ಸರಗೂರು: ‘ಸಮೀಪದ ಹಾಲುಗಡು ಇಟ್ನಾದಲ್ಲಿ ಮಾರ್ಚ್ 30ರಿಂದ ಏ. 1ರವರೆಗೆ ನಡೆಯುವ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ನೀಡಬಾರದು, ಸರ್ಕಾರದ ವಿರುದ್ಧ ಯಾವುದೇ ಚಟುವಟಿಕೆ ನಡೆಯಬಾರದು’ ಎಂದು ತಹಶೀಲ್ದಾರ್ ಮೋಹನ ಕುಮಾರಿ ತಿಳಿಸಿದರು.
ಸರಗೂರು ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಬೇಕು. ಮನುಗನಹಳ್ಳಿ ಮತ್ತು ಕೊತ್ತೇಗಾಲ ಗ್ರಾಮ ಪಂಚಾಯಿತಿ ಪಿಡಿಒಗಳು ಜಾತ್ರೆ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಬೇಕು’ ಎಂದು ಸೂಚಿಸಿದರು.
ಮುಜುರಾಯಿ ಇಲಾಖೆ ಇಒ ರಘು ಮಾತನಾಡಿ, ‘ಹಾಲುಗಡುವಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯ, ಸ್ವಚ್ಛತೆ ಸಂಬಂಧ ಪಟ್ಟಣ ಪಂಚಾಯಿತಿಯವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಚಿಕ್ಕದೇವಮ್ಮ ಬೆಟ್ಟಕ್ಕೆ ಬರುವ ರಸ್ತೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವು ಮಾಡಲು ಲೋಕೋಪಯೋಗಿ ಇಲಾಖೆಗೆ ಟೆಂಡರ್ ಆಗಿದೆ. ಗುತ್ತಿಗೆದಾರ ಕೆಲಸ ಮಾಡಿಲ್ಲ, ಪೋನ್ ಮಾಡಿದರೆ ಪೋನ್ ತೆಗೆಯುತ್ತಿಲ್ಲ’ ಎಂದು ಸಬೆಗೆ ಮಾಹಿತಿ ನೀಡಿದರು.
‘ಹಾಲುಗಡು ಜಪದಕಟ್ಟೆಯಲ್ಲಿ ಚಿಕ್ಕದೇವಮ್ಮನವರ ದರ್ಶನ ಮಾಡಲು ಬರುವ ಭಕ್ತರಿಗೆ ಸಾಲಾಗಿ ಬಂದು ದರ್ಶನ ಮಾಡಲು ಅನುಕೂಲವಾಗುವಂತೆ ಬ್ಯಾರಿಕೇಡ್‌ಗಳನ್ನು ಹಾಕಬೇಕು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಆಗಬೇಕು, ಕಪಿಲಾ ನದಿಗೆ ಭಕ್ತರ ಸ್ನಾನ ಮಾಡಲು ಹೋಗುತ್ತಾರೆ ಆದ್ದರಿಂದ ಜನರ ಜೀವದ ಹಿತದೃಷ್ಟಿಯಿಂದ ಈಜು ಪಟುಗಳನ್ನು ನಿಯೋಜನೆ ಮಾಡಬೇಕು ಹಾಗೂ ಮುಂಜಾಗ್ರತೆಯಿಂದ ಅಗ್ನಿಶಾಮಕ ದಳದ ಒಂದು ವಾಹನ ಸ್ಥಳದಲ್ಲಿ ಇರಬೇಕು’ ಎಂದು ರಘು ಹೇಳಿದರು.
ವೃತ್ತ ನಿರೀಕ್ಷಕ ಪ್ರಸನ್ನಕುಮಾರ್ ಮಾತನಾಡಿ, ‘ಚಿಕ್ಕದೇವಮ್ಮ ಪಾದದಿಂದ ಬೆಟ್ಟದ ಮೇಲೆ ಯಾವುದೇ ವಾಹನಗಳು ಹೋಗಲು ಅವಕಾಶ ಕೊಡುವುದಿಲ್ಲ. ಇದರಿಂದ ಸಂಚಾರಕ್ಕೆ ಹಾಗೂ ಭಕ್ತರು ಬೆಟ್ಟಕ್ಕೆ ಹೋಗಲು ತೊಂದರೆ ಆಗುತ್ತದೆ. ಪ್ರಾಣಿ ಬಲಿಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಿ ಕಾನೂನು ಪಾಲನೆ ಮಾಡಬೇಕು. ಜಾತ್ರೆ ನಡೆಯುವ ಸ್ಥಳಕ್ಕೆ ಭಕ್ತರ ಅನುಕೂಲ ಕಲ್ಪಿಸಲು ತಹಶೀಲ್ದಾರ್, ಪಿಡಿಒ, ಚಿಕ್ಕದೇವಮ್ಮ ಬೆಟ್ಟದ ಮುಜರಾಯಿ ಇಲಾಖೆ ಇಒ ರಘು ಎಲ್ಲರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
ಚಿಕ್ಕದೇವಮ್ಮ ಬೆಟ್ಟ ಪಾರುಪತ್ತೇದಾರ್ ಮಹದೇವಸ್ವಾಮಿ, ಸರಗೂರು ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಪುರದಕಟ್ಟೆ ಬಸವರಾಜು, ಹಾಲುಗಡು ಜಾತ್ರಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದೊಡ್ಡ ವೀರನಾಯಕ, ಇಟ್ನಾ ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ, ಯಜಮಾನರಾದ ನಿಂಗರಾಜು, ಕೆ.ನಾಗರಾಜು, ಬಿ.ಬೆಟ್ಟ ನಾಯಕ, ಎನ್.ಬಸವನಾಯಕ, ಬಿ. ಬಸವರಾಜು, ಮಂಚನಾಯಕ, ಬಿ.ರಾಮನಾಯಕ, ಬೆಟ್ಟನಾಯಕ, ದೊಡ್ಡ ಸಿದ್ದನಾಯಕ, ಇಟ್ನಾ ರಾಜಣ್ಣ, ಚಿಕ್ಕಣ್ಣ, ಐ.ಬಿ.ರವಿಕುಮಾರ, ನಾಗೇಂದ್ರ, ಶೇಷಾ, ತಾಲ್ಲೂಕು ಕಚೇರಿ ಗ್ರೇಡ್ 2 ತಹಶೀಲ್ದಾರ್ ಮನೋಹರ್, ಕಂದಾಯ ನಿರೀಕ್ಷಕ ಮುಜೀಬ್, ಶ್ರೀನಿವಾಸ್, ಇಟ್ನಾ ಪಿಡಿಒ ಚಿನ್ನಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.