ADVERTISEMENT

ಮೈಸೂರು: ಚಿತ್ರಸಂತೆಯೊಳಗೆ ಸಂತಸ; ಹಸಿರು ಸಂತೆಯಲ್ಲಿ ನೀರಸ

ಜಮಾಯಿಸದ ಜನಜಂಗುಳಿ; ಓಪನ್ ಸ್ಟ್ರೀಟ್‌ ಫೆಸ್ಟಿವಲ್‌ನ ಕನವರಿಕೆಯಲ್ಲೇ ಮುಗಿದ ಸಂತೆಗಳು

ಡಿ.ಬಿ, ನಾಗರಾಜ
Published 5 ಅಕ್ಟೋಬರ್ 2019, 19:45 IST
Last Updated 5 ಅಕ್ಟೋಬರ್ 2019, 19:45 IST
ಫೇಸ್‌ ಪೇಂಟಿಂಗ್‌
ಫೇಸ್‌ ಪೇಂಟಿಂಗ್‌   

ಮೈಸೂರು: ರಸ್ತೆಯ ಒಂದು ಬದಿ ಜನಜಂಗುಳಿ... ಮತ್ತೊಂದು ಬದಿಯಲ್ಲಿ ಖಾಲಿ ಖಾಲಿ... ಒಂದೆಡೆ ಕಲರವ. ಎಲ್ಲ ಮಳಿಗೆಗಳು ಭರ್ತಿ. ಮತ್ತೊಂದೆಡೆ ನೀರಸ... ಅರ್ಧಕ್ಕರ್ಧ ಮಳಿಗೆಗಳು ಆರಂಭಗೊಳ್ಳಲೇ ಇಲ್ಲ...

ನಗರದ ಕೃಷ್ಣರಾಜ ಬೂಲ್‍ವಾರ್ಡ್ ರಸ್ತೆಯಲ್ಲಿ ಶನಿವಾರ ನಡೆದ ಚಿತ್ರಸಂತೆ–ಹಸಿರು ಸಂತೆಯ ಚಿತ್ರಣವಿದು.

ಚಿತ್ರಸಂತೆಯಲ್ಲಿ ಭಾಗಿಯಾದವರಿಗೆ ಭರ್ಜರಿ ಸ್ಪಂದನೆ. ಮೆಚ್ಚುಗೆಯ ಮಾತು. ಹಸಿರು ಸಂತೆಗೆ ನಿರೀಕ್ಷೆಯ ಬೆಂಬಲವಿಲ್ಲ. ಭಾಗವಹಿಸುವಿಕೆಯೂ ಅಷ್ಟಕ್ಕಷ್ಟೇ. ಒಂದೇ ರಸ್ತೆಯಲ್ಲಿನ ವೈರುಧ್ಯವಿದು.

ADVERTISEMENT

ಹಿಂದಿನ ದಸರೆಯಲ್ಲಿನ ಓಪನ್‌ಸ್ಟ್ರೀಟ್‌ ಫೆಸ್ಟಿವಲ್‌ನ ಕನವರಿಕೆ ಸಂತೆಯುದ್ದಕ್ಕೂ ಕೇಳಿ ಬಂತು. ಪರ–ವಿರೋಧವೂ ವ್ಯಕ್ತವಾಯ್ತು. ಈ ಬಾರಿಯೂ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ನಡೆದಿದ್ದರೆ; ಮುಂಜಾನೆಯಿಂದ ರಾತ್ರಿವರೆಗೂ ಪುರುಸೊತ್ತಿಲ್ಲದ ಕೆಲಸ ನಮ್ಮದಾಗಿತ್ತು. ಈ ಬಾರಿಯೂ ಸಾಕಷ್ಟು ಕೆಲಸವಿದೆ. ಆದರೆ ಬಿಡುವು ಸಿಕ್ಕಿತ್ತು ಎಂಬುದು ಕಲಾವಿದರ ಮಾತು.

‘ಚಿತ್ರಸಂತೆ ಚೆನ್ನಾಗಿತ್ತು. ಹಸಿರು ಸಂತೆಯತ್ತ ಸುಳಿಯುವವರೇ ಇಲ್ಲವಾಗಿತ್ತು. ಪ್ರಚಾರವೂ ಕಡಿಮೆಯಾಯ್ತು. ಕಾಟಾಚಾರಕ್ಕೆ ಆಯೋಜಿಸಿದ್ದಾರೆ ಎಂಬಂತಿತ್ತು ಇಲ್ಲಿನ ಚಿತ್ರಣ. ಹಿಂದಿನ ಬಾರಿಯ ಕಹಿ ಘಟನೆಗಳು ಮರುಕಳಿಸದಂತೆ ಓಪನ್‌ಸ್ಟ್ರೀಟ್‌ ಫೆಸ್ಟ್‌ ಆಯೋಜಿಸಿದ್ದರೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸುತ್ತಿದ್ದರು. ಖರೀದಿಯೂ ಬಿರುಸಿನಿಂದ ನಡೆಯುತ್ತಿತ್ತು’ ಎಂದು ಶ್ರೀನಿವಾಸ್, ಅಭಿಷೇಕ್, ರಮೇಶ್‌ ಪೂಜಾರ್ ಅಸಮಾಧಾನ ವ್ಯಕ್ತಪಡಿಸಿದರು.

