
ನಂಜನಗೂಡು: ಕಾಯಕ ಹಾಗೂ ದಾಸೋಹದ ತತ್ವಗಳನ್ನು ತಮ್ಮ ಆಚರಣೆಯಲ್ಲಿ ಅಳವಡಿಸಿಕೊಂಡಿದ್ದ ಮಲ್ಲನಮೂಲೆ ಚೆನ್ನಬಸವಸ್ವಾಮೀಜಿ, ಭಕ್ತರ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಮಠದ ಅಭಿವೃದ್ಧಿಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು ಎಂದು ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಯೋಜಿಸಿದ್ದ ಚೆನ್ನಬಸವಸ್ವಾಮೀಜಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಜಾತಿ, ಮತ ಹಾಗೂ ಧರ್ಮಾತೀತವಾಗಿ ಭಕ್ತರನ್ನು ಹೊಂದಿದ್ದ ಚೆನ್ನಬಸವಸ್ವಾಮೀಜಿ ತಪ್ಪುಗಳು ಕಂಡಾಗ ನಿಷ್ಟುರತೆಯಿಂದ ಎಚ್ಚರಿಸುತ್ತಿದ್ದರು. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಸ್ವಾಮೀಜಿ, ಕಾರ್ತೀಕ ಮಾಸದ ಮೂರನೇ ಸೋಮವಾರವೇ ದೇಹಾಂತ್ಯ ಮಾಡುವ ಇಂಗಿತ ಹೊಂದಿದ್ದರು. ಅವರು ನಿಶ್ಚಿತ ಸಮಯದಲ್ಲೇ ಲಿಂಗೈಕ್ಯರಾಗುವ ಮೂಲಕ ತಮ್ಮ ಆಶಯದಂತೆ ನಡೆದುಕೊಂಡಿದ್ದಾರೆ. ಶ್ರೀ ಗುರಕಂಬಳೀಶ್ವರ ಮಠದ ನೂತನ ಪೀಠಾಧಿಪತಿಯಾಗಲಿರುವ ಕಿರಿಯ ಶ್ರೀಗಳಿಗೆ ಸಮಾಜದ ಎಲ್ಲರ ಸಹಕಾರ ಹಾಗೂ ಬೆಂಬಲ ಅಗತ್ಯ ಎಂದು ಹೇಳಿದರು.
ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದ ಚೆನ್ನಬಸವಸ್ವಾಮೀಜಿ ಭೌತಿಕವಾಗಿ ಮರೆಯಾಗಿದ್ದರೂ, ಅವರ ಸರಳ ಜೀವನ ಶೈಲಿ ಹಾಗೂ ಮಠದಲ್ಲಿನ ಅಕ್ಷರ ಹಾಗೂ ಅನ್ನದಾಸೋಹ, ಸ್ವಾಭಿಮಾನದ ಸಂದೇಶಗಳ ಮೂಲಕ ಭಕ್ತರ ಮನದಲ್ಲಿ ಸದಾ ಕಾಲದಲ್ಲೂ ಉಳಿಯಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ದೇವನೂರು ಶ್ರೀ ಗುರುಮಲ್ಲೇಶ್ವರ ಮಠಾಧ್ಯಕ್ಷ ಮಹಾಂತ ಸ್ವಾಮೀಜಿ, ಹುಲ್ಲಹಳ್ಳಿ ವಿರಕ್ತಮಠದ ಚೆನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ, ಶಿರಮಳ್ಳಿ ಇಮ್ಮಡಿ ಮುರುಗಿ ಸ್ವಾಮೀಜಿ, ನಾಗರಾಜೇಂದ್ರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಪ್ರೊ.ಸದಾಶಿವಮೂರ್ತಿ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಮಲ್ಲನಮೂಲೆ ಮಠದ ಇಮ್ಮಡಿ ಸಿದ್ಧಲಿಂಗಸ್ವಾಮೀಜಿ, ಮಹೇಶ್ ಸ್ವಾಮೀಜಿ, ಚುಂಚನಹಳ್ಳಿ ಸ್ವಾಮೀಜಿ, ಶಿವಪ್ಪ ದೇವರು, ಬದನವಾಳು ಮಹೇಶ್, ಶಿವನಾಗಪ್ಪ, ಮಹದೇವಪ್ರಸಾದ್, ಮಕ್ಕಳಮನೆ ಸೋಮಶೇಖರ್,ಕೋಮಲ, ಮಂಜುಳ ಮಧು, ನಂದಿನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.