
ಸರಗೂರು: ‘ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಜ.2 ರಿಂದ ನಾಲ್ಕು ದಿನಗಳು ನಡೆಯುವ ಚಿಕ್ಕದೇವಮ್ಮ ಜಾತ್ರೆ ಮಹೋತ್ಸವಕ್ಕೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ತಹಶೀಲ್ದಾರ್ ಮೋಹನಕುಮಾರಿ ಸೂಚಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆದ ಚಿಕ್ಕದೇವಮ್ಮ ಜಾತ್ರೆ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಜಾತ್ರಾ ಮಹೋತ್ಸವವನ್ನು ಕಳೆದ ಬಾರಿಗಿಂತ ಉತ್ತಮವಾಗಿ ನಡೆಸಬೇಕು. ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಮೂಲಸೌಲಭ್ಯ ಕಲ್ಪಿಸಲು ಮುಂದಾಗಬೇಕು’ ಎಂದರು.
‘ಜಾತ್ರಾಮಾಳವನ್ನು ಸಮತಟ್ಟು ಮಾಡಿಕೊಡಬೇಕು. ಜಾತ್ರೆಗೆ ಬರುವ ಭಕ್ತಾದಿಗಳು ತೊಂದರೆ ಇಲ್ಲದಂತೆ ದರ್ಶನ ಪಡೆಯಲು ವ್ಯವಸ್ಥೆ ಮಾಡಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು, ಆರೋಗ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು’ ಎಂದು ತಿಳಿಸಿದರು.
‘ಜಾತ್ರೆಗೆ ವಿವಿಧೆಡೆಯಿಂದ ಬರುವ ಭಕ್ತರ ಅನುಕೂಲಕ್ಕಾಗಿ ಬಸ್ ಸೌಲಭ್ಯ ಕಲ್ಪಿಸಬೇಕು. ಅಂಗಡಿ ಮುಂಗಟ್ಟು, ವಾಹನಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಸಬೇಕು. ಅನ್ನದಾಸೋಹ, ಸ್ನಾನಗೃಹ, ಶೌಚಾಲಯ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಬದಿಯಲ್ಲಿರುವ ಜಂಗಲ್ ತೆರವುಗೊಳಿಸಬೇಕು. ಇದಲ್ಲದೆ ಕಾಡುಪ್ರಾಣಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಜಾತ್ರೆ ವೇಳೆ ಗಸ್ತು ತಿರುಬೇಕು’ ಎಂದು ಸೂಚಿಸಿದರು.
ಮುಜರಾಯಿ ಇಲಾಖೆ ಇಒ ರಘು, ಶೋಭಾ, ಚಿಕ್ಕದೇವಮ್ಮನ ಬೆಟ್ಟದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಮಹದೇವಸ್ವಾಮಿ, ಇನ್‌ಸ್ಪೆಕ್ಟರ್ ಗೋಪಾಲ್, ಇಮ್ರಾನ್, ಶಿರಸ್ತೇದಾರ್ ಮನೋಹರ್, ಪಿಡಿಒ ಎ.ಜಿ.ಮಹೇಂದ್ರಸ್ವಾಮಿ ಹಾಗೂ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.