್ದವು. ಡಿಎನ್‌ಎ ಪರೀಕ್ಷೆಯಿಂದ ಸಂಸ್ಥೆಯ ಚೀತಾ ಮೂಲ ಪತ್ತೆಯಾಗಲಿದೆ’ ಎಂದು ಸಂಸ್ಥೆಯ ವಿಜ್ಞಾನಿ ಡಾ.ಎಂ.ವಿಜಯ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.