‘ಎಂಟು ಪೇಂಟಿಂಗ್‌ಗಳನ್ನಷ್ಟೇ ತಂದಿದ್ದೆ. ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಯ್ತು. ಸಾಕಷ್ಟು ಆರ್ಡರ್ ಸಿಕ್ಕಿವೆ. ವಿಶ್ವಾಮಿತ್ರ–ಮೇನಕೆಯ ಪೇಂಟಿಂಗ್‌ನ್ನು ತುಮಕೂರಿನ ಪ್ರಕಾಶ್ ಎಂಬುವವರು ₹ 12,000 ಕೊಟ್ಟು ಖರೀದಿಸಿದರು’ ಎಂದು ಕಲಾವಿದ ಚನ್ನೇಗೌಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಈ ಹಿಂದೆ ಮೂರು ಬಾರಿ ಬಂದಿದ್ದೆ. ಆಗ ಬಿಡುವಿಲ್ಲದ ಕೆಲಸ. ಈ ಬಾರಿ ಪೂರ್ತಿ ಡಲ್‌. ಸಂಜೆ 5 ಗಂಟೆಗೆ ಮುಗಿದಿದ್ದು ನಿರಾಸೆ ಮೂಡಿಸಿತು’ ಎಂದು ಬೆಂಗಳೂರಿನ ಚಿತ್ರಕಲಾ ಪರಿಷತ್‌ನ ವಿದ್ಯಾರ್ಥಿ, ಸ್ಥಳದಲ್ಲೇ ಪೆನ್ಸಿಲ್ ಸ್ಕೆಚ್‌ ಮೂಲಕ ಚಿತ್ರ ಬಿಡಿಸುವ ಯತೀಶ್ ಬೇಸರ ವ್ಯಕ್ತಪಡಿಸಿದರು.

‘ಮುಖಕ್ಕೆ ಬಣ್ಣ ಬಳಿಯುವಿಕೆ ತಂದೆಯಿಂದ ಬಳುವಳಿಯಾಗಿ ಬಂದಿದೆ. ಉಡುಪಿ, ಮಂಗಳೂರು, ಬೆಂಗಳೂರು, ಆಂಧ್ರದ ವಿವಿಧೆಡೆಯೂ ತೆರಳಿ ಕಲೆ ಪ್ರದರ್ಶಿಸಿರುವೆ. ಸಿಕ್ಕ ಅವಕಾಶ ತಪ್ಪಿಸಿಕೊಂಡಿಲ್ಲ. ನಾನೊಬ್ಬ ಎಂಎನ್‌ಸಿ ಬ್ಯಾಂಕ್‌ ಉದ್ಯೋಗಿ. ನಮ್ಮೂರಿನ ಸಂತೆಯಲ್ಲಿ ಭಾಗಿಯಾಗಿದ್ದೇನೆ. ಆರಂಭದಿಂದಲೂ ಜನ ಹುಡುಕಿ ಬರುತ್ತಿದ್ದಾರೆ. ಓಪನ್‌ಸ್ಟ್ರೀಟ್‌ ಫೆಸ್ಟ್‌ ಬೇಕಿತ್ತು. ಜನ ಜಮಾಯಿಸುತ್ತಿದ್ದರು’ ಎಂದು ಅರ್ಜುನ್‌ ಆಚಾರ್ಯ ತಿಳಿಸಿದರು.

‘ಹಿಂದಿನ ಬಾರಿ ಖರೀದಿ ಅಷ್ಟಕ್ಕಷ್ಟೇ ಇತ್ತು. ಈ ಬಾರಿ ಬೆಳಿಗ್ಗೆಯಿಂದಲೇ ಜನದಟ್ಟಣೆ. ವಿಚಾರಣೆ ಸಾಕಷ್ಟಿದೆ. ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮಾರಾಟವೂ ಹೆಚ್ಚಿದೆ’ ಎಂದು ಕಲಾವಿದ ಜಿ.ಎಸ್.ಬಾಬು ಹೇಳಿದರು.

ಜಾಗೃತಿ ಮೂಡಿಸಿದರು; ಉಚಿತವಾಗಿ ಗಿಡ ಕೊಟ್ಟರು‌
ಚಿತ್ರಸಂತೆಯಲ್ಲಿ ಪ್ಲಾಸ್ಟಿಕ್‌ನಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ನಡೆಯಿತು. ಬೆಲ್‌ಮಾರ್ಕ್‌ ಅಗರಬತ್ತಿ ಹಾಗೂ ಲೆಟ್ಸ್‌ ಡೂ ಇಟ್‌ ಮೈಸೂರು ಸಂಘಟನೆಗಳು ಜಂಟಿಯಾಗಿ 800 ಬಟ್ಟೆ ಬ್ಯಾಗ್‌ಗಳನ್ನು ಸಂತೆಗೆ ಬಂದವರಿಗೆ ಉಚಿತವಾಗಿ ಕೊಟ್ಟರು. ಸ್ಥಳದಲ್ಲೇ ಈ ಬ್ಯಾಗ್‌ಗಳಿಗೆ ತಮಗೆ ಬೇಕಾದ ಚಿತ್ರಕಲೆ ಬಿಡಿಸಿಕೊಳ್ಳುವ ಅವಕಾಶ ಕಲ್ಪಿಸಿದ್ದು, ಆಸಕ್ತರು ಮುಗಿಬಿದ್ದ ಚಿತ್ರಣ ಗೋಚರಿಸಿತು.

ಕ್ಲೀನ್ ಮೈಸೂರು ಸಂಘಟನೆ ವತಿಯಿಂದ 250ಕ್ಕೂ ಹೆಚ್ಚು ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು. ಹಸಿರು ಸಂತೆಯಲ್ಲಿ ಸಾವಯವ ತರಕಾರಿ, ಸಿರಿಧಾನ್ಯ, ವಿದೇಶಿ ತರಕಾರಿಗಳಿದ್ದು ಗಮನ ಸೆಳೆದವು.

ಜಾಗೃತಿ ಮೂಡಿಸಿದರು; ಉಚಿತವಾಗಿ ಗಿಡ ಕೊಟ್ಟರು‌
ಚಿತ್ರಸಂತೆಯಲ್ಲಿ ಪ್ಲಾಸ್ಟಿಕ್‌ನಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ನಡೆಯಿತು. ಬೆಲ್‌ಮಾರ್ಕ್‌ ಅಗರಬತ್ತಿ ಹಾಗೂ ಲೆಟ್ಸ್‌ ಡೂ ಇಟ್‌ ಮೈಸೂರು ಸಂಘಟನೆಗಳು ಜಂಟಿಯಾಗಿ 800 ಬಟ್ಟೆ ಬ್ಯಾಗ್‌ಗಳನ್ನು ಸಂತೆಗೆ ಬಂದವರಿಗೆ ಉಚಿತವಾಗಿ ಕೊಟ್ಟರು. ಸ್ಥಳದಲ್ಲೇ ಈ ಬ್ಯಾಗ್‌ಗಳಿಗೆ ತಮಗೆ ಬೇಕಾದ ಚಿತ್ರಕಲೆ ಬಿಡಿಸಿಕೊಳ್ಳುವ ಅವಕಾಶ ಕಲ್ಪಿಸಿದ್ದು, ಆಸಕ್ತರು ಮುಗಿಬಿದ್ದ ಚಿತ್ರಣ ಗೋಚರಿಸಿತು.

ಕ್ಲೀನ್ ಮೈಸೂರು ಸಂಘಟನೆ ವತಿಯಿಂದ 250ಕ್ಕೂ ಹೆಚ್ಚು ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು.

ಹಸಿರು ಸಂತೆಯಲ್ಲಿ ಸಾವಯವ ತರಕಾರಿ, ಸಿರಿಧಾನ್ಯ, ವಿದೇಶಿ ತರಕಾರಿಗಳಿದ್ದು ಗಮನ ಸೆಳೆದವು.

*
ಪೆನ್ಸಿಲ್‌ ಲೆಡ್‌ನಲ್ಲಿ ಮೂಡಿ ಬಂದ ಕಲಾಕೃತಿ ಕುತೂಹಲ ಕೆರಳಿಸಿತು. ಅತ್ಯದ್ಭುತ ಕಲೆ. ಇದನ್ನು ನೋಡಿ ಚಿತ್ರ ಸಂತೆಗೆ ಬಂದಿದ್ದು ಸಾರ್ಥಕವಾಯ್ತು ಎನಿಸಿತು.
-ಶೋಭಾ ಮಹದೇವ್, ಶಿಕ್ಷಕಿ

*
ಸೂಕ್ಷ್ಮ ಕಲೆಯಿದು. ಮಾರಾಟಕ್ಕೆಂದು ಮಾಡಲ್ಲ. ಮನಸ್ಸಿನ ಖುಷಿಗಾಗಿ ಮಾಡುವೆ. ಒಂದು ಕಲಾಕೃತಿ ರಚಿಸಲು ಕನಿಷ್ಠ ಎರಡು ತಾಸು ಸಮಯ ಬೇಕಿದೆ.
-ಎಸ್.ನಂಜುಂಡಸ್ವಾಮಿ, ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.